ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ, ಗ್ಯಾರಂಟಿ ಯೋಜನೆಗಳು ಸೇರಿದಂತೆ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕೆಂಬ ಕಾರ್ಯಕರ್ತರ ಛಲದಿಂದಾಗಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ, ಗ್ಯಾರಂಟಿ ಯೋಜನೆಗಳು ಸೇರಿದಂತೆ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕೆಂಬ ಕಾರ್ಯಕರ್ತರ ಛಲದಿಂದಾಗಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಸಾಧಿಸಿದ ಹಿನ್ನೆಲೆ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೆಲುವಿಗಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು, ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಿದ್ದರಿಂದ ಪಕ್ಷದ ಅಭ್ಯರ್ಥಿಗಳಿಗೆ ಗೆಲುವಾಗಿದೆ ಎಂದು ತಿಳಿಸಿದರು.
ಶಿಗ್ಗಾಂವಿ, ಚನ್ನಪಟ್ಟಣದಲ್ಲಿ ನಾವು ಗೆಲ್ಲವುದಿಲ್ಲ ಸಂಡೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬಹುದು ಎಂದು ಮತದಾನೋತ್ತರ ಸಮೀಕ್ಷೆ, ಮುಖಂಡರ ಭಾವನೆ ಆಗಿತ್ತು. ಶಿಗ್ಗಾಂವಿಯಲ್ಲಿ ಪಕ್ಷ ಐದು ಬಾರಿ ಸೋಲಲು ನಾಯಕತ್ವದ ಕೊರತೆ ಇತ್ತು. ಆದರೆ ಸಚಿವ ಶಿವಾನಂದ ಪಾಟೀಲ, ನಾವು ಸೇರಿದಂತೆ ಅನೇಕರು ಹಿಂದು-ಮುಸ್ಲಿಂ ನಡುವಿನ ಅಂತರ ಹೋಗಲಾಡಿಸಿ, ಅಹಿಂದ ಮತಗಳನ್ನು ಒಗ್ಗೂಡಿಸಿದ್ದರಿಂದ ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಅನುಕೂಲವಾಯಿತು ಎಂದರು.
ಪ್ರತಿ ಚುನಾವಣೆಯಲ್ಲಿ ಧಾರ್ಮಿಕ ಭಾವನೆ ಮೇಲೆ ಬಿಜೆಪಿಯವರು ಚುನಾವಣೆ ಗೆಲ್ಲುತ್ತಿದ್ದರು. ಆದರೆ ಈ ಬಾರಿ ನಮ್ಮ ಕಾರ್ಯಕರ್ತರು ಅದಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವಾಗಿದೆ. ಚಿಕ್ಕೋಡಿಯಲ್ಲಿ ಗೆದ್ದ ಹಾಗೆ ಶಿಗ್ಗಾಂವಿಯನ್ನು ಗೆದ್ದಿದ್ದೇವೆ. ನಮ್ಮ ಚುನಾವಣೆ ಮಾಡಿದ ಹಾಗೆಯೇ ಮತ್ತೊಬ್ಬರ ಚುನಾವಣೆ ಮಾಡಬೇಕು. ಅಂದಾಗ ಮಾತ್ರ ಗೆಲುವು ಸಾಧ್ಯವಿದೆ. ಶಿಗ್ಗಾಂವಿ ಕ್ಷೇತ್ರದ ಉಸ್ತುವಾರಿಯಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದರಿಂದ ನನಗೂ ಡಬಲ್ ಪ್ರಮೋಶನ್ ಸಿಕ್ಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ.ಜೆ, ಮುಖಂಡರಾದ ಸಿದ್ದಿಕ ಅಂಕಲಗಿ, ಸೈಯದ್ ಮನ್ಸೂರ್, ರಾಜಾ ಸಲೀಂ, ಅರುಣ ಕಟಾಂಬಳೆ ಇದ್ದರುಇವಿಎಂನಲ್ಲೂ ಅಡ್ಜಸ್ಟ್ ಇದೆ ಎಂದ ಸಚಿವ ಜಾರಕಿಹೊಳಿ: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಆಘಾಡಿ ಒಕ್ಕೂಟಕ್ಕೆ ಸೋಲಿಗೆ ಇವಿಎಂ ಕಾರಣ. ಇವಿಎಂ ಮಷೀನ್ ಇರೋವರೆಗೂ ಎಲ್ಲಾ ಇದೇ ರೀತಿ ಆಗುತ್ತದೆ. ಇವಿಎಂ ಬಗ್ಗೆ ಸಾಕಷ್ಟು ಅನುಮಾನ ಇದೆ. ಸಾಕಷ್ಟು ಕಡೆಗಳಲ್ಲಿ ಇವುಗಳ ವಿಶ್ವಾಸಾರ್ಹತೆ ಬಗ್ಗೆ ಚರ್ಚೆ ಆಗುತ್ತಿದೆ. ಒಂದು ಕಡೆ ಕೊಡ್ತಾರೆ, ಇನ್ನೊಂದು ಕಡೆ ಕಸಿದುಕೊಳ್ತಾರೆ. ಜಮ್ಮು ನಮಗೆ ಕೊಟ್ಟರೂ, ಹರಿಯಾಣ ತೆಗೆದುಕೊಂಡ್ರು, ಈ ರೀತಿ ಗೀವ್ ಆ್ಯಂಡ್ ಟೇಕ್ ಪಾಲಿಸಿ ಮಾಡ್ತಿದ್ದಾರೆ. ಅವರಿಗೆ ಬೇಕಾದದ್ದನ್ನು ತೆಗೆದುಕೊಳ್ತಾರೆ, ಬೇಡದ್ದನ್ನ ಬಿಡ್ತಾರೆ. ಇವಿಎಂನಲ್ಲೂ ಅಡ್ಜಸ್ಟ್ ಇದೆ ಎಂದು ಅವರು ಗಂಭೀರ ಆರೋಪ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.