ಕಾನೂನು ಅರಿವು ಕಾರ್ಯಕ್ರಮ । ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ
ಕನ್ನಡಪ್ರಭ ವಾರ್ತೆ ಚಾಮರಾಜನಗರಮಕ್ಕಳ ಹಕ್ಕುಗಳ ರಕ್ಷಣೆ ಮಾಡಿ ಸಮಾಜದ ಉತ್ತಮ ಪ್ರಜೆಯನ್ನಾಗಿ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಮಕ್ಕಳ ಹಕ್ಕುಗಳ ರಕ್ಷಣೆಗೆ ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ತಿಳಿಸಿದರು.
ನಗರದ ಜೆ.ಎಸ್.ಎಸ್ ನಸಿಂಗ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯ, ಜೆ.ಎಸ್.ಎಸ್ ನಸಿಂಗ್ ಕಾಲೇಜು, ಬಿ.ಎಡ್ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ ಮತ್ತು ಮಾನವ ಕಳ್ಳ ಸಾಗಣಿಕೆ ತಡೆ ಕಾನೂನುಗಳ ಬಗ್ಗೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಲು ದೊರೆಯಬೇಕಾದ ಸವಲತ್ತುಗಳು, ಅವಕಾಶಗಳು, ಕಾನೂನು ಮಾನ್ಯತೆ ಪಡೆದ ಹಕ್ಕುಗಳನ್ನು ಮಕ್ಕಳಿಗೆ ನೀಡಿ ಅವುಗಳನ್ನು ರಕ್ಷಿಸಬೇಕಾದದ್ದು ಪ್ರತಿಯೊಬ್ಬರ ಹೊಣೆಯಾಗಿದೆ. ಪ್ರಸ್ತುತ ಮಕ್ಕಳ ಮೇಲೆ ಅನೇಕ ರೀತಿಯಲ್ಲಿ ದೌರ್ಜನ್ಯ ನಡೆಯುತ್ತಿರುವುದು ಕಂಡು ಬಂದಿದೆ. ಇದು ಸಮಾಜದಲ್ಲಿ ಮಕ್ಕಳ ಬಗ್ಗೆ ಇರುವ ನಿರ್ಲಕ್ಷ್ಯವನ್ನು ತೋರುತ್ತದೆ. ೧೮ ವರ್ಷದೊಳಗಿನ ಮಕ್ಕಳ ರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಮಕ್ಕಳಿಗೆ ದೌರ್ಜನ್ಯ ನೀಡಿದರೆ ಫೋಸ್ಕೋ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಮಕ್ಕಳಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಮಕ್ಕಳು ಮನೆಗಳಲ್ಲಿ ತಂದೆ ತಾಯಿ ಹಿರಿಯರ ಮಾತಿನಂತೆ ನಡೆದರೆ ಯಾರೂ ದಾರಿ ತಪ್ಪುವುದಿಲ್ಲ. ಗುರು ಹಿರಿಯರಿಗೆ ಗೌರವ ನೀಡಬೇಕು. ದೇಶದಲ್ಲಿ ಹಲವಾರು ಕಾನೂನುಗಳು ಮಕ್ಕಳ ರಕ್ಷಣೆಗೆ ಜಾರಿಯಲ್ಲಿದ್ದು, ಅದರ ಬಗ್ಗೆ ಮಾಹಿತಿ ಪಡೆದು ದೌರ್ಜನ್ಯದಿಂದ ಮುಕ್ತರಾಗಬೇಕು. ಬಾಲ್ಯ ವಿವಾಹ ಮಕ್ಕಳ ಮೇಲೆ ದೌರ್ಜನ್ಯವಾದರೆ ಮಕ್ಕಳ ಸಹಾಯವಾಣಿ ೧೦೯೮ ಕರೆ ಮಾಡಿ ಮಾಹಿತಿ ನೀಡಬೇಕು. ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಬೇರೆ ಯಾವುದೇ ಆಮಿಷಕ್ಕೆ ಬಲಿಯಾಗದೆ ಉತ್ತಮ ಶಿಕ್ಷಣ ಪಡೆಯಬೇಕು ಎಂದು ತಿಳಿಸಿದರು.ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಮಾತನಾಡಿ, ಬಾಲ ನ್ಯಾಯ ಕಾಯ್ದೆ ಪ್ರಕಾರ ೧೮ ವರ್ಷ ಒಳಗಿನ ಎಲ್ಲರೂ ಮಕ್ಕಳು. ಇಂತಹ ಮಕ್ಕಳಿಗೆ ಬದುಕಲು ಒಳ್ಳೆಯ ವಾತಾವರಣದ ಅವಶ್ಯಕತೆ ಇದೆ. ಕಾರಣ ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಅನೇಕ ರೀತಿಯ ದೌರ್ಜನ್ಯಗಳು ನಡೆಯುತ್ತಿವೆ. ಅವರ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.
ಮಕ್ಕಳ ಹಕ್ಕುಗಳಾದ ೬ ರಿಂದ ೧೪ ವರ್ಷಗಳ ವರೆಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದು, ಮಕ್ಕಳು ತಮಗೆ ಅನಿಸಿದ ಭಾವನೆಯನ್ನು ಮುಕ್ತವಾಗಿ ವ್ಯಕ್ತಪಡಿಸುವುದು, ತಮಗೆ ಸಂಬಂಧಿಸಿದ ವಿಷಯದ ಮಾಹಿತಿಯನ್ನು ಪಡೆಯುವುದು, ಎಲ್ಲಾ ಮಕ್ಕಳು ಸದೃಢ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರವನ್ನು ಪಡೆಯುವುದು, ಬದುಕುಳಿಯುವ ಹಕ್ಕನ್ನು ಸಂವಿಧಾನದ ಕಾನೂನು ಮಕ್ಕಳಿಗೆ ನೀಡಿದೆ. ಇದರ ಉಲ್ಲಂಘನೆಯಾಗದಂತೆ ನೋಡಿಕೊಂಡು ಮಕ್ಕಳ ಸಮಗ್ರ ಬೆಳವಣಿಗೆಯಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸರಸ್ವತಿ ಪೋಕ್ಸೋ ಕಾಯ್ದೆ ಬಗ್ಗೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.
ಬಾಲ ನ್ಯಾಯ ಮಂಡಳಿ ಸದಸ್ಯ ಟಿ.ಜೆ.ಸುರೇಶ್, ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯ ಬಿಎಡ್ ಕಾಲೇಜಿನ ಪ್ರಾಂಶುಪಾಲ ಬಸವಣ್ಣ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಜಿ. ವಿನಯಕುಮಾರ್, ಅರಕ್ಷಕ ನಿರೀಕ್ಷಕ ಮಂಜುನಾಥ್, ಮಕ್ಕಳ ರಕ್ಷಣಾ ಅಧಿಕಾರಿ ಚೆಲುವರಾಜು, ತಾಲ್ಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್, ನರ್ಸಿಂಗ್ ಕಾಲೇಜಿನ ಉಪನ್ಯಾಸಕಿ ಮಧು, ಮಕ್ಕಳ ರಕ್ಷಣಾ ಘಟಕದ ಮೇಘ, ಜಯಮ್ಮ, ಕುಮಾರ್, ಅಶೋಕ್, ಪುಟ್ಟರಾಜು, ಮಕ್ಕಳ ಸಹಾಯವಾಣಿಯ ಮಹೇಶ್, ಸಿದ್ದರಾಜು, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.