ರಾಮನಗರ: ಭೂ ಸ್ವಾಧೀನ ವಿರುದ್ಧ ಮಾತ್ರವಲ್ಲ ಯಾವುದೇ ಹೋರಾಟಗಳನ್ನು ಮಹಾತ್ಮಗಾಂಧೀಜಿರವರು ತೋರಿಸಿಕೊಟ್ಟ ಸತ್ಯ ಮತ್ತು ಅಹಿಂಸಾ ಮಾರ್ಗದಲ್ಲಿ ನಡೆಸಿದಾಗ ಮಾತ್ರ ಜಯ ಸಿಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಹೇಳಿದರು.
ಗಾಂಧೀಜಿ, ಅಂಬೇಡ್ಕರ್ ಸೇರಿದಂತೆ ಹಿಂದಿನ ಸಾಮಾಜಿಕ ಹೋರಾಟಗಾರರೆಲ್ಲರೂ ನಮಗೆ ಪ್ರೇರಣೆಯಾಗಿದ್ದಾರೆ. ಪ್ರಸ್ತುತ ದೇವನಹಳ್ಳಿ, ಚನ್ನರಾಯಪಟ್ಟಣ, ಬಿಡದಿ ಮುಂತಾದ ಕಡೆಯಲ್ಲಿ ನಡೆಯುತ್ತಿರುವ ಭೂಸ್ವಾಧೀನ ವಿರುದ್ಧದ ಹೋರಾಟ 2ನೇ ಸ್ವಾತಂತ್ರ್ಯ ಸಂಗ್ರಾಮದ ಮಾದರಿಯಲ್ಲಿದೆ. ರೈತರ ಕೃಷಿಭೂಮಿಯನ್ನು ಉಳಿಸಿಕೊಳ್ಳಲು ಎಲ್ಲರೂ ಪಣತೊಟ್ಟು ನಿಲ್ಲಬೇಕಿದೆ ಎಂದ ಅವರು ಸರ್ಕಾರಿ ಭೂಮಿ ಕಬಳಿಕೆ ಹಾಗೂ ಭ್ರಷ್ಟಾಚಾರದ ವಿರುದ್ಧ ನಡೆಸಿ ಯಶಸ್ವಿಯಾದ ತಮ್ಮ ಹೋರಾಟಗಳ ಬಗ್ಗೆ ಮೆಲುಕು ಹಾಕಿದರು. ಇದೀಗ ಪಶ್ಚಿಮಘಟ್ಟ ಉಳಿಸಿ ಎಂಬ ಹೋರಾಟವನ್ನು ಕೈಗೆತ್ತಿಕೊಂಡಿರುವುದಾಗಿ ತಿಳಿಸಿದರು.
ದೆಹಲಿಯ ಯುವಕರ ಹೋರಾಟ ದೇಶದ ಗಮನ ಸೆಳೆದಿದ್ದು ಆ ಮಾರ್ಗದಲ್ಲಿ ಯುವಕರು ಸಾಗಬೇಕಿದೆ. ನಿಮ್ಮ ಹೋರಾಟ ಯಶಸ್ವಿಯಾಗುವ ವಿಶ್ವಾಸವಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡರ ವರದಿಯ ನಿರೀಕ್ಷೆಯಲ್ಲಿದ್ದೇವೆ. ನಂತರ ಕಾನೂನು ಹೋರಾಟಕ್ಕೆ ತಾವು ಸಾಥ್ ನೀಡುವುದಾಗಿ ಹೀರೆಮಠ್ ಭರವಸೆ ನೀಡಿದರು.ಮಣ್ಣಿನ ಮಕ್ಕಳೆಂದು ಹೇಳಿಕೊಂಡು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದವರು ಸರ್ಕಾರಿ ಗೋಮಾಳ ಮತ್ತು ದಲಿತರ ಜಮೀನುಗಳನ್ನು ಕಬಳಿಕೆ ಮಾಡಿದ್ದಾರೆ. ಇಲ್ಲಿನ ಕೇತಗಾನಹಳ್ಳಿಯಲ್ಲಿಯೇ ಅವರ ಕುಟುಂಬದವರು ಜಮೀನು ಕಬಳಿಕೆ ಮಾಡಿರುವುದರ ವಿರುದ್ಧ ನಾನು ಕಾನೂನು ಹೋರಾಟ ನಡೆಸುತ್ತಿದ್ದೇನೆ. ನನ್ನ ಮೇಲೆ ದೌರ್ಜನ್ಯ ಎಸಗಲು ಪ್ರಯತ್ನಿಸಿದರೂ ನಾನು ಮಾತ್ರ ಅಹಿಂಸಾ ಮಾರ್ಗದಲ್ಲಿ ಹೋರಾಟ ಮುಂದುವರೆಸಿದ್ದೇನೆ ಎಂದು ತಿಳಿಸಿದರು.
ಕಾರ್ಮಿಕ ಸಂಘಟನೆಯ ಮುಖಂಡ ಕೆ.ವಿ.ಭಟ್ ಮಾತನಾಡಿ, ಕೆಐಎಡಿಬಿ ವತಿಯಿಂದ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಎಕರೆ ಭೂಮಿ ಸ್ವಾಧೀನ ಮಾಡಿಕೊಂಡಿದೆ. ಅಲ್ಲಿ ಖಾಲಿಯಿರುವ ಭೂಮಿಯಲ್ಲಿ ಸರ್ಕಾರದವರು ಟೌನ್ ಶಿಪ್ ನಿರ್ಮಾಣ ಮಾಡಲಿ. ಫಲವತ್ತಾದ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಪ್ರಶ್ನಿಸಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಕೋಟ್..............
-ಎಚ್.ಪಿ.ಶಿವಪ್ರಕಾಶ್, ರೈತ ಮುಖಂಡರು, ಎಐಕೆಕೆಎಂಎಸ್
ಟೌನ್ ಶಿಪ್ ಭಾದಿತ ಪ್ರದೇಶದ ರೈತರ ಅಭಿಪ್ರಾಯ ಸಂಗ್ರಹಣೆಗೆ ಎರಡು ತಿಂಗಳಲ್ಲಿ ಪ್ರತ್ಯೇಕ ಸಮಿತಿ ರಚಿಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅದರಂತೆ ಶೀಘ್ರ ಸಮಿತಿ ರಚನೆಗೆ ಮುಂದಾಗಬೇಕು. ರೈತರ ಬದುಕಿನ ಜತೆಗೆ ಚಲ್ಲಾಟವಾಡುವುದನ್ನು ಬಿಟ್ಟು ಬೀದಿಗೆ ಬೀಳುವ ಸಾವಿರಾರು ರೈತಕುಂಟುಂಬಗಳ ಬಗ್ಗೆ ಸರ್ಕಾರ ಕಾಳಜಿವಹಿಸಬೇಕು.
1ಕೆಆರ್ ಎಂಎನ್ 3.ಜೆಪಿಜಿ