ಉಡುಪಿ: ಮೂರು ದಿನಗಳ ಹಿಂದೆ ಇಲ್ಲಿನ ಮಲ್ಪೆ ಕಡಲ ತೀರದಲ್ಲಿ ಇಸ್ಕಾನ್‌ನ ಕೃಷ್ಣ ಭಕ್ತರಿಗೆ ಕೃಷ್ಣನ ವಿಗ್ರಹ ಸಿಕ್ಕಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.800 ವರ್ಷಗಳ ಹಿಂದೆ ಇದೇ ಮಲ್ಪೆ ತೀರದಲ್ಲಿ ಮಧ್ವಾಚಾರ್ಯರಿಗೆ ಕೃಷ್ಣನ ವಿಗ್ರಹ ಸಿಕ್ಕಿ ಅದನ್ನವರು ಉಡುಪಿಯಲ್ಲಿ ಪ್ರತಿಷ್ಠಾಪಿಸಿದ ಪವಾಡದಂತೆ ಈ ಘಟನೆ ಕೂಡ ಇನ್ನೊಂದು ಪವಾಡ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ವರ್ಣನೆ ಮಾಡಲಾಗುತ್ತಿದೆ.ಆದರೆ ವಾಸ್ತವದಲ್ಲಿ ಇಸ್ಕಾನ್‌ನ ಕೃಷ್ಣ ಭಕ್ತರಿಗೆ ಕಡಲತೀರದಲ್ಲಿ ಸಿಕ್ಕಿದ್ದು ಕೃಷ್ಣನ ವಿಗ್ರಹವಲ್ಲ, ಅದು ಕರಾವಳಿ ಭಾಗದ ಯಾವುದೇ ದೇವಾಲಯಗಳ ಬಾಗಿಲಲ್ಲಿ ಇರುವ ಜಯ ವಿಜಯ ಎಂಬ ದ್ವಾರಪಾಲಕರಲ್ಲೊಬ್ಬರದ್ದು.ಉಡುಪಿ ಕೃಷ್ಣಮಠದಲ್ಲಿ ಇಸ್ಕಾನ್ ವತಿಯಿಂದ ಶ್ರೀಕೃಷ್ಣ ಸಮರ್ಪಣಾ ಎಂಬ ಕಾರ್ಯಕ್ರಮ ಎರಡು ದಿನಗಳ ಹಿಂದೆ ನಡೆದಿತ್ತು, ಇದರಲ್ಲಿ ಭಾಗವಹಿಸಲು ಇಸ್ಕಾನ್‌ನ ನೂರಾರು ಭಕ್ತರು ಬಂದಿದ್ದರು. ಈ ಸಂದರ್ಭ ಅವರು ಮಲ್ಪೆ ಕಡಲ ತೀರಕ್ಕೆ ಹೋಗಿದ್ದರು. ಅಲ್ಲಿ ವಿಹಾರ ನಡೆಸುತಿದ್ದಾಗ ಮರಳಿನ ದಂಡೆ ಮೇಲೆ ಕಪ್ಪುಕಲ್ಲಿನ ಸುಮಾರು 2 ಅಡಿ ಎತ್ತರದ ವಿಗ್ರಹ ಕಾಣಸಿಕ್ಕಿದೆ. ಅದನ್ನು ಕಂಡು ಭಕ್ತಿಯಿಂದ ಎತ್ತಿಕೊಂಡು ಕುಣಿದು ಸಂಭ್ರಮಿಸಿದ್ದಾರೆ, ಫೋಟೋ ವಿಡಿಯೋ ತೆಗೆಸಿಕೊಂಡಿದ್ದಾರೆ, ಚತುರ್ಭುಜ ಹೊಂದಿರುವ ಈ ವಿಗ್ರಹ ನೋಡುವುದಕ್ಕೆ ವಿಷ್ಣು ಅಥವಾ ಕೃಷ್ಣನ ವಿಗ್ರಹದಂತೆ ಕಾಣುತ್ತದೆ. ಅದನ್ನೇ ಇಸ್ಕಾನ್ ಭಕ್ತರು ತಮಗೆ ಮಲ್ಪೆ ತೀರದಲ್ಲಿ ಕೃಷ್ಣನ ವಿಗ್ರಹ ಸಿಕ್ಕಿದೆ ಎಂದು ಭಕ್ತಿಯಿಂದ ಎತ್ತಿಕೊಂಡು ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ.ನಂತರ ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣವನ್ನು ಸೇರಿ ಸದ್ದು ಮಾಡುತ್ತಿದೆ. ಒಂದೆಡೆ ಅದೊಂದು ಕೃಷ್ಣನ ವಿಗ್ರಹ, ಪವಾಡ ಎಂದೆಲ್ಲ ಬಿಂಬಿಸಲಾಗುತ್ತಿದೆ.