ನರೇಗ ಯೋಜನೆಯಿಂದ ಗಾಂಧೀಜಿ ಹೆಸರನ್ನು ತೆಗೆದುಹಾಕಿರುವುದು ಇಡೀ ದೇಶಕ್ಕೆ ಮಾಡಿದ ದೊಡ್ಡ ಅಪಮಾನ. ಇದನ್ನು ವಿರೋಧಿಸಿ, ರಾಜ್ಯಕ್ಕೆ ಯಾರೇ ಕೇಂದ್ರ ಸಚಿವರು ಬಂದರೂ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ವಿಧಾನ ಪರಿಷತ್‌ ಶಾಸಕ ಐವನ್‌ ಡಿಸೋಜ ಹೇಳಿದ್ದಾರೆ.

ಮಂಗಳೂರು: ಕೇಂದ್ರ ಬಿಜೆಪಿ ಸರ್ಕಾರವು ನರೇಗ ಯೋಜನೆಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೆಸರನ್ನು ತೆಗೆದುಹಾಕಿರುವುದು ಇಡೀ ದೇಶಕ್ಕೆ ಮಾಡಿದ ದೊಡ್ಡ ಅಪಮಾನ. ಇದನ್ನು ವಿರೋಧಿಸಿ, ರಾಜ್ಯಕ್ಕೆ ಯಾರೇ ಕೇಂದ್ರ ಸಚಿವರು ಬಂದರೂ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ವಿಧಾನ ಪರಿಷತ್‌ ಶಾಸಕ ಐವನ್‌ ಡಿಸೋಜ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಳಮಟ್ಟದಿಂದ ಜನರ ಅಭಿವೃದ್ಧಿಗೆ ನೆರವಾದ ನರೇಗ ಯೋಜನೆಗೆ ತಿದ್ದುಪಡಿ ಮಾಡಿದ್ದಲ್ಲದೆ ಗಾಂಧೀಜಿ ಹೆಸರನ್ನೇ ತೆಗೆದು ಹಾಕಿರುವುದು ಒಕ್ಕೂಟ ವ್ಯವಸ್ಥೆಗೆ ವಿರುದ್ಧ. ಯೋಜನೆಗೆ ಮರಳಿ ಗಾಂಧೀಜಿ ಹೆಸರನ್ನಿಡಬೇಕು ಎಂದು ಆಗ್ರಹಿಸಿದರು.

ದ್ವೇಷದ ರಾಜಕಾರಣ:

ಕೇಂದ್ರ ಬಿಜೆಪಿ ಸರ್ಕಾರದ ದ್ವೇಷದ ರಾಜಕಾರಣಕ್ಕೆ ಸ್ಪಷ್ಟ ಉದಾಹರಣೆ ಇದು. ಈ ಮೂಲಕ ದೇಶದ 135 ಕೋಟಿ ಜನರಿಗೆ ಮಾಡಿದ ಅವಮಾನ ಮಾಡಿದ್ದಾರೆ. ನರೇಗ ಅಡಿಯಲ್ಲಿ ಹಿಂದೆ 100 ದಿನ ಇದ್ದ ಉದ್ಯೋಗದ ದಿನಗಳನ್ನು 25 ದಿನ ಏರಿಕೆ ಮಾಡಿದ್ದಕ್ಕೆ ಹೆಸರು ಬದಲಾವಣೆ ಮಾಡಬೇಕಾ ಎಂದು ಐವನ್‌ ಡಿಸೋಜ ಪ್ರಶ್ನಿಸಿದರು.

ಪೊಲೀಸ್‌ ಠಾಣೆ ಮೇಲ್ದರ್ಜೆಗೆ ಒತ್ತಾಯ:

ಈ ಬಾರಿಯ ಅಧಿವೇಶನದಲ್ಲಿ ಅವಕಾಶವಿದ್ದ ಎಲ್ಲ 50 ಪ್ರಶ್ನೆಗಳನ್ನು ಕೇಳಿದ್ದು, ಸಂಬಂಧಪಟ್ಟ ಸಚಿವರಿಂದ ಉತ್ತರ ಪಡೆದಿದ್ದೇನೆ. ನಗರ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯ ಪೊಲೀಸ್‌ ಠಾಣೆಗಳಲ್ಲಿ ಅಧಿಕಾರಿ, ಸಿಬ್ಬಂದಿ ಕೊರತೆ ಬಗ್ಗೆ ಪ್ರಸ್ತಾಪಿಸಿದ್ದು, ಸಿಬ್ಬಂದಿ ಬಲ ಹೆಚ್ಚಿಸುವ ಪ್ರಸ್ತಾವನೆ ಪರಿಶೀಲನಾ ಹಂತದಲ್ಲಿರುವುದಾಗಿ ಗೃಹ ಸಚಿವರು ಉತ್ತರಿಸಿದ್ದಾರೆ. ದ.ಕ. ಸೂಕ್ಷ್ಮ ಜಿಲ್ಲೆಯಾಗಿರುವುದರಿಂದ ಇಲ್ಲಿನ ಎಲ್ಲ ಸ್ಟೇಶನ್‌ಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಐವನ್‌ ಒತ್ತಾಯಿಸಿದರು.

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿವಿಧ ಕಾಲೆಯಿಂದ ಬಳಲುವ 8 ಜನ ಅರ್ಜಿದಾರರಿಗೆ ಮಂಜೂರಾದ 4,41,118 ರು. ಪರಿಹಾರ ಧನದ ಚೆಕ್‌ನ್ನು ಇದೇ ಸಂದರ್ಭ ವಿತರಿಸಿದರು.

ಮುಖಂಡರಾದ ಶಶಿಧರ ಹೆಗ್ಡೆ, ಸತೀಶ್‌ ಪೆಂಗಲ್‌, ಭಾಸ್ಕರ ರಾವ್‌, ಇಮ್ರಾನ್‌ ಎ.ಆರ್‌., ನೀತು ಡಿಸೋಜ, ಚಂದ್ರಹಾಸ ಪೂಜಾರಿ ಇದ್ದರು