ಸಾಹಿತಿ, ರಂಗನಟ, ನಿರ್ದೇಶಕ ಪ್ರೊ. ರಾಮದಾಸ್ (86) ಮಂಗಳವಾರ ಉಡುಪಿಯ ದೊಡ್ಡಣಗುಡ್ಡೆಯಲ್ಲಿ ನಿಧನರಾದರು. ಅವರು ಉಡುಪಿಯ ಸಾಂಸ್ಕೃತಿಕ ರಂಗಕ್ಕೆ ಅಪಾರ ಕೊಡುಗೆ ನೀಡಿದ್ದರು

ಉಡುಪಿ: ಖ್ಯಾತ ಸಾಹಿತಿ, ರಂಗನಟ, ನಿರ್ದೇಶಕ ಪ್ರೊ. ರಾಮದಾಸ್ (86) ಮಂಗಳವಾರ ಉಡುಪಿಯ ದೊಡ್ಡಣಗುಡ್ಡೆಯಲ್ಲಿ ನಿಧನರಾದರು. ಅವರು ಉಡುಪಿಯ ಸಾಂಸ್ಕೃತಿಕ ರಂಗಕ್ಕೆ ಅಪಾರ ಕೊಡುಗೆ ನೀಡಿದ್ದರು. ಅವರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

ಎಸ್ಎಸ್ಎಲ್‌ಸಿ ಶಿಕ್ಷಣ ನಂತರ ಅವರು ಮೈಸೂರು ಇಂದ್ರಭವನ ಹೋಟೇಲಿನಲ್ಲಿ, ಇಂದ್ರ ಕೆಫೆಗಳಲ್ಲಿ ಕೆಲಸ ಮಾಡಿದ್ದರು. ಮಾಲೀಕರ ಔದಾರ್ಯದಿಂದ ಶಿಕ್ಷಣ ಮುಂದುವರಿಸಿ, ಬಿ.ಎ. ಪದವಿಯಲ್ಲಿ ಪ್ರಥಮ ಸ್ಥಾನ, ಎಂ.ಎ ಪದವಿಯಲ್ಲಿ ಉಪಕುಲಪತಿಗಳ ಚಿನ್ನದ ಪದಕ ಪಡೆದುಕೊಂಡಿದ್ದರು. ಆರಂಭದಲ್ಲಿ ಮೂಲ್ಕಿ ವಿಜಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಪ್ರಾರಂಭಿಸಿ, ನಂತರ ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾದರು.ಬಾಲ್ಯದಿಂದಲೂ ಹಳ್ಳಿ ನಾಟಕಗಳನ್ನು ನೋಡಿ, ಆಸಕ್ತಿ ಬೆಳೆಸಿಕೊಂಡು, ಮುಂದೆ ನಟನಾಗಿ, ನಿರ್ದೇಶಕರಾಗಿ ಬೆಳೆದರು. ತುಘಲಕ್, ಈಡಿಪಸ್, ಅಶ್ವತ್ಥಾಮನಾಗಿ ಪ್ರಸಿದ್ಧರಾಗಿದ್ದರು. ಕುಮಾರರಾಮ, ಬಂಜೆ, ಸಂಕ್ರಾಂತಿ, ಹರಕೆಯ ಕುರಿ, ತಲೆದಂಡ ನಾಟಕದಲ್ಲಿ ನಟ. ನಾಯಿಕತೆ, ತಲೆದಂಡ, ಜೋಕುಮಾರ ಸ್ವಾಮಿ ನಾಟಕಗಳ ನಿರ್ದೇಶನ ಮಾಡಿದರು.ಆಕಾಶವಾಣಿಯಲ್ಲಿ ನೂರಾರು ನಾಟಕ ಪ್ರಯೋಗಗಳನ್ನು ಮಾಡಿದರು.ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಪ್ರೊ. ರಾಮದಾಸ್ 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಉಡುಪಿ ರಂಗಭೂಮಿ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಪೆರ್ಲ ಕಾವ್ಯ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಫೆಲೋಷಿಪ್, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ಅವರಿಗೆ ಸಂದಿವೆ.