ಭಟ್ಕಳ: ಪಟ್ಟಣದ ಮುಗ್ದುಮ್ ಕಾಲನಿಯ ಗುಡ್ಡದಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಹಲವು ಜಾನುವಾರುಗಳ ಮೂಳೆಗಳು, ಅಸ್ಥಿಪಂಜರಗಳು ಬಿದ್ದಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಹಿಂದೂ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಗುಡ್ಡದಲ್ಲಿ ದೊಡ್ಡ ಪ್ರಮಾಣದಲ್ಲಿ ಗೋಹತ್ಯೆ ನಡೆದರೂ ಪೊಲೀಸ್ ಇಲಾಖೆ ಗಮನಿಸಿಲ್ಲವೇ? ಎಂದು ಪ್ರಶ್ನಿಸಿರುವ ಹಿಂದೂ ಜಾಗರಣ ವೇದಿಕೆಯ ಮುಖಂಡ ಜಯಂತ ನಾಯ್ಕ ಬೆಣಂದೂರು, ಘಟನೆ ಮುಚ್ಚಿ ಹೋಗುವ ಮುನ್ನ ಸೂಕ್ತ ತನಿಖೆ ನಡೆಸಿ ಎಂದು ಆಗ್ರಹಿಸಿದ್ದಾರೆ.
ಗುಡ್ಡದಲ್ಲಿ ಜಾನುವಾರುಗಳ ಮೂಳೆಗಳು ಮತ್ತು ಅಸ್ಥಿಪಂಜರದ ವಿಡಿಯೋ ವೈರಲ್ ಆದ ಕೆಲವೇ ಗಂಟೆಗಳಲ್ಲಿ ಸ್ಥಳದಲ್ಲಿ ಜೆಸಿಬಿ ಯಂತ್ರದ ಮೂಲಕ ಸ್ವಚ್ಛಗೊಳಿಸಿ ಘಟನೆಯನ್ನು ಸಂಪೂರ್ಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ನಿವೃತ್ತ ಸೈನಿಕ ಮತ್ತು ಬಿಜೆಪಿ ಮುಖಂಡ ಶ್ರೀಕಾಂತ ನಾಯ್ಕ ಆಸರಕೇರಿ ಆರೋಪಿಸಿದ್ದಾರೆ. ಈ ಪ್ರಕರಣವನ್ನು ಗಂಭೀವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.ಪಶ್ಚಿಮ ಘಟ್ಟಗಳ ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ಪ್ರತಿಕ್ರಿಯಿಸಿ, ಅರಣ್ಯ ಇಲಾಖೆಯ ಪ್ರದೇಶದಲ್ಲಿ ಮೂಳೆಗಳು ಪತ್ತೆಯಾದರೂ ಕ್ರಮಕೈಗೊಳ್ಳದಿರುವುದು ಅನುಮಾನಾಸ್ಪದವಾಗಿದೆ. ಇದರ ತ್ಯಾಜ್ಯ ಬಾವಿ ಸೇರಿ ಜಲಮೂಲ ಕಲುಷಿತಗೊಳ್ಳುತ್ತಿದೆ. ಉಸ್ತುವಾರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಚಿವರು ಗೋ ಹಂತಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.