ಕಾರವಾರ: ರಾಜ್ಯದಲ್ಲಿ ಪರಿಸರ, ವನ್ಯಜೀವಿಗಳು ಮತ್ತು ಅರಣ್ಯ ಸಂರಕ್ಷಣೆಯ ಕಾರ್ಯದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದು, ಮುಂದಿನ ಪೀಳಿಗೆಗೆ ಅರಣ್ಯವನ್ನು ಉಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಜಿಪಂ ಆಡಳಿತಾಧಿಕಾರಿ ಸುಷಮಾ ಗೋಡಬೋಲೆ ಹೇಳಿದರು.
ಅವರು ಗುರುವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ, ಅರಣ್ಯ ಇಲಾಖೆ ಕೆನರಾ ವೃತ್ತ ಶಿರಸಿ, ಅರಣ್ಯ ವಿಭಾಗ ಕಾರವಾರದ ವತಿಯಿಂದ ನಡೆದ, ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ಅರಣ್ಯ ಪ್ರದೇಶದಲ್ಲಿ ಅಕ್ರಮಗಳನ್ನು ತಡೆಯುವುದು ಸವಾಲಿನ ಕಾರ್ಯವಾಗಿದ್ದು, ಈ ಕಾರ್ಯದಲ್ಲಿ ಜಿಲ್ಲೆಯ ಅರಣ್ಯ ಇಲಾಖೆ ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಜಿಪಂ ಸಿಇಒ ಡಾ.ದಿಲೀಷ್ ಶಶಿ, ಸಾರ್ವಜನಿಕರ ಆರೋಗ್ಯ ಉತ್ತಮವಾಗಿರುವಲ್ಲಿ ಅರಣ್ಯ ಮತ್ತು ಪರಿಸರದ ಕೊಡುಗೆ ಅಗತ್ಯವಾಗಿದ್ದು, ಅರಣ್ಯ ಇಲಾಖೆಯ ಮೂಲಕ ಈ ಸೌಲಭ್ಯ ಜಿಲ್ಲೆಯ ಜನತೆಗೆ ದೊರೆಯುತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮೂಲಕ ಎಲ್ಲ ಸಹಕಾರ ನೀಡಲಾಗುವುದು ಎಂದರು.ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ , ದೇಶದ ಗಡಿಯನ್ನು ಸೇನಾಪಡೆ ಮತ್ತು ದೇಶದ ಒಳಗೆ ಪೊಲೀಸ್ ಪಡೆಗಳು ಕಾಪಾಡುತ್ತಿದ್ದು, ದೇಶದೊಳಗಿನ ಅರಣ್ಯ ಸಂಪತ್ತು, ಪರಿಸರ ಮತ್ತು ವನ್ಯಜೀವಿಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಜೀವದ ಹಂಗು ತೊರೆದು ಕಾಪಾಡುತ್ತಿದ್ದಾರೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದರೂ ಕೂಡಾ ಎಲ್ಲಾ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಅತ್ಯಂತ ಸಮರ್ಪಣಾ ಭಾವದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಕರ್ತವ್ಯ ನಿರ್ವಹಣೆಯಲ್ಲಿ ಇದುವರೆಗೆ 62 ಮಂದಿ ಹುತಾತ್ಮರಾಗಿದ್ದು, ಇವರ ತ್ಯಾಗ ಬಲಿದಾನಗಳು ಕರ್ತವ್ಯ ನಿರ್ವಹಣೆಯಲ್ಲಿ ನಮಗೆ ಮತ್ತಷ್ಟು ಪ್ರೇರಣೆಯಾಗಿದೆ ಎಂದರು.ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಸ್ವಾಗತಿಸಿ, ಹುತಾತ್ಮ ಹೆಸರುಗಳನ್ನು ಸ್ಮರಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ) ಮಂಜುನಾಥ ಜಿ ನಾವಿ, ಸಿ.ಆರ್.ಝಡ್ ನ ಪ್ರಾದೇಶಿಕ ನಿರ್ದೇಶಕ ಪ್ರವೀಣ್ ಬಸ್ರೂರು, ಕಾರವಾರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಡಿ.ನಾಯಕ, ಅಂಕೋಲ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸಿ.ಜಯೇಶ ಮತ್ತಿತರರು ಇದ್ದರು.ಹುತಾತ್ಮರ ಸ್ಮಾರಕಕ್ಕೆ ಹೂ ಗುಚ್ಛ ಸಮರ್ಪಣೆ, ಹುತಾತ್ಮರ ಗೌರವಾರ್ಥ ಮೂರು ಸುತ್ತುಗಳ ಗುಂಡು ಹಾರಿಸಿ ಮತ್ತು ಮೌನಾಚರಣೆ ಮಾಡಲಾಯಿತು.