ವಿಧಾನಸೌಧ, ಸಿಎಂ ಮನೆಗೆ ನಾರಿ ಶಕ್ತಿ ರಕ್ಷಣೆ!

KannadaprabhaNewsNetwork |  
Published : Jan 12, 2025, 01:17 AM IST
Umesh Kumar | Kannada Prabha

ಸಾರಾಂಶ

ವಿಧಾನಸೌಧ, ಸಿಎಂ ಮನೆಗೆ ಇನ್ನು ಮುಂದೆ ನಾರಿ ಶಕ್ತಿ ರಕ್ಷಣೆ.

ಗಿರೀಶ್ ಮಾದೇನಹಳ್ಳಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಡಿನ ಶಕ್ತಿ ಕೇಂದ್ರಗಳಾದ ವಿಧಾನಸೌಧ, ಸುವರ್ಣ ಸೌಧ, ಮುಖ್ಯಮಂತ್ರಿ ಮನೆ ಹಾಗೂ ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಗೂ ಪ್ರತಿಭಟನೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದರೆ ಇನ್ನು ಮುಂದೆ ಮಹಿಳೆಯರಿಂದಲೇ ‘ಲಾಠಿಯೇಟು’ ಗ್ಯಾರಂಟಿ..!

ಬಂದೋಬಸ್ತ್‌ ಕಾರ್ಯಗಳಿಗೆ ನಾರಿ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಉಮೇಶ್‌ ಕುಮಾರ್ ಮುಂದಾಗಿದ್ದು, ಈಗ ಪ್ರತಿ ಕೆಎಸ್‌ಆರ್‌ಪಿ ಬೆಟಾಲಿಯನ್‌ನಲ್ಲಿ 100 ಮಹಿಳಾ ಸಿಬ್ಬಂದಿ ಒಳಗೊಂಡ ತುಕಡಿ ಸ್ಥಾಪಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅಶಾಂತಿಯುತ ಪರಿಸ್ಥಿತಿ ನಿಯಂತ್ರಣಕ್ಕೆ ಮಹಿಳಾ ತುಕಡಿಗಳನ್ನು ಬಳಸಲು ಅವರು ಮುಂದಾಗಿದ್ದಾರೆ.

900 ಮಹಿಳಾ ಸಿಬ್ಬಂದಿ: ಬಂದೋಬಸ್ತ್‌ ಕಾರ್ಯಗಳಲ್ಲಿ ಕೆಎಸ್‌ಆರ್‌ಪಿ ಪಡೆ ಮಹತ್ವದ ಪಾತ್ರವಹಿಸುತ್ತದೆ. ರಾಜ್ಯದಲ್ಲಿ 14 ಕೆಎಸ್‌ಆರ್‌ಪಿ ಬೆಟಾಲಿಯನ್‌ಗಳಿದ್ದು, ಪ್ರತಿ ಬೆಟಾಲಿಯನ್‌ನಲ್ಲಿ ತಲಾ 100 ಜನರ 9 ತುಕಡಿಗಳಿರುತ್ತವೆ. ಮೊದಲು ಬೆಳಗಾವಿ ಬೆಟಾಲಿಯನ್‌ನಲ್ಲಿ ಮಹಿಳಾ ತುಕಡಿ ಸ್ಥಾಪಿಸಲಾಯಿತು. ನಂತರ ಬೆಂಗಳೂರಿನಲ್ಲಿ ಎರಡು ತುಕಡಿಗಳು ಸ್ಥಾಪನೆಯಾದವು. ಈ ಮಹಿಳಾ ಪಡೆಗಳಿಗೆ ಭದ್ರತಾ ಕಾರ್ಯಗಳಲ್ಲಿ ಪ್ರಾಮುಖ್ಯತೆ ನೀಡಲಾಗಿತ್ತು. ಶಾಂತಿ ಭಂಗ, ಗಲಾಟೆ ನಿಯಂತ್ರಿಸುವ ಕೆಲಸಗಳಲ್ಲಿ ಈ ತುಕಡಿಗಳ ಕಾರ್ಯನಿರ್ವಹಣೆ ಉತ್ತಮವಾಗಿರುವ ಕಾರಣ ಪ್ರತಿ ಬೆಟಾಲಿಯನ್‌ನಲ್ಲೂ ಮಹಿಳಾ ತುಕಡಿ ರಚಿಸಲು ಎಡಿಜಿಪಿ ಉಮೇಶ್ ಕುಮಾರ್ ಮುಂದಾಗಿದ್ದಾರೆ. ಹಾಗೆಯೇ ಮಹಿಳಾ ತುಕಡಿ ರಚಿಸುವ ಪ್ರಸ್ತಾವನೆಗೆ ಸರ್ಕಾರ ಸಹ ಸಮ್ಮತಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಆರ್ಥಿಕ ಹೊರೆ ಇಲ್ಲದೆ ತುಕಡಿ ರಚನೆ: ಹೊಸದಾಗಿ ಮಹಿಳಾ ತುಕಡಿಗಳ ರಚನೆಯಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಬೀಳುವುದಿಲ್ಲ. ಈಗಾಗಲೇ ಬೆಟಾಲಿಯನ್‌ಗಳಲ್ಲಿ ಮಂಜೂರಾತಿ ಇರುವ 9 ತುಕಡಿಗಳ ಪೈಕಿ ಒಂದು ತುಕಡಿಯನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ. ಹೀಗಾಗಿ ಹೊಸದಾಗಿ ತುಕಡಿ ರಚನೆಯಾಗಿದ್ದರೆ ಹುದ್ದೆಗಳ ಮಂಜೂರಾತಿಗೆ ಆರ್ಥಿಕ ಇಲಾಖೆಯ ಅನುಮತಿ ಪಡೆಯಬೇಕಿತ್ತು. ಆದರೆ ಸದ್ಯ ಮಂಜೂರಾತಿ ಹುದ್ದೆಗಳ ನೇಮಕಕ್ಕೆ ಹಣಕಾಸು ಇಲಾಖೆಯ ತಕರಾರಿರುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.

-ಬಾಕ್ಸ್‌-

ರಾಜಧಾನಿಗೆ ಕೆಎಸ್‌ಆರ್‌ಪಿ ಭದ್ರತಾ ಕೋಟೆ

ಬೆಂಗಳೂರಿನ ರಕ್ಷಣೆ ಸಲುವಾಗಿ ನೆರೆಹೊರೆ ಜಿಲ್ಲೆಗಳಲ್ಲಿ ಕೆಎಸ್‌ಆರ್‌ಪಿ ಬೆಟಾಲಿಯನ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಅವನತಿ ಗ್ರಾಮದಲ್ಲಿ ಹೊಸದಾಗಿ ಕೆಎಸ್‌ಆರ್‌ಪಿ ಬೆಟಾಲಿಯನ್ ಆರಂಭವಾಗಿದ್ದು, ಮತ್ತೊಂದು ರಾಮನಗರ ಜಿಲ್ಲೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ ತುಮಕೂರು ಹಾಗೂ ಕೋಲಾರದಲ್ಲಿ ಸಹ ಕೆಎಸ್‌ಆರ್‌ಪಿ ಬೆಟಾಲಿಯನ್‌ಗಳಿರುತ್ತವೆ. ಬೆಂಗಳೂರಿನಲ್ಲಿ ಏನಾದರೂ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾದರೆ ಕೂಡಲೇ ಭದ್ರತೆಗೆ ಕೆಎಸ್‌ಆರ್‌ಪಿ ಪಡೆಗಳು ಲಭ್ಯವಿರುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಎಡಿಜಿಪಿ ಉಮೇಶ್ ಕುಮಾರ್ ಹೇಳಿದ್ದಾರೆ.

-ಕೋಟ್-

ಪ್ರತಿ ಕೆಎಸ್‌ಆರ್‌ಪಿ ಬೆಟಾಲಿಯನ್‌ನಲ್ಲಿ ಮಹಿಳಾ ತುಕಡಿ ರಚನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ತುಕಡಿಗಳಿಗೆ ಮಹಿಳೆಯರ ನೇಮಕಾತಿಗೆ ಅನುಮತಿ ಸಿಗಲಿದೆ.

-ಉಮೇಶ್ ಕುಮಾರ್, ಎಡಿಜಿಪಿ, ಕೆಎಸ್‌ಆರ್‌ಪಿ.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ