ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದ ಚರಂತಿಮಠದ ಶಿವಾನುಭವ ಮಂಗಲ ಭವನದಲ್ಲಿ ಭಾನುವಾರ ನಡೆದ ಪ್ರೊ.ಗೌ.ಮ. ಉಮಾಪತಿಶಾಸ್ತ್ರಿ ಜನ್ಮ ಶತಮಾನೋತ್ಸವ ವರ್ಷ, ಪ್ರತಿಷ್ಠಾನ ಉದ್ಘಾಟನೆ, ಉಮಾಪತಿಶಾಸ್ತ್ರಿ ಸಾಹಿತ್ಯ-ಸಂಶೋಧನಾ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯವಹಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಗೌ.ಮ.ಉಮಾಪತಿಶಾಸ್ತ್ರೀಗಳು ಪ್ರಾಧ್ಯಾಪಕರಾಗಿ, ಪತ್ರಿಕಾ ಸಂಪಾದಕರಾಗಿ, ಸಂಶೋಧಕರಾಗಿ, ಹಸ್ತಪ್ರತಿಗಳ ಶೋಧ ಮತ್ತು ಸಂರಕ್ಷಕರಾಗಿ, ಕನ್ನಡ ನಾಡಿನ ವಿದ್ವತ್ ಪರಂಪರೆಯಲ್ಲಿ ಗುರುತಿಸಿಕೊಂಡವರು. ಬಹುಶೃತ ವಿದ್ವಾಂಸರಾಗಿರುವ ಅವರು ಕನ್ನಡನಾಡು-ನುಡಿ-ಸಂಸ್ಕೃತಿಗಳ ಅನನ್ಯತೆಗೆ ತಮ್ಮದೆ ಆದ ಹೆಜ್ಜೆಗುರುತು ಬಿಟ್ಟು ಹೋಗಿದ್ದಾರೆ. ಸರಳ, ಸಜ್ಜನಿಕೆಯ, ನಿರಾಡಂಬರ ವ್ಯಕ್ತಿತ್ವದ ಉಮಾಪತಿ ಶಾಸ್ತ್ರೀಯವರು ವಿದ್ವತ್ತು ಮತ್ತು ವಿನಯಕ್ಕೆ ಮಾದರಿಯಾದವರು. ನಿರಂತರ ಅಧ್ಯಯನ ಮತ್ತು ಅಧ್ಯಾಪನದೊಂದಿಗೆ, ವೃತ್ತಿಗೆ ಮಾದರಿಯಾದವರು ಎಂದರು.ಶಿವಯೋಗಮಂದಿರ ಪರಿಸರದಲ್ಲಿದ್ದ ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ, ಅವುಗಳ ವ್ಯವಸ್ಥಿತವಾದ ಅಧ್ಯಯನ ಮಾಡುವುದರ ಮೂಲಕ ಹಸ್ತಪ್ರತಿಗಳ ಒಡನಾಟವನ್ನೇ ಒಂದು ಚಟವನ್ನಾಗಿ ಬೆಳೆಸಿಕೊಂಡವರು. ಹೀಗೆ ಉತ್ತರದ ಕಾಶಿಯಲ್ಲಿ ಅಂಕುರಗೊಂಡ ಈ ಬಯಕೆ ದಕ್ಷಿಣದ ಶಿವಯೋಗಮಂದಿರ ಹಾಗೂ ಧರ್ಮಸ್ಥಳಗಳಲ್ಲಿ ಫಸಲು ಬಿಡುವಂತಾದುದು ನಿಜಕ್ಕೂ ವಿಸ್ಮಯದ ಸಂಗತಿಯಾಗಿದೆ ಎಂದು ಹೇಳಿದರು.
ಪ್ರಶಶ್ತಿಸ್ವೀಕರಿಸಿ ಮಾತನಾಡಿದ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿಗಳು, ಹಿರಿಯ ವಿದ್ವಾಂಸರಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರು, ಉಮಾಪತಿಶಾಸ್ತ್ರಿ ಅವರ ವಿವೇಕ ಚಿಂತಾಮಣಿ ಕೃತಿ ನನ್ನ ಮೇಲೆ ಪ್ರಭಾವ ಬೀರಿದೆ. ಅಪೇಕ್ಷೆ ಇಲ್ಲದ ವಿದ್ವಾಂಸರಾಗಿದ್ದರು, ಇಳಿಯ ವಯಸ್ಸಲ್ಲೂ ಉತ್ಸಾಹ ಕಳೆದುಕೊಂಡಿರಲಿಲ್ಲ. ಸಂಪಾದನೆಯ ಕೃತಿಗಳಲ್ಲಿ ವಿದ್ವತ್‌ನ್ನು ಸಂಪೂರ್ಣವಾಗಿ ಬಳಸಿಕೊಂಡು ಕೆಲಸ ಮಾಡಿದವರು ಉಮಾಪತಿಶಾಸ್ತ್ರಿ, ಸಂಸ್ಕೃತ ಕ್ಷೇತ್ರಕ್ಕೆ ದೈವಿಚ್ಛೆಯಿಂದ ನನಗೆ ತಿಳಿಯದೆ ಬಂದೆ. ಪ್ರಾಚೀನ, ಮಧ್ಯ ಕಾಲದ ಸಾಹಿತ್ಯದ ಜೊತೆಗೆ ಎಲ್ಲವನ್ನು ಓದುತ್ತಿದ್ದೆ, ಜೀವನದಲ್ಲಿ ಹೊಸ ಕಾರ್ಯತಂತ್ರಗಳನ್ನು ಮಾಡಿದ್ದೇನೆ. ಯಾರು ತುಳಿಯದ ಹಾದಿ ಆಯ್ಕೆ ಮಾಡಿಕೊಳ್ಳವ ಇಚ್ಛ ನನ್ನದಾಗಿತ್ತು. ಮನುಷ್ಯ ಹುಟ್ಟಿದ ಮೇಲೆ ಏನಾದರೂ ಸಾಧಿಸಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ವಿಶೇಷ ಉಪನ್ಯಾಸದಲ್ಲಿ ಸಾಹಿತಿಗಳಾದ ಎಸ್.ಎಂ. ದಾಶಾಳ, ಪ್ರೊ.ಗೌ.ಮ.ಉಮಾಪತಿಶಾಸ್ತ್ರಿ ಅವರ ಬದುಕು-ಬರಹದ ಕುರಿತು ಮಾತನಾಡಿ, ಆಸಕ್ತಿಯಿಂದ ಎಲ್ಲ ವಿಷಯಗಳನ್ನು ಕಲಿತವರಾಗಿದ್ದರು, ವೇದ ವಿಜ್ಞಾನಗಳನ್ನು ಸದಾ ಕಾಲ ಓದುವ ಮೂಲಕ ಪಾರಂಗತರಾಗಿ ಕಾಶಿಯಲ್ಲಿ ಅಧ್ಯಯನ ಮಾಡಿದರು, ವಿಶ್ವ ವಿದ್ಯಾಲಯ ಮಾಡುವ ಕೆಲಸ ಉಮಾಪತಿ ಶಾಸ್ತ್ರಿ ಅವರು ಸಂಸ್ಕೃತ ಕ್ಷೇತ್ರದಲ್ಲಿ ಮಾಡಿದ್ದಾರೆ, ಹತ್ತು ಸಾವಿರ ಪುಸ್ತಕಗಳನ್ನು ಅವರು ಆಗಿನ ಕಾಲದಲ್ಲೆ ತಮ್ಮ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದರು, ವಿವೇಕ ಚಿಂತಾಮಣಿ ಅವರ ಸಂಪಾದನೆ ಕೃತಿ ಚರ್ಚೆಗೆ ಒಳಪಟ್ಟ ನಾಡಿನ ಶ್ರೇಷ್ಠ ಪುಸ್ತಕ ಇದು ಅವರ ಪಾಂಡಿತ್ಯಕ್ಕೆ ಉದಾಹರಣೆ. ಅಕ್ಕಮಹಾದೇವಿ, ಬಸವಣ್ಣನವರ ಹಿಂದಿ ಭಾಷೆಗೆ ಭಾಷಾಂತರಿಸಿದ್ದಾರೆ, ಹಸ್ತಪ್ರತಿ ಸೂಚಿ ಎಂಬ ನಾಲ್ಕು ಪುಸ್ತಕ ಪ್ರಕಟಿಸಿ ಹಸ್ತ ಪ್ರತಿ ಮತ್ತು ತಾಡೋಳೆಗಳ ಸಂಗ್ರಹದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಚನ್ನುಡಿ, ಹೆಮಕೂಟ ಪತ್ರಿಕೆಗಳನ್ನು ಹೊರಡಿಸಿ ಹಲವು ಲೇಖನ ಮತ್ತು ವಿಮರ್ಶಾ ಲೇಖನ ಪ್ರಕಟಿಸುತ್ತದ್ದರು ಎಂದರು.ಈ ಸಂದರ್ಭದಲ್ಲಿ ಸಂಶೋಧಕರಾದ ಹೊಸಪೇಟೆಯ ಡಾ.ಕೆ.ರವೀಂದ್ರನಾಥ ಪ್ರಶಸ್ತಿ ಪುರಸ್ಕೃತ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಕುರಿತು ಅಭಿನಂದನಾ ನುಡಿಗಳನ್ನಾಡಿದರು.
ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಂಗೀತ ವಿಭಾಗ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಬಸವರಾಜ ಭಗವತಿ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಎಸ್.ವಿ. ಚೌಡಾಪುರು ಪರಿಚಯಿಸಿದರು. ಎಸ್.ಡಿ. ಕೆಂಗಲಗುತ್ತಿ ಕಾರ್ಯಕ್ರಮ ನಿರೂಪಿಸಿದರು. ಡಾ.ಕಲ್ಲಯ್ಯಾ ಹಿರೇಮಠ ವಂದಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸರು ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿಗಳಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರಿಗೆ ಪ್ರೊ.ಗೌ.ಮ. ಉಮಾಪತಿಶಾಸ್ತ್ರಿ ಸಾಹಿತ್ಯ-ಸಂಶೋಧನಾ ಪ್ರಶಸ್ತಿ ಫಲಕದ ಜೊತೆಗೆ ₹25000 ನಗದು ನೀಡಿ ಗೌರವಿಸಲಾಯಿತು.