ವಿದ್ಯಾಕಾಶಿಯ 5071 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಓದು, ಬರೆಹ ಬರುವುದಿಲ್ಲ!

KannadaprabhaNewsNetwork |  
Published : Feb 10, 2025, 01:47 AM IST
4564 | Kannada Prabha

ಸಾರಾಂಶ

ಕಳೆದ ಬಾರಿ 22ನೇ ಸ್ಥಾನಕ್ಕೆ ಕುಸಿದಿದ್ದ ಧಾರವಾಡ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ, ಈ ಬಾರಿಯೂ ಮೇಲೇಳುವ ಯಾವ ಲಕ್ಷಣಗಳೂ ಇಲ್ಲ. 28669 ವಿದ್ಯಾರ್ಥಿಗಳು ಪರೀಕ್ಷೆಗೆ ಕಟ್ಟಿದ್ದು, ಅವರಲ್ಲಿ 5071 ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ಓದಲು, ಶುದ್ಧವಾಗಿ ಬರೆಯಲು ಮತ್ತು ಸುಲಭವಾಗಿ ಲೆಕ್ಕ ಮಾಡಲು ಬರುವುದಿಲ್ಲ ಎನ್ನುವುದಾದರೆ ಅದೆಂಥ ಫಲಿತಾಂಶ ನಿರೀಕ್ಷಿಸುವುದು?.

ಮಲ್ಲಿಕಾರ್ಜುನ ಸಿದ್ದಣ್ಣವರಹುಬ್ಬಳ್ಳಿ:

ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಮುಖ ಘಟ್ಟ. ಬದುಕಿನ ಬುನಾದಿಗೆ ಈ ಅಂಕಗಳೇ ಅಡಿಗಲ್ಲು. ಇಂಥ ಮಹತ್ವದ ಪರೀಕ್ಷೆಗೆ ಅಣಿಯಾಗಿರುವ ವಿದ್ಯಾಕಾಶಿ ಹೆಗ್ಗಳಿಕೆಯ ಧಾರವಾಡ ಜಿಲ್ಲೆಯ 5071 ವಿದ್ಯಾರ್ಥಿಗಳಿಗೆ ಸರಿಯಾಗಿ ಓದಲು ಮತ್ತು ಬರೆಯಲು ಬರುವುದಿಲ್ಲ. ಗಣಿತ, ವಿಜ್ಞಾನ, ಇಂಗ್ಲಿಷ್ ಕಥೆ ಕೇಳಲೇಬೇಡಿ!

ಕಳೆದ ಬಾರಿ 22ನೇ ಸ್ಥಾನಕ್ಕೆ ಕುಸಿದಿದ್ದ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ, ಈ ಬಾರಿಯೂ ಮೇಲೇಳುವ ಯಾವ ಲಕ್ಷಣಗಳೂ ಇಲ್ಲ. 28669 ವಿದ್ಯಾರ್ಥಿಗಳು ಪರೀಕ್ಷೆಗೆ ಕಟ್ಟಿದ್ದು, ಅವರಲ್ಲಿ 5071 ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ಓದಲು, ಶುದ್ಧವಾಗಿ ಬರೆಯಲು ಮತ್ತು ಸುಲಭವಾಗಿ ಲೆಕ್ಕ ಮಾಡಲು ಬರುವುದಿಲ್ಲ ಎನ್ನುವುದಾದರೆ ಅದೆಂಥ ಫಲಿತಾಂಶ ನಿರೀಕ್ಷಿಸುವುದು?

ಕನ್ನಡದ ಗುಡಿ ಕರ್ನಾಟಕ ವಿದ್ಯಾವರ್ಧಕ ಸಂಘ, ನಾಲ್ಕು ವಿಶ್ವವಿದ್ಯಾಲಯಗಳು, ಐಐಟಿ, ಐಐಐಟಿ, ಐಟಿ ಪಾರ್ಕ್‌, ಮೂರು ಜ್ಞಾನಪೀಠ ಪುರಸ್ಕಾರಗಳನ್ನು ತನ್ನ ಉಡಿಯಲ್ಲಿ ತುಂಬಿಕೊಂಡಿರುವ ಈ ವಿದ್ಯಾಕಾಶಿಯ ಗಲ್ಲಿ ಗಲ್ಲಿಗಳಲ್ಲೂ ತಲೆಯೆತ್ತಿರುವ ಟ್ಯೂಷನ್‌ ಸೆಂಟರ್‌ ಮತ್ತು ವಿಷಯ ತಜ್ಞರ ನಿರಂತರ ಪಾಠ ಬೋಧನೆಯ ಮಧ್ಯೆಯೂ ಶೈಕ್ಷಣಿಕ ಗುಣಮಟ್ಟ ಈ ಪರಿ ಕುಸಿದಿರುವುದು ಶಿಕ್ಷಣ ಪ್ರೇಮಿಗಳನ್ನು ಕಂಗೆಡಿಸಿದೆ.ಹಿಂದುಳಿದ 50907 ಮಕ್ಕಳು:

ರಾಜ್ಯಾದ್ಯಂತ ಏಕಕಾಲಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸರ್ಕಾರ ಸಿದ್ಧತೆ ಮಾಡಿಕೊಂಡು ದಿನಾಂಕ ಘೋಷಿಸಿದೆ. ಇದೇ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ 2024-25ನೇ ಸಾಲಿನ ಧಾರವಾಡ ಜಿಲ್ಲೆಯಲ್ಲಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಓದುತ್ತಿರುವ 2ರಿಂದ 10ನೇ ತರಗತಿ ವಿದ್ಯಾರ್ಥಿಗಳ ಕಲಿಕೆಯಲ್ಲಿ ನಿಧಾನಗತಿ (ಸ್ಲೋ ಲರ್ನಿಂಗ್) ಇರುವ ಮಾಹಿತಿ ಬಿಡುಗಡೆ ಮಾಡಿದೆ.

754 ಸರ್ಕಾರಿ ಪ್ರಾಥಮಿಕ, 112 ಸರ್ಕಾರಿ ಹೈಸ್ಕೂಲು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 15050 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸಕ್ತ ಸಾಲಿಗೆ 299842 ಮಕ್ಕಳು (ಸರ್ಕಾರಿ-119652, ಅನುದಾನಿತ-56712, ಅನುದಾನ ರಹಿತ-123478) ಶಾಲೆಗಳಿಗೆ ದಾಖಲಾಗಿದ್ದಾರೆ. ಅವರಲ್ಲಿ 50907 (ಸರ್ಕಾರಿ-33812, ಅನುದಾನಿತ-8341, ಅನುದಾನ ರಹಿತ-8754) ಮಕ್ಕಳಿಗೆ ಓದು, ಬರೆಹ, ಗಣಿತ, ವಿಜ್ಞಾನ ಬರುವುದಿಲ್ಲ ಎನ್ನುವ ವಾಸ್ತವತೆಯನ್ನು ಈ ಸರ್ಕಾರಿ ದಾಖಲೆ ಬಯಲು ಮಾಡಿದೆ.ಮಕ್ಕಳ ಕಲಿಕೆ ತಪ್ಪಿದ್ದೆಲ್ಲಿ?

ಒಂದು ಮಗುವಿನ ಓದಿನ ಪ್ರಾರಂಭಿಕ ಹಂತ ಎಂದು ಗುರುತಿಸಲ್ಪಡುವ 1ರಿಂದ 3ನೇ ತರಗತಿ ವರೆಗೆ ಮಕ್ಕಳಿಗೆ ನಲಿಕಲಿ ಕಾರ್ಯಕ್ರಮದ ಮೂಲಕ ಓದಿನ ಗಟ್ಟಿ ತಳಪಾಯ ಹಾಕಲಾಗುತ್ತದೆ. ಈ ಅವಧಿಯಲ್ಲಿ ಮಕ್ಕಳಿಗೆ ಅಕ್ಷರ ಮಾಲೆಗಳನ್ನು ಸ್ಪಷ್ಟವಾಗಿ ಓದಲು, ಶುದ್ಧವಾಗಿ ಬರೆಯಲು ಮತ್ತು ಸುಲಭವಾಗಿ ಕೂಡಿಸುವ, ಕಳೆಯುವ ಸಣ್ಣ ಸಣ್ಣ ಲೆಕ್ಕ ಮಾಡಲು ಕಲಿಸಲಾಗುತ್ತದೆ.

ಈ ಹಂತದಲ್ಲಿ ಶೇ. 98ರಷ್ಟು ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ಕಲಿಕಾ ಸಾಮರ್ಥ್ಯ ಉತ್ತಮವಾಗಿಯೇ ಇರುತ್ತದೆ. ಯಾವಾಗ ಈ ಮಕ್ಕಳು 4ನೇ ತರಗತಿಗೆ ಬರುತ್ತಾರೋ ಆಗ ಆ ವರ್ಗವನ್ನು ಶಾಲೆಯ ಪ್ರಧಾನ ಶಿಕ್ಷಕ ಆಯ್ದುಕೊಳ್ಳುತ್ತಾರೆ. ಬಿಸಿಯೂಟ, ಮೊಟ್ಟೆ, ಚಿಕ್ಕಿ, ಸಮವಸ್ತ್ರ, ಪಠ್ಯ-ಪುಸ್ತಕ, ಬೂಟು ವಿತರಣೆ ಮತ್ತು ಮೇಲಧಿಕಾರಿಗೆ ವರದಿ ಕಳಿಸುವುದು, ಎಸ್‌ಡಿಎಂಸಿ ಮೀಟಿಂಗ್, ವಿವಿಧ ದಿನಾಚರಣೆಗಳು ಹಾಗೂ ವೈಯಕ್ತಿಕ ಕೆಲಸ ಇತ್ಯಾದಿ ಕಾರಣಗಳಿಂದಾಗಿ ಅವರಿಗೆ ಮಕ್ಕಳ ಕಲಿಕೆಯೆಡೆಗೆ ಸಂಪೂರ್ಣ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಆಗ ತಮ್ಮ ಜವಾಬ್ದಾರಿಯನ್ನು ಬೇರೆ ಶಿಕ್ಷಕರ ಹೆಗಲಿಗೆ, ಇಲ್ಲವೇ ಮಕ್ಕಳಲ್ಲೇ ತುಸು ಜಾಣ ವಿದ್ಯಾರ್ಥಿಯಿಂದ ಉಳಿದ ಮಕ್ಕಳಿಗೆ ಕಲಿಸಲು ಹಚ್ಚುತ್ತಾರೆ.

ಮಕ್ಕಳ ಓದಿನ ಲಿಂಕ್ ಒಮ್ಮೆ ಕಡಿತವಾದರೆ ಮತ್ತೆಂದೂ ಅದು ಕೂಡುವುದಿಲ್ಲ. ಕೂಡಿದರೂ ಅದು ಒತ್ತಾಯದಿಂದ ಬೆಸೆದ ತಂತು, ಬಹುದಿನ ಬಾಳುವುದಿಲ್ಲ. ಹಾಗಾಗಿ ಆ ಮಗುವಿಗೆ ಮುಂದಿನ ವರ್ಗಗಳ ಬೋಧನೆ ತಲೆಗೆ ಹತ್ತುವುದೇ ಇಲ್ಲ. ಆ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾರೆ ಎನ್ನುತ್ತಾರೆ ಶಿಕ್ಷಣ ತಜ್ಞರು.

ಈ ವಾಸ್ತವ ಅರಿತ ಡಿಡಿಪಿಐ ಎಸ್.ಎಸ್. ಕೆಳದಿಮಠ ಅವರು ಇಡೀ ಜಿಲ್ಲೆಯ ಶಿಕ್ಷಕರನ್ನು ಒಂದು ತಂಡವಾಗಿ ಮಾಡಿ ಮಕ್ಕಳಲ್ಲಿ ಕುಸಿಯುತ್ತಿರುವ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ನಲಿಕಲಿ, ಹೆಚ್ಚುವರಿ ವರ್ಗ ಸೇರಿದಂತೆ ಕಳೆದ ಮೂರು ವರ್ಷಗಳಿಂದ ವಿಶೇಷ ಕಾಳಜಿ ವಹಿಸಿದ್ದರಿಂದ ಶೇ.11.04ರಷ್ಟು ಪ್ರಗತಿ ಸಾಧಿಸಲಾಗಿದೆ. ಆದಾಗ್ಯೂ 50907 ಮಕ್ಕಳಿಗೆ ಓದು, ಬರೆಹ ಬರುವುದಿಲ್ಲ. ಹಾಗಾಗಿ ಇವರೆಲ್ಲ ಸ್ಲೋ ಲರ್ನಿಂಗ್‌ ವಿಭಾಗದಲ್ಲೇ ಗುರುತಿಸಿಕೊಂಡಿದ್ದಾರೆ.ಈ ವರ್ಷದಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಆಯಾ ಶಾಲೆಯಲ್ಲಿ ಪ್ರತ್ಯೇಕವಾಗಿ ಕೂಡ್ರಿಸಿ ಅಲ್ಲಿನ ಎಲ್ಲ ಶಿಕ್ಷರೂ ಪಾಠ ಮಾಡುವ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ಸಿಗುತ್ತಿದೆ. ನಮ್ಮ ಪ್ರಯತ್ನ ನಿರಂತರವಾಗಿ ಮುಂದುವರಿದಿದೆ. ಆದಾಗ್ಯೂ ಶಿಕ್ಷಕ ವರ್ಗದಲ್ಲಿನ ಕರ್ತವ್ಯನಿಷ್ಠೆ, ಸೇವಾ ಮನೋಭಾವದ ಕೊರತೆಯಿಂದಾಗಿ ಇಷ್ಟೊಂದು ಮಕ್ಕಳು ಕಲಿಕೆಯಲ್ಲಿ ಹಿಂದುಳಿದು, ಓದಿನ ಹಕ್ಕಿನಿಂದ ವಂಚಿತರಾಗುತ್ತಿರುವುದು ಬೇಸರ ತರಿಸಿದೆ ಎಂದು ಡಿಡಿಪಿಐ ಎಸ್.ಎಸ್. ಕೆಳದಿಮಠ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ