ಮುಂಡರಗಿ: ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ 136 ವರ್ಷಗಳ ಇತಿಹಾಸದಲ್ಲಿ ದೇಶದ ಸ್ವಾತಂತ್ರ್ಯ ಸಂಗ್ರಾಮ, ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ ಹಲವು ಹೋರಾಟಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬಂದಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದರು.
ಈಗಾಗಲೇ ಜಿಲ್ಲೆಯ ನರಗುಂದ, ಗದಗ, ರೋಣ ಸೇರಿದಂತೆ 6 ಪದವಿ ಕಾಲೇಜುಗಳಲ್ಲಿ ಈ ಕಾರ್ಯಕ್ರಮಗಳನ್ನು ಮಾಡಿದ್ದು, ಇದೀಗ ಐತಿಹಾಸಿಕ ಇತಿಹಾಸವುಳ್ಳ ಮುಂಡರಗಿಯ ಕ.ರಾ. ಬೆಲ್ಲದ ಮಹಾ ವಿದ್ಯಾಲಯದಲ್ಲಿ ಕಾರ್ಯಕ್ರಮ ಆಯೋಜಿಸಿದೆ. ಕರ್ನಾಟಕದ ಚರಿತ್ರೆ, ಭಾರತದ ಚರಿತ್ರೆ ನಿರ್ಮಾಣವಾಗಬೇಕಾದರೆ ನೂರಾರು, ಸಾವಿರಾರು , ಲಕ್ಷ, ಲಕ್ಷ ಮನಸ್ಸುಗಳು ತಮ್ಮ ತ್ಯಾಗದಿಂದ ಕನ್ನಡದ ಚರಿತ್ರೆಯನ್ನು ನಿರ್ಮಾಣ ಮಾಡಿದ್ದಾರೆ ಎಂದರು.
ಸಾಹಿತಿ ಡಾ. ನಿಂಗು ಸೊಲಗಿ ಮಾತನಾಡಿ, ಕನ್ನಡ ಸಾಹಿತ್ಯವನ್ನುಎಲ್ಲರೂ ಓದಬೇಕು. ಅದರಲ್ಲಿ ಬರುವ 12ನೇ ಶತಮಾನದ ವಚನ ಸಾಹಿತ್ಯದ ಶರಣ ಪರಂಪರೆ ಅದ್ಭುತವಾದದ್ದು. ಸಂವಿಧಾನದ ಆಶಯಗಳನ್ನು ಜಾರಿಗೆ ತಂದಿರುವ ಸರಿಯಾದ ಸ್ಥಳವೆಂದರೆ ಅದು ಬಸವಾದಿ ಶಿವಶರಣ ಅನುಭವ ಮಂಟಪ ಮಾತ್ರ ಎಂದರು.ಕ.ರಾ. ಬೆಲ್ಲದ ಮಹಾವಿದ್ಯಾಲಯದ ಕಾಲೇಜು ಮೇಲ್ವಿಚಾರಣಾ ಸಮಿತಿ ಕಾರ್ಯಾಧ್ಯಕ್ಷ ಪ್ರೊ. ಆರ್.ಎಲ್. ಪೊಲೀಸಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘ ನಾಡು, ನುಡು, ಭಾಷೆ. ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಕನ್ನಡ ನಾಡಿನಲ್ಲಿರುವ ಎಲ್ಲರೂ ಕನ್ನಡಿಗರೇ. ಹೀಗಾಗಿ ಕನ್ನಡ ನಾಡು, ನುಡಿ, ಸಂಸ್ಕೃತಿ ಎಲ್ಲರಿಗೂ ಅತ್ಯವಶ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾ. ಡಾ. ಸಂತೋಷ ಹಿರೇಮಠ, ಡಾ. ಆರ್.ಎಚ್. ಜಂಗನವಾರಿ, ಶಂಕರ ಕುಂಬಿ, ವೀರಣ್ಣ ವಡ್ಡೀನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕರ್ನಾಟಕ ಜನಪದ ಅಕಾಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣವರ, ಬಸವರಾಜ ಹಡಗಲಿ, ನಾಗರಾಜ ಜಕ್ಕಮ್ಮನ್ನವರ ಇವರಿಂದ ಕನ್ನಡ ನಾಡು, ನುಡಿ ಗೀತೆಗಳು ಜರುಗಿದವು. ಅವರಿಗೆ ಕುಮಾರ ಬಗರಕೇರ ತಬಲಾ ಸಾಥ್ ನೀಡಿದರು. ಪ್ರೊ. ಸಂಗೀತಾ ಮರಳಿ ಸ್ವಾಗತಿಸಿ, ಡಾ. ವನಜಾಕ್ಷಿ ಭರಮಗೌಡ್ರ ನಿರೂಪಿಸಿ, ಈರಮ್ಮ ಬಂಡಿವಡ್ಡರ ವಂದಿಸಿದರು.