- ಚಾರ್ಟೆಟ್ ಅಕೌಂಟೆಂಟ್ ಬಸವರಾಜೇಂದ್ರ ಅಭಿಮತ
---ಕನ್ನಡಪ್ರಭ ವಾರ್ತೆ ಮೈಸೂರು
ಸ್ವಾಮಿ ವಿವೇಕಾನಂದರ ಭೌತಿಕರೂಪ ಅಳಿದು ಶತಮಾನಗಳೇ ಉರುಳಿದರೂ ಅವರು ಜಗತ್ತಿಗೆ ನೀಡಿದ ತತ್ತ್ವ ಸಂದೇಶ ಇಂದಿಗೂ ಶಾಶ್ವತವಾಗಿ ಉಳಿದಿದೆ ಎಂದು ಚಾರ್ಟೆಟ್ ಅಕೌಂಟೆಂಟ್ ಬಸವರಾಜೇಂದ್ರ ಅಭಿಪ್ರಾಯಪಟ್ಟರು.ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರವು ರಾಷ್ಟ್ರೀಯ ಸೇವಾ ಯೋಜನ, ಎನ್.ಸಿ.ಸಿ, ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಯೂತ್ ರೆಡ್ ಕ್ರಾಸ್, ಕ್ರೀಡಾ ವಿಭಾಗ ಮತ್ತು ಐಕ್ಯೂಎಸಿ ಘಟಕದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ, ಸ್ವಾಮಿ ವಿವೇಕಾನಂದರ 161ನೇ ಜಯಂತಿಯಲ್ಲಿ ಅವರು ಮಾತನಾಡಿದರು.
ವಿವೇಕಾನಂದರು ಯುವ ಶಕ್ತಿಗೆ ನೀಡಿದ ಕರೆ ಮತ್ತು ಚಿಂತನ ತತ್ವ ಸಂದೇಶಗಳು ಜನಮಾನಸದಲ್ಲಿ ಅಳಿಯದೆ ಉಳಿದಿದೆ. ವಿವೇಕಾನಂದರ ಜೀವನದಲ್ಲಿ ಘಟಿಸಿದ ಘಟನಾವಳಿಗಳು, ಸರ್ವಧರ್ಮ ಸಮನ್ವಚಾರ್ಯ ಪುರುಷ ಶ್ರೀ ರಾಮಕೃಷ್ಣರ ಪರಮಹಂಸರ ದಟ್ಟವಾದ ಆಧ್ಯಾತ್ಮಿಕ ಪ್ರಭಾವ ಹೇಗೆ ನರೇಂದ್ರನಾಥದತ್ತರನ್ನು ಸ್ವಾಮಿ ವಿವೇಕಾನಂದರನ್ನಾಗಿ ರೂಪಿಸಿತು ಎಂದು ಅವರು ಹೇಳಿದರು.ತಂದೆಯ ಸಾವಿನಿಂದ ವಿಚಲಿತನಾದ ನರೇಂದ್ರ ಲೌಖಿಕ ಬದುಕಿನಿಂದ ಹೊರಬಂದು ಪರಮಹಂಸರ ಮಾರ್ಗದರ್ಶನದಲ್ಲಿ ಭಾರತದ ಆಧ್ಯಾತ್ಮಿಕ ಶಕ್ತಿಯಾಗಿ ರೂಪುಗೊಂಡು ಹೇಗೆ ವಿಶ್ವಗುರುವಾದರು, ನರೇಂದ್ರ ಜಗತ್ತಿಗೆ ಶಿಕ್ಷಣ ಕೊಡುತ್ತಾನೆ ಎಂಬ ರಾಮಕೃಷ್ಣರ ಇಚ್ಛಾಶಕ್ತಿಯನ್ನು. ವಿವೇಕಾನಂದರು ತಮ್ಮ ಸಂಚಾರ ದರ್ಶನದಿಂದ ಕ್ರಿಯಾಶೀಲಗೊಳಿಸಿದರು, ಚಿಕಾಗೋ ವಿಶ್ವಧರ್ಮ ಸಮ್ಮೇಳನದ ನಾಲ್ಕು ನಿಮಿಷದ ಭಾಷಣ ವಿದೇಶದಲ್ಲಿ ವಿವೇಕಾನಂದರ ನಾಲ್ಕು ವರ್ಷಗಳ ಸಂಚಾರ ಸಂಚಲನಕ್ಕೆ ಹೇಗೆ ಕಾರಣವಾಯಿತು ಎಂಬುದನ್ನು ಅವರು ತಿಳಿಸಿದರು.
ಕನ್ಯಕುಮಾರಿಯ ಕಡಲ ನಡು ಬಂಡೆ ಮೇಲೆ ಕುಳಿತು ಮೂರು ಹಗಲು ಮೂರು ರಾತ್ರಿ ತಪಗೈದು ಭಾರತ ಮಾತೆಯ ದರ್ಶನ ಪಡೆದಿದ್ದು, ಭಗವದ್ಗೀತೆಯ ಸಾರ ಸತ್ವವನ್ನು ಜಗತ್ತಿಗೆ ಸಾರಿದರು. ಕೇತಿಯರಾಜ ನರೇಂದ್ರನನ್ನು ವಿವೇಕಾನಂದ ಎಂದು ಸಂಬೋಧಿಸುವ ವಿಚಾರ ಸೇರಿದಂತೆ ವಿವೇಕರ ಸಾರ್ಥಕ್ಯ ಜೀವನದ ಸಾಧನೆಗಳನ್ನು ತಿಳಿಸಿದರು.ಬಳಿಕ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಪೂರ್ವಭಾವಿ ತಯಾರಿ ನಡೆಸಬೇಕು, ಪರೀಕ್ಷಾ ಪರಿಶ್ರಮದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎಸ್. ಮರೀಗೌಡ ಮಾತನಾಡಿ, ವಿವೇಕಾನಂದರ ವಿಚಾರಗಳು ಹೇಗೆ ಯುವ ಶಕ್ತಿಯ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ವಿವರಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಸಂಬಂಧಿಸಿದಂತೆ ಉಪಯಕ್ತ ಸಲಹೆ ನೀಡಿದರು.ಶಿಲ್ಪಶ್ರಿ ಪ್ರಾರ್ಥಿಸಿದರು. ಎಂಕಾಂ ವಿಭಾಗದ ಮುಖ್ಯಸ್ಥೆ ಎಸ್. ಪೂರ್ಣಿಮಾ ಸ್ವಾಗತಿಸಿದರು. ಅಧ್ಯಾಪಕ ಸಲಹೆಗಾರ್ತಿ ಪಡಿ. ಪಲ್ಲವಿ ವಂದಿಸಿದರು. ಆರ್. ಅರವಿಂದ್ ನಿರೂಪಿಸಿದರು.