ಕ್ಷಯ ಮುಕ್ತ ಭಾರತ ನಿರ್ಮಾಣಕ್ಕೆ ತೀವ್ರ ಪ್ರಚಾರಾಂದೋಲನ

KannadaprabhaNewsNetwork | Published : Dec 22, 2024 1:32 AM

ಸಾರಾಂಶ

ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಆಯೋಜಿಸಿದ್ದ ಟಿಬಿ ಮುಕ್ತ ಭಾರತ ನಿರ್ಮಾಣ ತೀವ್ರ ಪ್ರಚಾರ ಆಂದೋಲನ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿದರು

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಕ್ಷಯ ಮುಕ್ತ ಭಾರತ ಗುರಿ ತಲುಪಿಸುವ ಪ್ರಮುಖ ಹೆಜ್ಜೆಯಾಗಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ದೇಶಾದ್ಯಂತ ಹಮ್ಮಿಕೊಂಡಿದ್ದು, ಕ್ಷಯ ರೋಗ ಇರುವವರನ್ನು ಆರೈಕೆ ಮಾಡಿ ಎಂದು ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.

ನಗರದ ಜಿಲ್ಲಾ ಕಾರಾಗೃಹದ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರಾಗೃಹ ಇಲಾಖೆ ಇವರ ಸಹಯೋಗದೊಂದಿಗೆ 100 ದಿನಗಳ ಟಿಬಿ ಮುಕ್ತ ಭಾರತ ನಿರ್ಮಾಣ ತೀವ್ರ ಪ್ರಚಾರ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2025ರ ಹೊತ್ತಿಗೆ ವಾರ್ಷಿಕ ಹೊಸ ಕ್ಷಯರೋಗ ಪ್ರಮಾಣವನ್ನು 1 ಲಕ್ಷ ಜನಸಂಖ್ಯೆಗೆ 47 ಪ್ರಕರಣಗಳಷ್ಟು ಕಡಿಮೆ ಮಾಡುವುದು ಪ್ರಮುಖ ಉದ್ದೇಶ ಎಂದು ತಿಳಿಸಿದರು.

ಕ್ಷಯದಿಂದ ಮರಣ ಪ್ರಮಾಣವನ್ನ ಶೇ.3.6 ಕಡಿಮೆ ಮಾಡುವ ಹಾಗೂ ಕ್ಷಯರೋಗದಿಂದ ರೋಗಿಯ ಕುಟುಂಬಕ್ಕೆ ಆಗುವ ಆರ್ಥಿಕ ವೆಚ್ಚ ಶೂನ್ಯ ಮಾಡುವ ಧ್ಯೇಯ, ಗುರಿಗಳನ್ನು ಹೊಂದಲಾಗಿದೆ. ಸದ್ಯ ಭಾರತದಲ್ಲಿ ಪ್ರತಿವರ್ಷ 28.4 ಲಕ್ಷ ಜನ ಕ್ಷಯ ರೋಗಕ್ಕೆ ತುತ್ತಾಗುತ್ತಿದ್ದು, 5 ಲಕ್ಷ ಜನ ಕ್ಷಯದಿಂದ ಮೃತರಾಗುತ್ತಿದ್ದಾರೆ ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್ ಮಂಜುನಾಥ್ ಮಾತನಾಡಿ, ಕ್ಷಯ ತಗಲುವ ಸಾಧ್ಯತೆ ಹೆಚ್ಚಿರುವ ಪ್ರದೇಶಗಳಲ್ಲಿ ಆರೋಗ್ಯ ತಂಡಗಳು ಹೈ ರಿಸ್ಕ್ ಪ್ರದೇಶಗಳಿಗೆ ತೆರಳಿ, ಕ್ಷಯರೋಗದ ಬಗ್ಗೆ ಮಾಹಿತಿ ಮತ್ತು ಜನಜಾಗೃತಿ ಮೂಡಿಸುತ್ತಿವೆ. ಕ್ಷಯರೋಗ ಲಕ್ಷಣಗಳು ಕಂಡುಬಂದಲ್ಲಿ ಕಫ ಪರೀಕ್ಷೆ ಅಥವಾ ಸಿಬಿ ನಾಟ್ ಪರೀಕ್ಷೆಯ ಮುಖಾಂತರ ಕ್ಷಯ ರೋಗವನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ಚಿತ್ರದುರ್ಗ ತಾಲೂಕಿನ ಒಟ್ಟು 286 ಹಳ್ಳಿಗಳಲ್ಲಿ ದಿನಕ್ಕೆ ನಾಲ್ಕು ಹಳ್ಳಿಗಳನ್ನು ಭೇಟಿ ಮಾಡಿ ವಾಹನದ ಮೂಲಕ ವೈದ್ಯಾಧಿಕಾರಿಗಳು, ಪ್ರಯೋಗಶಾಲಾ ತಂತ್ರಜ್ಞರು, ಆಶಾ ಕಾರ್ಯಕರ್ತೆಯರು, ರೋಗಿಗಳ ಸ್ಕ್ರೀನಿಂಗ್ ಕಫ ಪರೀಕ್ಷೆ, ಎಕ್ಸ್ ರೇ ಪರೀಕ್ಷೆ, ಉಚಿತ ಚಿಕಿತ್ಸೆ, ಉನ್ನತ ಮಟ್ಟದ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ನಿರ್ದೇಶನ ಮಾಡಲಾಗುತ್ತಿದೆ. ಹಾಗೆಯೇ ಕ್ಷಯರೋಗದ ಬಗ್ಗೆ ಹೆಚ್ಚಿನ ಜಾಗೃತಿ ಮತ್ತು ಜನರು ಕ್ಷಯರೋಗ ಪತ್ತೆಗೆ ಶೀಘ್ರ ತಪಾಸಣೆ ಹಾಗೂ ಚಿಕಿತ್ಸೆಗೆ ಮುಂದಾಗುವ ಮನಸ್ಥಿತಿ ಮೂಡಿಸುವುದಾಗಿದೆ ಎಂದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯ್ಕ್ ಮಾತನಾಡಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಜಾಗೃತಿ ಗೀತೆಯನ್ನು ಹಾಡುವ ಮೂಲಕ ಮಾಹಿತಿಯನ್ನು ನೀಡಿದರು. ಬುದ್ಧನಗರ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುರೇಂದ್ರ, ಸಹಾಯಕ ಜೈಲರ್ ಬಿ.ಆರ್.ಚಲವಾದಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್, ಮೇಲ್ವಿಚಾರಕರಾದ ನಾಗರಾಜ್, ಸಂತೋಷ್, ಲೋಕೇಶ್, ನಿಂಗೇಶ್, ರಮೇಶ್ ಇದ್ದರು.

Share this article