ಪ್ರಭಾವಶಾಲಿ ಸ್ತ್ರೀವಾದಿಗಳಲ್ಲಿ ವಿಜಯಾ ದಬ್ಬೆ ಪ್ರಮುಖರು: ಡಾ.ಶಶಿಕಲಾ ಗುರುಪುರ

KannadaprabhaNewsNetwork |  
Published : Jul 22, 2024, 01:19 AM IST
4 | Kannada Prabha

ಸಾರಾಂಶ

ದಬ್ಬೆ ಅವರು ಜಗತ್ತಿನ ಪ್ರಭಾವಶಾಲಿ ಸ್ತ್ರೀವಾದಿಗಳೊಂದಿಗೆ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಮೈಸೂರು ಪರಿಸರದಲ್ಲಿ ಕಾನೂನು ಹೋರಾಟ, ಹಕ್ಕುಗಳ ಹೋರಾಟ, ಮಹಿಳಾ ಚಳವಳಿ ಗಟ್ಟಿಯಾಗಿ ಆರಂಭವಾಗಿವೆ. ಅಂತಹ ಸಂದರ್ಭದಲ್ಲಿ ದಬ್ಬೆ ಅವರ ಗಟ್ಟಿತನ, ಗಟ್ಟಿ ನಿಲುವು ಪ್ರಮುಖವಾದದ್ದು. ಸಮುದಾಯದ ಮುಂದೆ ನಿಂತು ಮಾತನಾಡುವ ಧೈರ್ಯ ಕಡಿಮೆ ಜನರಲ್ಲಿದೆ. ಆದರೆ, ದಬ್ಬೆ ಅವರಲ್ಲಿ ಆ ಧೈರ್ಯ ಹೆಚ್ಚಾಗಿತ್ತು.

ಕನ್ನಡಪ್ರಭ ವಾರ್ತೆ ಮೈಸೂರು

ಸ್ತ್ರೀವಾದದ ಒಳನೋಟವನ್ನು ಸರಳವಾಗಿ, ಶಿಸ್ತುಬದ್ಧವಾಗಿ ಅಳವಡಿಸಿಕೊಂಡಿರುವವರ ಸಂಖ್ಯೆ ಕಡಿಮೆ. ಅಂತಹವರ ಸಾಲಿನಲ್ಲಿ ಡಾ. ವಿಜಯಾ ದಬ್ಬೆ ಪ್ರಮುಖರು ಎಂದು ಪುಣೆಯ ಸಿಂಬಯಾಸಿಸ್‌ ಕಾನೂನು ಕಾಲೇಜಿನ ಡೀನ್‌ ಡಾ. ಶಶಿಕಲಾ ಗುರುಪುರ ಅಭಿಪ್ರಾಯಪಟ್ಟರು.

ಸರಸ್ವತಿಪುರಂನ ರೋಟರಿ ಮೈಸೂರು ಪಶ್ಚಿಮ ಸಭಾಂಗಣದಲ್ಲಿ ಸಮತಾ ಅಧ್ಯಯನ ಕೇಂದ್ರ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿವಿಯ ಭಾಷಾಂತರ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಡಾ.ಎಂ. ಉಷಾ ಅವರಿಗೆ ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಅವರು ಮಾತನಾಡಿದರು.

ದಬ್ಬೆ ಅವರು ಜಗತ್ತಿನ ಪ್ರಭಾವಶಾಲಿ ಸ್ತ್ರೀವಾದಿಗಳೊಂದಿಗೆ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಮೈಸೂರು ಪರಿಸರದಲ್ಲಿ ಕಾನೂನು ಹೋರಾಟ, ಹಕ್ಕುಗಳ ಹೋರಾಟ, ಮಹಿಳಾ ಚಳವಳಿ ಗಟ್ಟಿಯಾಗಿ ಆರಂಭವಾಗಿವೆ. ಅಂತಹ ಸಂದರ್ಭದಲ್ಲಿ ದಬ್ಬೆ ಅವರ ಗಟ್ಟಿತನ, ಗಟ್ಟಿ ನಿಲುವು ಪ್ರಮುಖವಾದದ್ದು. ಸಮುದಾಯದ ಮುಂದೆ ನಿಂತು ಮಾತನಾಡುವ ಧೈರ್ಯ ಕಡಿಮೆ ಜನರಲ್ಲಿದೆ. ಆದರೆ, ದಬ್ಬೆ ಅವರಲ್ಲಿ ಆ ಧೈರ್ಯ ಹೆಚ್ಚಾಗಿತ್ತು ಎಂದರು.

ಹೋರಾಟ ಹರಿಯುವ ನದಿ ಇದ್ದಂತೆ. ಆ ಹೋರಾಟಕ್ಕೆ ಅನೇಕ ಕವಲುಗಳು ಸೇರಿಕೊಂಡು ಸಮುದ್ರಕ್ಕೆ ಸೇರುತ್ತವೆ. ಅದೇ ಮಾದರಿಯಲ್ಲಿ ಜ್ಞಾನದ ಶಿಸ್ತಿನಲ್ಲಿ ಸ್ತ್ರೀ ಸಂವೇದನೆಗಳು, ಸ್ತ್ರೀವಾದಿಯಾದಂತಹ ಸಮಗ್ರ ಜ್ಞಾನದಿಂದ ಹುಟ್ಟಿದ ಸಾಮಾಜಿಕ ಉನ್ನತಿಯಲ್ಲಿ ಇನ್ನು ಬಾಕಿ ಕೆಲಸ ಉಳಿದಿವೆ ಎಂದು ದಬ್ಬೆ ನಮಗೆ ತೋರಿಸಿಕೊಟ್ಟಿರುವುದಾಗಿ ಅವರು ಹೇಳಿದರು.

ದಬ್ಬೆ ಅವರ ಬರಹ, ವ್ಯಕ್ತಿತ್ವದಲ್ಲಿ ಹೋರಾಟದ ಗಟ್ಟಿತನವಿತ್ತು. ಅವರ ಉಪಸ್ಥಿತಿಯಲ್ಲಿದ್ದ ಶಕ್ತಿ ಸಂಚಾರಕ್ಕೆ ಪ್ರತಿಯಾಗಿ ಮತ್ತೊಂದನ್ನು ನೋಡಲು ಸಾಧ್ಯವೇ ಇಲ್ಲ. ಅನೇಕ ವಿವಿಗಳಲ್ಲಿ ಕನ್ನಡ ಭಾಷೆಯಲ್ಲಿ, ಅದರಲ್ಲಿಯೂ ಮುಖ್ಯವಾಗಿ ಸಾಹಿತ್ಯದ ಹಾಗೂ ಅಂತರ ಶಾಸ್ತ್ರೀಯ ನೆಲೆಯಿಂದ ಸಂಶೋಧನೆ ನಡೆಯುತ್ತಿವೆ. ಆದರೆ ದಬ್ಬೆ ಅವರು ಸ್ತ್ರೀವಾದವನ್ನು ಬದುಕಿನ ಸಕ್ರಿಯವಾದ ಕಾಲದುದ್ದಕ್ಕೂ ಅಳವಡಿಸಿಕೊಂಡಿದ್ದರು. ಅವರ ನುಡಿ,ನಡೆ, ತತ್ತ್ವ, ಆಚರಣೆಯಲ್ಲಿ ಸ್ತ್ರೀವಾದ ಬೇರೂರಿತ್ತು. ಅಲ್ಲದೆ ದೊಡ್ಡಮಟ್ಟದ ಸಮುದಾಯ ಕಟ್ಟುವುದಕ್ಕಾಗಿ ಇತರರನ್ನು ಹುರಿದುಂಬಿಸುವ ವ್ಯಕ್ತಿತ್ವವನ್ನು ಅವರು ಹೊಂದಿದ್ದಾಗಿ ತಿಳಿಸಿದರು.

ಸ್ತ್ರೀವಾದದ ಕುರಿತು ಸಂಶೋಧನೆಗಳು ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿದೆ. ಆದರೆ ಡಾ. ವಿಜಯಾ ದಬ್ಬೆ ಅವರ ಮಟ್ಟಿಗೆ ಅರ್ಥೈಸುವ ಕೆಲಸ ನಡೆದಿಲ್ಲ. ಆದ್ದರಿಂದ ಸ್ತ್ರೀವಾದಿಗಳಿಗೆ ಅವರು ಮಾದರಿಯಾಗಿ ನಿಲ್ಲುತ್ತಾರೆ. ಲಿಂಗ ತಾರತಮ್ಯ, ಸ್ತ್ರೀ ಸಮಾನತೆ ಕುರಿತು ಅನೇಕರು ಅಂತರಂಗದಲ್ಲಿಯೇ ಮಾತನಾಡುತ್ತಾರೆ. ಆದರೆ ಬಹಿರಂಗವಾಗಿ ತೆರೆದಿಡುವ ಧೈರ್ಯವನ್ನು ವಿಜಯಾ ದಬ್ಬೆ ಮಾಡಿದ್ದಾರೆ ಎಂದರು.

ಪ್ರಶಸ್ತಿ ಸ್ವೀಕರಿಸಿದ ಡಾ.ಎಂ. ಉಷಾ ಮಾತನಾಡಿ, ಕೆಲಸದಿಂದ ನಿವೃತ್ತಿ ಪಡೆದ ನಂತರ ಏನನ್ನಾದರೂ ಮಾಡಬೇಕು ಎಂಬ ಹುಡುಕಾಟದಲ್ಲಿದ್ದಾಗ ಆಧುನಿಕತೆಯನ್ನು ಹೆಣ್ಣು ಮಕ್ಕಳು ಹೇಗೆ ಎದುರಿಸಿದರು ಎಂಬುದರ ಕುರಿತು ಬರೆಯಲು ಆರಂಭಿಸಿದೆ. ಕಾಲೇಜಿನಲ್ಲಾಗಿದ್ದಾರೆ ಈ ಕುರಿತು ಪ್ರಾಜೆಕ್ಟ್‌ ಮಾಡುತ್ತಿದ್ದೆ. ಆದರೆ ಮನೆಯಲ್ಲಿದ್ದ ಕಾರಣ ಕಾದಂಬರಿ ರೂಪದಲ್ಲಿ ಅದನ್ನು ಹೊರತಂದೆ. ಪಾತ್ರಗಳನ್ನು ಯತಾವತ್ತಾಗಿ ಬರೆದಿಲ್ಲ. ಅವರು ತಮ್ಮ ಕಷ್ಟವನ್ನು ದಾಟಿದ ರೀತಿಯನ್ನು ಕುರಿತು ಬರೆದಿದ್ದೇನೆ. ಇಂತವರು ನನ್ನ ಕಾದಂಬರಿ ಉಸಿರಾಡಲು ಕಾರಣಕರ್ತರಾಗಿದ್ದಾರೆ. ಡಾ. ವಿಜಯಾ ದಬ್ಬೆ ಅವರು ಸಮಾಜದಲ್ಲಿನ ಅಸಮಾನತೆ, ಅಸಮಾಧಾನ, ಲಿಂಗ ತಾರತಮ್ಯದ ಬಗ್ಗೆ ಸ್ಪಷ್ಟತೆ ನೀಡಿದರು. ಅವರ ಹೆಸರಿನಲ್ಲಿ ಪ್ರಶಸ್ತಿ ದೊರತಿರುವುದು ಸಂತೋಷದ ವಿಷಯ ಎಂದು ತಿಳಿಸಿದರು.

ಡಾ.ಎಂ. ಉಷಾ ಅವರು ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ ಬಾಳ ಬಟ್ಟೆ ಕಾದಂಬರಿಗೆ 2024ನೇ ಸಾಲಿನ ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ನೀಡಲಾಯಿತು. 25 ಸಾವಿರ ರೂ. ನಗದು ಬಹುಮಾನ, ಫಲಕವನ್ನು ಅದು ಒಳಗೊಂಡಿದೆ.

ಕಾವ್ಯ ವಿಭಾಗದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವೈ.ಎಸ್‌. ಅಭಿಷೇಕ್ (ಪ್ರಥಮ), ದಾವಣಗೆರೆ ವಿವಿ ಕೆ. ರುಜುವಾನ (ದ್ವಿತೀಯ), ಅಮಿತ ಎಂ. ಕುಡಚೆ (ತೃತೀಯ). ಲಲಿತಪ್ರಬಂಧ ವಿಭಾಗದಲ್ಲಿ ಕಾಸರಗೋಡು ಕೇರಳ ಕೇಂದ್ರೀಯ ವಿವಿ ಕನ್ನಡ ವಿಭಾಗದ ಆರ್‌. ನವ್ಯಾ (ಪ್ರಥಮ), ಕೊಡಗಿನ ಡಾ. ಕೆ.ಎಸ್. ಮುಸ್ತಫಾ (ದ್ವಿತೀಯ), ಮಂಗಳೂರು ವಿವಿಯ ಎಸ್. ಸಂಧ್ಯಾ ತೃತೀಯ ಬಹುಮಾನ ಸ್ವೀಕರಿಸಿದರು. ತೀರ್ಪುಗಾರರ ಮೆಚ್ಚುಗೆ ಪಡೆದ ಕವಿಗಳು, ಪ್ರಬಂಧ ಲೇಖಕರನ್ನು ಸನ್ಮಾನಿಸಲಾಯಿತು.

ಡಾ. ಸಬೀಹಾ ಭೂಮಿಗೌಡ ಅಧ್ಯಕ್ಷತೆ ವಹಿಸಿದ್ದರು. ತೀರ್ಪುಗಾರರಾಗಿದ್ದ ಕನ್ನಡ ಸಹ ಪ್ರಾಧ್ಯಾಪಕ ಡಾ. ಆನಂದ್ ಗೋಪಾಲ್ ಕಾವ್ಯದ ಕುರಿತು ಮಾತನಾಡಿದರೆ, ಡಾ.ಆರ್‌.ಎಸ್‌. ಅಶ್ವಿನಿ ಪ್ರಬಂಧಗಳ ಕುರಿತು ಮಾತನಾಡಿದರು. ಸಮತಾ ಅಧ್ಯಯನ ಕೇಂದ್ರದ ಧರ್ಮದರ್ಶಿ ಡಾ. ರಾಮಕೃಷ್ಣ ಜೋಷಿ ಆಶಯ ನುಡಿಗಳನ್ನಾಡಿದರು. ನಿವೃತ್ತ ಪ್ರಾಂಶುಪಾಲ ಡಾ.ಟಿ.ಎಸ್. ಸುಬ್ರಹ್ಮಣ್ಯ, ಉಪಾಧ್ಯಕ್ಷೆ ಬಿ.ಸಿ. ಮಂಜುಳಾ, ಕಾರ್ಯದರ್ಶಿ ಆರ್. ಸುನಂದಮ್ಮ, ಸಹ ಕಾರ್ಯದರ್ಶಿ ಪಿ. ಓಂಕಾರ್, ಖಜಾಂಚಿ ವಿಜಯಾರಾವ್ ಇದ್ದರು.

PREV