ವಿಜಯ ವಿಠ್ಠಲ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಸಾಧಕರೊಂದಿಗೆ ಸಂವಾದ

KannadaprabhaNewsNetwork | Published : Jul 5, 2024 12:47 AM

ಸಾರಾಂಶ

ಸತತ ಪರಿಶ್ರಮ, ಏಕಾಗ್ರತೆ, ಸಮಯದ ಸದುಪಯೋಗ, ದೇವತಾನುಗ್ರಹ, ಗುರು ಹಿರಿಯರನ್ನು ಗೌರವದಿಂದ ಕಂಡರೆ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ತಲುಪಲು ಸಾಧ್ಯ

ಕನ್ನಡಪ್ರಭ ವಾರ್ತೆ ಮೈಸೂರು

ವಿಜಯವಿಠ್ಠಲ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಮತ್ತು ಸಾಧಕರು ಉದ್ಘಾಟಿಸಿದರು.

ಎಚ್‌. ಸತ್ಯಪ್ರಸಾದ್‌ ಮಾತನಾಡಿ, ಸತತ ಪರಿಶ್ರಮ, ಏಕಾಗ್ರತೆ, ಸಮಯದ ಸದುಪಯೋಗ, ದೇವತಾನುಗ್ರಹ, ಗುರು ಹಿರಿಯರನ್ನು ಗೌರವದಿಂದ ಕಂಡರೆ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ತಲುಪಲು ಸಾಧ್ಯ ಎಂದು ಹೇಳಿದರು.

ವಿದ್ಯಾರ್ಥಿಗಳು ಸಂಸ್ಕಾರ, ಸಂಸ್ಕೃತಿ, ಶಿಸ್ತು ಮತ್ತು ಶ್ರದ್ಧೆ ಎಂಬ ಬುನಾದಿಯ ಮೇಲೆ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ. ಗುರಿಯನ್ನು ನಿರ್ಧರಿಸಿಕೊಂಡು ಸರಿಯಾದ ಯೋಚನೆ, ಯೋಜನೆ ಮತ್ತು ವೇಳಾಪಟ್ಟಿಯನ್ನು ರೂಪಿಸಿಕೊಂಡು ಅನುಷ್ಠಾನಗೊಳಿಸಬೇಕು. ಪರೀಕ್ಷಾ ಸಿದ್ಧತೆಗಾಗಿ ಪಠ್ಯಪುಸ್ತಕ ಮತ್ತು ಇತರೆ ಪರಾಮರ್ಶನ ಪುಸ್ತಕಗಳನ್ನು ಅವಲಂಬಿಸಿಕೊಂಡು ಓದಬೇಕು. ವಿದ್ಯಾರ್ಥಿಗಳು ವಿನಯಶೀಲರಾಗಿದ್ದಾಗ ಅಯಾಚಿತವಾಗಿ ಗೆಲುವಿನ ಮೆಟ್ಟಿಲನ್ನೇರಬಹುದು. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ಪ್ರೇರಣೆ ಪಡೆದು ನಿರ್ಧರಿಸಿದ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ.

ಸಾಧಕರಾದ ಎನ್.ಆರ್‌. ರಚಿತ್, ನಿಮಿತಾ ಮಹೇಶ್, ಎಂ. ಸುಜನಾ, ಎನ್. ವರ್ಷಿತಾ, ಆರ್‌. ಸಿರಿ ಸಂವಾದದಲ್ಲಿ ಭಾಗವಹಿಸಿದ್ದರು.

ಎನ್.ಆರ್‌. ರಚಿತ್ ಮಾತನಾಡಿ, ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯಲು ತರಗತಿಯಲ್ಲಿ ಏಕಾಗ್ರತೆ ಮತ್ತು ತನ್ಮಯತೆಯಿಂದ ಪಾಠಗಳನ್ನು ಆಲಿಸುವುದು ಬಹಳ ಮುಖ್ಯ. ಎಲ್ಲ ವಿಷಯಗಳಿಗೂ ಸಮಾನ ರೀತಿಯ ಪ್ರಾಮುಖ್ಯತೆಯನ್ನು ನೀಡಿ ಓದುವುದರಿಂದ ಸಾಧನೆ ಸಾಧ್ಯ ಹಾಗೂ ವಾರಕ್ಕೆ ಕನಿಷ್ಠ ಹತ್ತು ಗಂಟೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಯಾಗಲು ಮೀಸಲಿಡಬೇಕು ಮತ್ತು ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕು ಎಂದು ಹೇಳಿದರು.

ನಿಮಿತಾ ಮಹೇಶ್ ಮಾತನಾಡಿ, ತರಗತಿಯಲ್ಲಿ ಅಧ್ಯಾಪಕರು ಪಾಠ ಮಾಡುವಾಗ ಮನಸ್ಸಿಟ್ಟು ಆಲಿಸಬೇಕು. ಮತ್ತು ಮುಖ್ಯಾಂಶಗಳನ್ನು ಪಟ್ಟಿ ಮಾಡಿಕೊಳ್ಳಬೇಕು. ಆ ದಿನದ ಪಾಠಗಳ ಅಂದೇ ಓದುವುದರಿಂದ ವಿಷಯಗಳ ಗ್ರಹಿಕೆ ಮತ್ತು ಹಿಡಿತವನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸುಜನಾ ಮಾತನಾಡಿ, ನಿರ್ದಿಷ್ಟ ಗುರಿಯಿದ್ದು, ಜೊತೆಯಲ್ಲಿ ಪರಿಶ್ರಮವೂ ಇದ್ದಾಗ ಗೆಲುವು ಸಾಧಿಸಬಹುದು. ಪ್ರತಿ ಕಿರುಪರೀಕ್ಷೆಗಳಲ್ಲೂ ಜವಾಬ್ದಾರಿಯಿಂದ ಭಾಗವಹಿಸುವುದು ಮುಖ್ಯ. ಪಠ್ಯ ವಿಷಯಗಳಲ್ಲಿ ಬರುವ ಸಂಶಯವನ್ನು ಶಿಕ್ಷಕರಲ್ಲಿ ಕೇಳಿ ಬಗೆಹರಿಸಿಕೊಂಡಾಗ ಓದು ಸುಲಭವಾಗುತ್ತದೆ. ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯಕ್ಕೆ ಗಮನ ನೀಡುತ್ತಾ ನಿರಂತರ ಅಧ್ಯಯನದಲ್ಲಿ ತೊಡಗಬೇಕು ಎಂದು ಹೇಳಿದರು.

ವರ್ಷಿತಾ ಮಾತನಾಡಿ, ಸಮಯದ ಪರಿಪಾಲನೆಯೊಂದಿಗೆ ಸತತ ಅಭ್ಯಾಸದಿಂದ ಸಾಧನೆ ಸಾಧ್ಯ ಎಂದು ಹೇಳಿದರು.

ಆರ್‌. ಸಿರಿ ಮಾತನಾಡಿ, ತರಗತಿಗಳನ್ನು ತಪ್ಪಿಸದೆ ಗಮನವಿಟ್ಟು ಪಾಠ ಕೇಳುವುದರಿಂದ ಪರೀಕ್ಷೆಗಳನ್ನು ಎದುರಿಸಲು ವಿಶ್ವಾಸ ಮೂಡುವುದು ಎಂದು ಹೇಳಿದರು.

ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸಮಯದ ನಿರ್ವಹಣೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ಕುರಿತು ಕೇಳಿದ ಹಲವಾರು ಪ್ರಶ್ನೆಗಳಿಗೆ ಸಾಧಕ ವಿದ್ಯಾರ್ಥಿಗಳು ಸೂಕ್ತವಾದ ಮತ್ತು ಸಮರ್ಪಕವಾದ ಉತ್ತರಗಳನ್ನು ನೀಡಿದರು.

ಶ್ರೀಪ್ರದ ಪ್ರಾರ್ಥಿಸಿದರು, ಎಂ.ಎನ್.ಆರ್‌. ಜಾಹ್ನವಿ ಸ್ವಾಗತಿಸಿದರು. ಅನಿರುದ್ಧ ನಿರೂಪಿಸಿದರು, ವೈ. ಸಂಜನಾ ವಂದಿಸಿದರು.

Share this article