ಕನಕಗಿರಿ: ತಾಲೂಕಿನೆಲ್ಲೆಡೆ ವಿಜಯದಶಮಿ ಹಬ್ಬವನ್ನು ದೇವಿ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.
ಉಡಿ ತುಂಬುವ ಕಾರ್ಯಕ್ರಮ:
ಅವಧೂತ ಸಚ್ಚಿದಾನಂದರ ಮಠದಲ್ಲಿ ಹಮ್ಮಿಕೊಂಡಿರುವ ದೇವಿ ಪುರಾಣ ಪ್ರವಚನದಲ್ಲಿ ಶ್ರೀಕನಕಾಚಲಪತಿ ದೇವಸ್ಥಾನ ಸಮಿತಿ ನಿರ್ಣಯಿಸಿದಂತೆ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಶಾಂಭವಿಯು ರಾಕ್ಷಸ ರಕ್ತ ಬೀಜಾಸುರನ ಸಂಹರಿಸುವ ಪರಿ ಪಂಡಿತ್ ಸಂಗನಬಸಯ್ಯ ಶರಣರು ಸವಿಸ್ತಾರವಾಗಿ ವಿವರಿಸಿದರು.ಕೆ. ಕಾಟಾಪುರದಲ್ಲಿ ನಿತ್ಯ ದಾಸೋಹ:
ಸತತ ೧೭ ವರ್ಷಗಳಿಂದ ತಾಲೂಕಿನ ಕೆ. ಕಾಟಾಪೂರದಲ್ಲಿ ನಡೆಯುತ್ತಿರುವ ಶ್ರೀದೇವಿ ಮಹಾತ್ಮೆ ಪುರಾಣದಲ್ಲಿ ೯ ದಿನಗಳ ಕಾಲ ನಿತ್ಯ ದಾಸೋಹ ನಡೆಯಿತು. ಗ್ರಾಮಸ್ಥರೆಲ್ಲರೂ ಪುರಾಣದಲ್ಲಿ ಭಾಗಿಯಾಗಿ ದೇವಿಯ ಆರಾಧನೆ, ಸ್ಮರಣೆ ಮಾಡಿದರು. ಗದುಗಿನ ಬೆಟ್ಟದಯ್ಯ ಶಾಸ್ತ್ರೀ ಹಾಗೂ ಗುರುಸಿದ್ದಯ್ಯ ಸವಡಿಮಠ ಪ್ರವಚನ ಮಾಡಿದರು. ಎಸ್.ಎಸ್.ನಾರಾಯಣ ತಬಲಾ ಸಾಥ್ ನೀಡಿದರು.ವಿವಿಧ ಉತ್ಸವಗಳು:
ಮುಜರಾಯಿ ಇಲಾಖೆಯ ಶ್ರೀಕನಕಾಚಲಪತಿ ದೇವಸ್ಥಾನದಲ್ಲಿ ಶೇಷೋತ್ಸವ, ಗರುಡೋತ್ಸವ, ಗಜೋತ್ಸವ ಸೇರಿದಂತೆ ವಿವಿಧ ವಾಹನ ಉತ್ಸವಗಳಿಗೆ ವಿಶೇಷವಾಗಿ ಅಲಂಕರಿಸಿ ಹಬ್ಬವನ್ನು ಭಕ್ತಿಯಿಂದ ಆಚರಿಸಲಾಯಿತು.