ಕನ್ನಡಪ್ರಭ ವಾರ್ತೆ ಮೇಲುಕೋಟೆ
ಮೈಸೂರು ಯದುವಂಶದ ಕುಲದೈವ ಮಹಾವಿಷ್ಣು ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿಯ ವಿಜಯದಶಮಿಯ ಉತ್ಸವ ಶನಿವಾರ ವೈಭವದಿಂದ ನೆರವೇರಿತು.ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ 25 ಸಾವಿರಕ್ಕೂ ಹೆಚ್ಚು ಭಕ್ತರು ಸ್ವಾಮಿಯ ದರ್ಶನ ಕಣ್ತುಂಬಿಕೊಂಡರು. ಭಕ್ತರ ಇಷ್ಟಾರ್ಥ ಕರುಣಿಸಲು ಧರೆಗಿಳಿದ ಚಕ್ರವರ್ತಿಯಂತೆ ರಾಜಾಲಂಕಾರದಲ್ಲಿ ಚೆಲುವನಾರಾಯಣಸ್ವಾಮಿ ಕಂಗೊಳಿಸಿದರು.
ತ್ರೇತಾಯುಗದಲ್ಲಿ ಶ್ರೀರಾಮಚಂದ್ರನು ದಶಕಂಠ ರಾವಣೇಶ್ವರನನ್ನು ಸಂಹಾರಮಾಡಿದ ಪ್ರತೀಕವಾಗಿ ವಿಜಯದಶಮಿ ಆಚರಣೆಯಲ್ಲಿದ್ದು, ಭಾರತೀಯ ಪರಂಪರೆಯಂತೆ ಮೇಲುಕೋಟೆಯಲ್ಲಿ ಸಾಕ್ಷಾತ್ ಶ್ರೀಮನ್ನಾರಾಯಣನಿಗೆ ವಿಜಯದಶಮಿ ಉತ್ಸವ ನೆರವೇರುತ್ತಾ ಬಂದಿದೆ.ವಿಜಯದಶಮಿಯಂದು ಶಂಖ, ಚಕ್ರ, ಗದಾ,ಪದ್ಮ ಕತ್ತಿ, ಬಿಲ್ಲುಬಾಣ ಮುಂತಾದ ದಿವ್ಯಾಯುಧಗಳನ್ನು ಧರಿಸಿ ಮೈಸೂರು ಪೇಟ, ಜರತಾರಿ ರೇಷ್ಮೆಪಂಚೆಯೊಂದಿಗೆ ಭವ್ಯವಾಗಿ ಅಲಂಕೃತನಾದ ಮೂಲಮೂರ್ತಿ ಚೆಲ್ವತಿರುನಾರಾಯಣಸ್ವಾಮಿ ದಿವ್ಯಸುಂದರ ರೂಪವನ್ನು ಭಕ್ತರು ಜಯಘೋಷ ಹಾಕುತ್ತಾ ಕಣ್ತುಂಬಿಕೊಂಡರು.
ಬೆಳಗ್ಗೆಯಿಂದಲೇ ಸಹಸ್ರಾರು ಸಂಖ್ಯೆಯ ಭಕ್ತರು ತಂಡೋಪತಂಡವಾಗಿ ದೇವಾಲಯಗಳಿಗೆ ಆಗಮಿಸಿ ಸರತಿಸಾಲಿನಲ್ಲಿ ನಿಂತು ಚೆಲುವನ ದರ್ಶನ ಪಡೆಯುತ್ತಿದ್ದ ದೃಶ್ಯ ಇಡೀ ದಿನ ಕಂಡು ಬಂತು. ಬೆಟ್ಟದೊಡೆಯ ಕುಂತಸಿಂಗ್ರಿ, ಯೋಗನರಸಿಂಹಸ್ವಾಮಿಗೂ ಪಾರಂಪರಿಕವಾದ ಮಹಾರಾಜರ ಅಲಂಕಾರ ಮಾಡಲಾಯಿತು.ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ, ಪಾರುಪತ್ತೇಗಾರರಾದ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ, ದೇಗುಲದ ಕೈಂಕರ್ಯಪರರು ಮತ್ತು ಸಿಬ್ಬಂದಿಯ ಸಹಕಾರದಲ್ಲಿ ವಿಜಯದಶಮಿಯನ್ನು ಯಶಸ್ವಿಯಾಗಿ ನಡೆಸಿದರು. ಬೆಳಗ್ಗೆ ಸತತವಾಗಿ ಮಳೆ ಸುರಿಯುತ್ತಿದ್ದರೂ ಸಹ 9 ಗಂಟೆಯಿಂದ ಮಳೆರಾಯ ಬಿಡುವು ನೀಡಿದ ಕಾರಣ ಭಕ್ತರ ದೇವರದರ್ಶನಕ್ಕೆ ಯಾವುದೇ ತೊಂದರೆಯಾಗಲಿಲ್ಲ.
ಪೊಲೀಸ್ ಇಲಾಖೆ ಮತ್ತು ಗ್ರಾಪಂ ಭಕ್ತರ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡದೇ ವಾಹನ ದಟ್ಟಣೆ ಉಂಟಾಗಿತ್ತು. ವೇದಾಂತ ದೇಶಿಕರ ತಿರುನಕ್ಷತ್ರ ಮಹೋತ್ಸವ ಶಠಾರಿ ಮೆರವಣಿಗೆಗೂ ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದ ಭಕ್ತರ ವಾಹನಗಳಿಂದ ಅಡಚಣೆಯಾಯಿತು. ಭಕ್ತರ ದಟ್ಟಣೆ ನಿಯಂತ್ರಿಸಲು ದೇವಾಲಯಕ್ಕೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸದ ಕಾರಣ ದೇವಾಲಯದಲ್ಲೂ ಕೆಲಕಾಲ ನೂಕುನುಗ್ಗಲು ಉಂಟಾಗಿತ್ತು.