ಈ ಬಾರಿಯೂ ವಿಜಯನಗರ ಶಾಸಕರಿಗಿಲ್ಲ ಸಚಿವ ಸ್ಥಾನ ಭಾಗ್ಯ

KannadaprabhaNewsNetwork |  
Published : Aug 04, 2026, 01:45 AM IST
ವಿಜಯನಗರ | Kannada Prabha

ಸಾರಾಂಶ

ಅಖಂಡ ಬಳ್ಳಾರಿಯಿಂದ ವಿಭಜನೆಯಾಗಿ ವಿಜಯನಗರ ಹೊಸ ಜಿಲ್ಲೆಯಾದ ಬಳಿಕ‌ ನಡೆದ ಚುನಾವಣೆಯಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರು ಮತ್ತು ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಸೇರಿ‌ ಮೂವರು ಶಾಸಕರು ತೆರೆಮರೆಯಲ್ಲಿ ಸಂಪುಟ ಸೇರಲು ಕಸರತ್ತು ನಡೆಸಿದ್ದರು. ಆದರೆ, ಸೋಮವಾರ ನಡೆದ ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಗೆ ಮತ್ತೆ ನಿರಾಸೆಯಾಗಿದೆ.

ಸಿ.ಕೆ. ನಾಗರಾಜ

ಹೊಸಪೇಟೆ: ಅಖಂಡ ಬಳ್ಳಾರಿಯಿಂದ ವಿಭಜನೆಯಾಗಿ ವಿಜಯನಗರ ಹೊಸ ಜಿಲ್ಲೆಯಾದ ಬಳಿಕ‌ ನಡೆದ ಚುನಾವಣೆಯಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರು ಮತ್ತು ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಸೇರಿ‌ ಮೂವರು ಶಾಸಕರು ತೆರೆಮರೆಯಲ್ಲಿ ಸಂಪುಟ ಸೇರಲು ಕಸರತ್ತು ನಡೆಸಿದ್ದರು. ಆದರೆ, ಸೋಮವಾರ ನಡೆದ ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಗೆ ಮತ್ತೆ ನಿರಾಸೆಯಾಗಿದೆ.

ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಮೂರು ವರ್ಷಗಳಿಂದ ಜಿಲ್ಲೆಗೆ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಸಚಿವ ಸಂಪುಟದಲ್ಲೂ ಜಿಲ್ಲೆಗೆ ಪ್ರಾಶಸ್ತ್ಯ ಸಿಗದಿರುವುದು ಜಿಲ್ಲೆಯ ಕೈ ಕಾರ್ಯಕರ್ತರಲ್ಲಿ ಬೇಸರ ಮೂಡಿಸಿತ್ತು. ಇದೀಗಎರಡನೇ ಬಾರಿಗೆ ಮತ್ತೆ ಸಚಿವ ಸ್ಥಾನ ಪದಗ್ರಹಣ ಸಮಾರಂಭದಲ್ಲಿ‌ 19 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಆರ್. ಗವಿಯಪ್ಪ ಅವರು ಕಾಂಗ್ರೆಸ್‌ ಶಾಸಕರಾಗಿದ್ದು, ಈ ಹಿಂದೆ ಪಕ್ಷೇತರ ಶಾಸಕರಾಗಿ ಕಾಂಗ್ರೆಸ್‌ ಬೆಂಬಲಿತ ಶಾಸಕರಾಗಿದ್ದು, ಎರಡು ಬಾರಿ ಶಾಸಕರಾದ ಅನುಭವ ಮತ್ತು ಪ್ರದೇಶ್ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಬಿ. ಕೆ. ಹರಿಪ್ರಸಾದ್ ಅವರು ಮತ್ತು ಎಚ್.ಆರ್. ಗವಿಯಪ್ಪ ಇಬ್ಬರು ಈಡಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿಯ ಸಚಿವ ಸಂಪುಟದಲ್ಲಿ ಗವಿಯಪ್ಪ ಅವರು ಹೇಗಾದರೂ ಮಾಡಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಬಹುದು ಎನ್ನುವುದು ಕ್ಷೇತ್ರದ ಜನರ ನಂಬಿಕೆಯಾಗಿತ್ತು. ಆದರೆ, ಕ್ಷೇತ್ರದ ಜನರ ನಂಬಿಕೆ ಸುಳ್ಳಾಗಿದೆ.

ಇದೇ ರೀತಿಯಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಎನ್.‌ಟಿ. ಶ್ರೀನಿವಾಸ ಸಹ ಕಾಂಗ್ರೆಸ್‌ ಶಾಸಕರಾಗಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇವರೂ ಈ ಬಾರಿ ಸಚಿವ ಸ್ಥಾನವನ್ನು ಪಡೆಯಲು ಅತ್ಯಂತ ಉತ್ಸುಕರಾಗಿದ್ದರು. ಇವರ ತಂದೆ ಸಹ ಕಾಂಗ್ರೆಸ್‌ನಲ್ಲಿ ಎರಡು ಬಾರಿ ಶಾಸಕರಾಗಿದ್ದರು. ಈ ಹಿನ್ನೆಲೆಯಲ್ಲಿ‌‌ ಎನ್.ಟಿ. ಶ್ರೀನಿವಾಸ ಅವರೂ ಸಚಿವರಾಗಬಹುದು ಎಂದು ಕ್ಷೇತ್ರದ ಜನರು ನಿರೀಕ್ಷೆ ಹೊಂದಿದ್ದರು. ಆದರೆ, ಅದೀಗ ಸುಳ್ಳಾಗಿದೆ.

ಅಖಂಡ ಬಳ್ಳಾರಿ ಜಿಲ್ಲೆಯ ರಾಜಕೀಯ ಮುತ್ಸದ್ಧಿ ಹಾಗೂ ರಾಜ್ಯದ ಉಪ‌ ಮುಖ್ಯಮಂತ್ರಿಯಾಗಿದ್ದ ಎಂ.ಪಿ. ಪ್ರಕಾಶ್ ಅವರ ಪುತ್ರಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಮಹಿಳಾ ಕೋಟದಲ್ಲಿಯಾದರೂ ಅಥವಾ ಎಂ.ಪಿ. ಪ್ರಕಾಶ್ ಪುತ್ರಿ ಎನ್ನುವ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು. ಆದರೆ, ವಿಜಯನಗರ ಜಿಲ್ಲೆಯಲ್ಲಿ ಯಾರೊಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಕಾಂಗ್ರೆಸ್‌ ಸರ್ಕಾರದಲ್ಲಿ ವಿಜಯನಗರ ಜಿಲ್ಲೆಗೆ ಹೊರ ಜಿಲ್ಲೆಯವರನ್ನೇ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗುತ್ತಿದೆ. ಬೇರೆ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಈ ಜಿಲ್ಲೆಯ ಬಗ್ಗೆ ಕಾಳಜಿಯಿಲ್ಲದೇ ಅಭಿವೃದ್ಧಿ ಕುಂಠಿತವಾಗುತ್ತ ಸಾಗಿದೆ. ಯಾವೊಂದು ಹೊಸ ಯೋಜನೆಗಳಾಗಲಿ ಅಥವಾ ಹೇಳಿಕೊಳ್ಳುವಂತ ಅಭಿವೃದ್ಧಿ ಕಾಮಗಾರಿಗಳು ಕಳೆದ ಮೂರೂವರೆ ವರ್ಷದಲ್ಲಿ ನಡೆದಿಲ್ಲ ಎನ್ನುವುದು ನೋವಿನ‌ ಸಂಗತಿಯಾಗಿದೆ. ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದು ಜಿಲ್ಲೆಯ ಎಲ್ಲ ಶಾಸಕರ ಹಕ್ಕೊತ್ತಾಯವಾಗಿತ್ತು. ಮತ್ತೊಮ್ಮೆ ವಿಜಯನಗರ ಜಿಲ್ಲೆಗೆ ತೀವ್ರ ಅಸಮಾಧಾನ ಉಂಟಾಗಿರುವುದಂತೂ ಸತ್ಯವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಭಿವೃದ್ಧಿ ಹರಿಕಾರ ರಾಯರಡ್ಡಿಗೆ ಮಂತ್ರಿಪಟ್ಟ
ಕೊಪ್ಪಳ ಜಿಲ್ಲೆಗೆ ಡಬಲ್ ಧಮಾಕಾ