ವಿಜಯಪುರದ ಕೆನರಾ ಬ್ಯಾಂಕಲ್ಲಿ ₹53 ಕೋಟಿ ಮೌಲ್ಯದ ಚಿನ್ನ ದರೋಡೆ

Published : Jun 03, 2025, 04:44 AM IST
Canara Bank

ಸಾರಾಂಶ

ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ದರೋಡೆ । ವಿಜಯಪುರದ ಕೆನರಾ ಬ್ಯಾಂಕಲ್ಲಿ ₹53 ಕೋಟಿ ಮೌಲ್ಯದ ಚಿನ್ನ ದರೋಡೆ

 ಬಸವನ ಬಾಗೇವಾಡಿ :  ರಾಜ್ಯದಲ್ಲಿ ಬ್ಯಾಂಕ್‌ ಹಾಗೂ ಎಟಿಎಂ ರಾಬರಿ ಪ್ರಕರಣಗಳು ಮುಂದುವರೆದಿದ್ದು, ಇದೀಗ ವಿಜಯಪುರ ಜಿಲ್ಲೆ ಮನಗೂಳಿಯಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಅಂದಾಜು ₹52.26 ಕೋಟಿ ಮೌಲ್ಯದ 58 ಕೆಜಿ 976 ಗ್ರಾಂ ಚಿನ್ನಾಭರಣ ಮತ್ತು ₹5.20 ಲಕ್ಷ ನಗದು ಕಳ್ಳತನದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೇ 23ರಂದೇ ಕೃತ್ಯ ಎಸಗಿರುವ ಶಂಕೆ ಇದ್ದು, ಕಳ್ಳರು ಈವರೆಗೂ ಪತ್ತೆಯಾಗಿಲ್ಲ. ಇದು ಚಿನ್ನದ ಮೌಲ್ಯದ ರೂಪದಲ್ಲಿ ರಾಜ್ಯದಲ್ಲಿಯೇ ಅತಿ ದೊಡ್ಡ ಬ್ಯಾಂಕ್‌ ಕಳ್ಳತನ ಎನ್ನಲಾಗುತ್ತಿದೆ. ಈ ಸಂಬಂಧ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ಕಲ್ಮೇಶ ಪೂಜಾರಿಯವರು ಮನಗೂಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಈ ಬಗ್ಗೆ ಮಾಹಿತಿ ನೀಡಿದರು. ಮೇ 23ರ ಸಂಜೆ 6 ಗಂಟೆಯಿಂದ 25ರ ಬೆಳಗ್ಗೆ 11.30ರ ಅವಧಿಯಲ್ಲಿ ಕೃತ್ಯ ಎಸಗಿರುವ ಶಂಕೆ ಇದೆ. ಕಳ್ಳರ ಪತ್ತೆಗೆ ಎಂಟು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. 6 ರಿಂದ 8 ಮಂದಿಯಿದ್ದ ಕಳ್ಳರ ತಂಡ ಈ ಕೃತ್ಯ ಎಸಗಿರುವ ಮಾಹಿತಿ ಲಭ್ಯವಾಗಿದೆ. ಆದರೆ, ಇನ್ನೂ ಕಳ್ಳರ ಸುಳಿವು ಪತ್ತೆಯಾಗಿಲ್ಲ ಎಂದು ತಿಳಿಸಿದರು.

ಎರಡು ದಿನಗಳ ಕಾಲ ಹೊಂಚು ಹಾಕಿ ಕಳ್ಳತನ ಮಾಡಿರುವ ಸಾಧ್ಯತೆ ಇದ್ದು, ಕಳ್ಳರು ಪಕ್ಕಾ ಮಾಸ್ಟರ್ ಪ್ಲ್ಯಾನ್ ಮಾಡಿಯೇ ಕೈಚಳಕ ತೋರಿದ್ದಾರೆ. ಲಾಕರ್ ತೆಗೆಯಲು ನಕಲಿ ಕೀ ಬಳಕೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಮೊದಲು ಬ್ಯಾಂಕ್‌ನ ಪ್ರವೇಶ ದ್ವಾರದ ಬೀಗ ಒಡೆದು, ಬ್ಯಾಂಕ್ ಒಳಗೆ ನುಗ್ಗಿರುವ ಕಳ್ಳರು, ಸೈರನ್ ಆಫ್ ಮಾಡಿದ್ದಾರೆ. ಬಳಿಕ, ಚಿನ್ನಾಭರಣ ಇಟ್ಟಿರುವ ಒಂದು ಲಾಕರ್‌ನ್ನು ಮಾತ್ರ ಓಪನ್ ಮಾಡಿ, ಕಳ್ಳತನ ನಡೆಸಿದ್ದಾರೆ. ಮತ್ತೊಂದು ಲಾಕರ್‌ನಲ್ಲಿರುವ ಚಿನ್ನಾಭರಣಕ್ಕೆ ಕಳ್ಳರು ಕೈ ಹಾಕಿಲ್ಲ. ತಮ್ಮ ಗುರುತು ಪತ್ತೆಯಾಗದಂತೆ ಬ್ಯಾಂಕ್‌ನಲ್ಲಿರುವ ಸಿಸಿ ಕ್ಯಾಮರಾಗಳನ್ನು ಆಫ್‌ ಮಾಡಿದ್ದು, ಎನ್.ವಿ.ಆರ್‌ ನ್ನು ತೆಗೆದುಕೊಂಡು ಹೋಗಿದ್ದಾರೆ ಎಂದರು.

ಕಳ್ಳತನ ಮಾಡಿದ ಬಳಿಕ ಪೊಲೀಸರು ಹಾಗೂ ಬ್ಯಾಂಕ್‌ ಅಧಿಕಾರಿಗಳ ದಿಕ್ಕು ತಪ್ಪಿಸಲು ಸ್ಥಳದಲ್ಲಿ ಕಪ್ಪು ಬಣ್ಣದ ಗೊಂಬೆಯೊಂದಕ್ಕೆ ಪೂಜೆ ಮಾಡಿದ್ದಾರೆ. ವಾಮಾಚಾರ ಮಾಡಿದ್ದಾರೆ ಎಂದು ಬಿಂಬಿಸಿ ಕಳ್ಳರು ತನಿಖೆಯ ದಾರಿ ತಪ್ಪಿಸುವುದಕ್ಕೆ ಮಾಡಿರುವ ಯೋಜನೆಯಿದು ಎಂದು ಅವರು ತಿಳಿಸಿದರು .

ಹೆಚ್ಚುತ್ತಿದೆ ಬ್ಯಾಂಕ್‌ ಕಳ್ಳತನ:

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ ಹಾಗೂ ಎಟಿಎಂ ದರೋಡೆ ಪ್ರಕರಣಗಳು ಹೆಚ್ಚುತ್ತಿವೆ. 2024ರ ಅಕ್ಟೋಬರ್‌ 26ರಂದು ದಾವಣಗೆರೆ ಜಿಲ್ಲೆ ನ್ಯಾಮತಿಯ ಎಸ್‌ಬಿಐ ಬ್ಯಾಂಕ್‌ನಲ್ಲಿ 17 ಕೆಜಿ ಚಿನ್ನವನ್ನು ದರೋಡೆ ಮಾಡಲಾಗಿತ್ತು. ಬಳಿಕ, ಜನವರಿ 16 ರಂದು ಬೀದರ್‌‌​ನಲ್ಲಿ ಎಟಿಎಂಗೆ ಹಣ ತುಂಬಲು ಬಂದಿದ್ದ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಹಣ ದೋಚಲಾಗಿತ್ತು. ಮಂಗಳೂರಿನಲ್ಲಿ ಜನವರಿ 17 ರಂದು ಹಾಡ ಹಗಲೇ ಬ್ಯಾಂಕ್ ಸಿಬ್ಬಂದಿಗೆ ​ಬಂದೂಕು ತೋರಿಸಿ ಆಗಂತುಕರು ಸುಮಾರು 12 ಕೋಟಿ ರು. ಹಣ ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಜನವರಿ 20ರಂದು ಹುಬ್ಬಳ್ಳಿಯ ನವನಗರದ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ದರೋಡೆಗೆ ವಿಫಲ ಯತ್ನ ನಡೆದಿತ್ತು. ಮಾರ್ಚ್‌ 30ರಂದು ಮಂಗಳೂರಿನ ದೇರ್ಲಕಟ್ಟೆಯಲ್ಲಿರುವ ಮುತ್ತೂಟ್‌ ಫೈನಾನ್ಸ್‌ ಶಾಖೆಯಲ್ಲಿ ದರೋಡೆಗೆ ವಿಫಲ ಯತ್ನ ನಡೆದಿತ್ತು.

ಮೇ 23ರಂದು 6-8 ಜನರ ತಂಡದಿಂದ ಮನಗೂಳಿಯಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಭಾರೀ ದರೋಡೆ

ಬ್ಯಾಂಕ್‌ನ ಪ್ರವೇಶ ದ್ವಾರದ ಬೀಗ ಒಡೆದು ಒಳಗೆ ನುಗ್ಗಿ ಬಳಿಕ ಸೈರನ್ ಆಫ್ ಮಾಡಿ ಚಿನ್ನ ಕಳ್ಳತನ

ಬಳಿಕ ನಕಲಿ ಕೀ ಬಳಸಿ ಲಾಕರ್‌ ತೆಗೆದು 59 ಕೆಜಿ ಚಿನ್ನ, 5 ಲಕ್ಷ ರು. ನಗದು ಲೂಟಿ ಮಾಡಿ ಪರಾರಿ

ತಮ್ಮ ಗುರುತು ಪತ್ತೆ ತಡೆಗೆ ಸಿಸಿ ಕ್ಯಾಮೆರಾ ಆಫ್‌ ಮಾಡಿ ಎನ್‌ವಿಆರ್‌ನೊಂದಿಗೆ ಕಳ್ಳರ ತಂಡ ಎಸ್ಕೇಪ್‌

ಹಣದ ಮೌಲ್ಯದ ಲೆಕ್ಕಾಚಾರದಲ್ಲಿ ಇದು ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಚಿನ್ನ ದರೋಡೆಯ ಪ್ರಕರಣ

ಇತ್ತೀಚೆಗಷ್ಟೇ ಮಂಗಳೂರು, ನ್ಯಾಮತಿ, ಮಂಗಳೂರು, ಹುಬ್ಬಳ್ಳಿಯಲ್ಲೂ ನಡೆಸಿದ್ದ ಬ್ಯಾಂಕ್‌ ದರೋಡೆ

PREV
Read the latest news, updates and stories from Vijayanagara district (ವಿಜಯನಗರ ಸುದ್ದಿ) in Karnataka on Kannada Prabha. Coverage includes local governance, development works, agriculture, tourism (including Hampi and heritage), environment, crime, social issues, and district events.
Read more Articles on

Recommended Stories

ನರೇಗಾ ಯೋಜನೆಯ ಉಳಿವಿಗಾಗಿ ಹೋರಾಟಕ್ಕೆ ಸಿದ್ಧರಾಗಿ: ಶಾಸಕಿ ಎಂ.ಪಿ.ಲತಾ
ಬೈಕ್‌ ಸವಾರರಿಗೆ ಹೆಲ್ಮೆಟ್‌ ಕಡ್ಡಾಯ: ಡಿವೈಎಸ್ಪಿ ಸಂತೋಷ ಚೌಹಾಣ್‌