ಸಮಾಜೋದ್ಧಾರಕ್ಕೆ ಶ್ರಮಿಸಿದ ವಿಜಯಾನಂದ ಸ್ವಾಮೀಜಿ: ನಿಜಗುಣಾನಂದ ಶ್ರೀ

KannadaprabhaNewsNetwork |  
Published : Jan 26, 2025, 01:31 AM IST
ಬೈಲಹೊಂಗಲ ತಾಲೂಕಿನ ಬೇವಿನಕೊಪ್ಪ ಗ್ರಾಮದಲ್ಲಿ ನಡೆದ ಅವಧೂತ ವಿಜಯಾನಂದ ಶ್ರೀಗಳ 75 ನೇ ವರ್ಷದ ವಜ್ರ ಮಹೋತ್ಸವ ಹಾಗೂ ಗುರು ವಂದನಾ ಕಾರ್ಯಕ್ರಮದಲ್ಲಿ ಶ್ರೀಗಳು ಕೇಕ್ ಕಟ್ ಮಾಡಿದರು. | Kannada Prabha

ಸಾರಾಂಶ

ಧಾರ್ಮಿಕ, ಅಧ್ಯಾತ್ಮಿಕ, ಸಾಮಾಜಿಕ, ಪಾರಂಪರಿಕ ವೈದ್ಯಕೀಯ ಸೇವೆಗಳ ಮೂಲಕ ಸಮಾಜದ ಉದ್ಧಾರದಲ್ಲಿ ವಿಜಯಾನಂದ ಶ್ರೀಗಳ ಪಾತ್ರ ಅನನ್ಯವಾಗಿದ್ದು, ಅವರು ಮಾಡುವ ಕಾರ್ಯಗಳಿಗೆ ಭಕ್ತರು ಶಕ್ತಿ ತುಂಬಲಿ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಧಾರ್ಮಿಕ, ಅಧ್ಯಾತ್ಮಿಕ, ಸಾಮಾಜಿಕ, ಪಾರಂಪರಿಕ ವೈದ್ಯಕೀಯ ಸೇವೆಗಳ ಮೂಲಕ ಸಮಾಜದ ಉದ್ಧಾರದಲ್ಲಿ ವಿಜಯಾನಂದ ಶ್ರೀಗಳ ಪಾತ್ರ ಅನನ್ಯವಾಗಿದ್ದು, ಅವರು ಮಾಡುವ ಕಾರ್ಯಗಳಿಗೆ ಭಕ್ತರು ಶಕ್ತಿ ತುಂಬಲಿ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ತಾಲೂಕಿನ ಬೇವಿನಕೊಪ್ಪ ಗ್ರಾಮದ ಭಗವಾನ ನಿತ್ಯಾನಂದ ಆನಂದಾಶ್ರಮದಲ್ಲಿ ಶುಕ್ರವಾರ ಜರುಗಿದ ವಿಜಯಾನಂದ ಶ್ರೀಗಳ ಜನ್ಮದಿನದ ವಜ್ರ ಮಹೋತ್ಸವ (75) ಹಾಗೂ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಒಬ್ಬ ಸನ್ಯಾಸಿ ಮಾನವ ಕುಲವನ್ನು ಉದ್ಧಾರ ಮಾಡಬೇಕೆಂದು ಹಠ ತೊಟ್ಟರೆ ಆ ಭಾಗವೇ ಪುಣ್ಯಮಯವಾಗಿ ಜನರು ಸುಖ, ಶಾಂತಿಯಿಂದ ಬದುಕಲು ಸಾಧ್ಯವಾಗುತ್ತದೆ. ವೀರ, ಶೂರರ ನಾಡಿನ ಬೇವಿನಕೊಪ್ಪ ಪರಿಸರದಲ್ಲಿ ಅವಧೂತ ಶ್ರೀಗಳು ಪರಮಾತ್ಮನೇ ಮೆಚ್ಚುವಂತಹ ಅಗಾಧ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.

ರಾಜ್ಯ ಧಾರ್ಮಿಕ ದತ್ತಿ ಇಲಾಖೆ ನಿರ್ಧೇಶಕ ಡಾ.ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಮಾತನಾಡಿ, ಲೋಕ ಕಲ್ಯಾಣದ ದೃಷ್ಟಿಯಿಂದಲೇ ಮಠ, ಮಂದಿರಗಳು ಸ್ಥಾಪನೆಯಾಗಿದ್ದು, ಚಿಕ್ಕ ಗ್ರಾಮದಲ್ಲಿ ಚಿಕ್ಕ ಗುಡಿಸಲಿನಿಂದ ಪ್ರಾರಂಭಗೊಂಡ ಶ್ರೀಗಳ ಸೇವೆ ಪ್ರಸ್ತುತ ಇಡೀ ರಾಷ್ಟ್ರಕ್ಕೆ ವ್ಯಾಪಿಸಿದೆ. ಹಲವಾರು ಕ್ರಿಯಾಶೀಲ ವಿಧಾಯಕ ಕಾರ್ಯಗಳಿಂದ ಪ್ರತಿಭಾವಂತರನ್ನು ಸಮಾಜಕ್ಕೆ ಪರಿಚಯಿಸುವಲ್ಲಿ ಅವಿರತವಾಗಿ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿದರು. ಸುಕ್ಷೇತ್ರ ಸೊಗಲ ಅವಧೂತ ಆಶ್ರಮದ ಚಿದಾನಂದ ಅವಧೂತ ಮಹಾರಾಜ, ದೇವಲಾಪೂರ ಸಿದ್ಧಾರೂಢ ಮಠದ ಶಿವಾನಂದ ಭಾರತಿ ಶ್ರೀಗಳು, ಮಲ್ಲೂರು ನಿತ್ಯಾನಂದ ಆಶ್ರಮದ ಮೃತ್ಯುಂಜಯ ಸ್ವಾಮೀಜಿ, ಕಾಯಿಂಗಾಡ ನಿತ್ಯಾನಂದ ಆಶ್ರಮದ ವಿದ್ಯಾನಂದ ಭಾರತಿ, ಕುಶಾಲ ನಗರ ಆಶ್ರಮದ ಗಣಪತಿ ಪುರಿ, ಅಂಕೋಲಾ ನಿತ್ಯಾನಂದ ಆಶ್ರಮದ ಗೋವಿಂದ ಗುರೂಜಿ, ನಿವೃತ್ತ ಅಭಿಯಂತರ ರಮೇಶ ಜಂಗಲ್, ಮುಂಬಯಿ ಉದ್ಯಮಿ ಸುನೀಲ ನಾಯಕ, ಹೋಟೆಲ್ ಉದ್ಯಮಿ ವಿಠ್ಠಲ ಹೆಗಡೆ, ತುಳು ಚಲನಚಿತ್ರ, ನಾಟಕ ನಿರ್ದೇಶಕ ವಿಜಯಕುಮಾರ ಕೊಡಿಯಾಬೈಲ್, ನಿವೃತ್ತ ಪ್ರಾಚಾರ್ಯ ಆರ್.ಸಿ. ಗೌರನ್ನವರ, ಶಂಕರ ಮಾಡಲಗಿ, ಮುಂಬಯಿ ಉದ್ಯಮಿಗಳಾದ ಕುಮಾರ ಬಂಗೇರಾ, ಸತ್ಯಾ ಕೋಟ್ಯಾನ್, ದಿವಾಕರ ಶೆಟ್ಟಿ, ನಿರ್ದೇಶಕ ನಟ ಕಾಸರಗೋಡು ಚಿನ್ನ, ಅಮಟೂರ ಗ್ರಾಪಂ ಅಧ್ಯಕ್ಷ ಮಹಾಂತೇಶ ಮರೆಕ್ಕನ್ನವರ, ಮುಖ್ಯಶಿಕ್ಷಕ ಎಸ್.ಬಿ. ಹೊಸಮನಿ, ಶಂಕರ ನಾಯರ, ಶ್ರೀನಾಥ ಶನೈ, ಸುರೇಶ ಮಾಟೊಳ್ಳಿ, ಮಹಾಂತೇಶ ಉರಬಿನ ವೇದಿಕೆ ಮೇಲಿದ್ದರು. ಗಣ್ಯರು, ನೂರಾರು ಭಕ್ತರು ಪಾಲ್ಗೊಂಡಿದ್ದರು. ಸಮಾಜ ಕಲ್ಯಾಣ ಇಲಾಖೆಯ ಗೋಕಾಕ ತಾಲೂಕಾಧಿಕಾರಿ ಅಶೋಕ ಮಾಲಬನ್ನವರ ಸ್ವಾಗತಿಸಿದರು. ಗೋರೇಸಾಬ್ ನಧಾಪ್ ನಿರೂಪಿಸಿದರು. ಮಲ್ಲಿಕಾರ್ಜುನ ಪೂಜೇರ ವಂದಿಸಿದರು. ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿದವು.

ಗ್ರಂಥಗಳ ಲೋಕಾರ್ಪಣೆ: ಅವಧೂತ ವಿಜಯಾನಂದ ಶ್ರೀಗಳು ರಚಿಸಿದ ಅವಧೂತ ದರ್ಶನ ಹಾಗೂ ಪಥವರಿಯದ ಪಯಣಿಗ ಗ್ರಂಥಗಳನ್ನು ನಿಜಗುಣಾನಂದ ಶ್ರೀಗಳು ಹಾಗೂ ಗಣ್ಯರು ಲೋಕಾರ್ಪಣೆಗೊಳಿಸಿದರು. ವಿಜಯಾನಂದ ಶ್ರೀಗಳು 75 ವಸಂತ ಕಂಡು ವಜ್ರ ಮಹೋತ್ಸವದ ಹೊಸ್ತಿಲಲ್ಲಿರುವ ಪ್ರಯುಕ್ತ ಶಾಸಕ ಮಹಾಂತೇಶ ಕೌಜಲಗಿ ಸೇರಿದಂತೆ ಭಕ್ತರು ಪಾದಪೂಜೆ ನೆರವೇರಿಸಿ ಸಿಹಿ ಹಂಚಿದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!