ಶಿಕಾರಿಪುರ : ಶಿವಮೊಗ್ಗ ಲೋಕಸಭಾ ಕ್ಷೇತ್ರವ್ಯಾಪ್ತಿಗೆ ಬರುವ ಶಿಕಾರಿಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಮ್ಮ ಹಿರಿಯ ಸಹೋದರ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ.ರಾಘವೇಂದ್ರ ಪರ ಭಾನುವಾರ ಭರ್ಜರಿ ಪ್ರಚಾರ ನಡೆಸಿದರು.
ಎರಡು ದಿನಗಳ ಕಾಲ ಪ್ರಚಾರಕ್ಕಾಗಿ ಆಗಮಿಸಿರುವ ವಿಜಯೇಂದ್ರ, ಸೋಮವಾರವೂ ಶಿಕಾರಿಪುರ ಕ್ಷೇತ್ರ ವ್ಯಾಪ್ತಿಯಲ್ಲಿ ರಾಘವೇಂದ್ರ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ತವರು ಕ್ಷೇತ್ರ ಶಿಕಾರಿಪುರದಲ್ಲಿ ರಾಘವೇಂದ್ರಗೆ ಹೆಚ್ಚಿನ ಲೀಡ್ ಕೊಡಿಸಲು ಪಣ ತೊಟ್ಟಿರುವ ಅವರು, ಭಾನುವಾರ ಶಿಕಾರಿಪುರ ತಾಲೂಕಿನ ಕಾಗಿನೆಲ್ಲಿ, ಹಿತ್ತಲ, ಈಸೂರು ,ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಅವರು ಪ್ರಚಾರ ನಡೆಸಿ, ಬಿಜೆಪಿ ಪರ ಮತಯಾಚಿಸಿದರು.
ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ನಮ್ಮ ನಿರೀಕ್ಷೆಗೆ ಮೀರಿ ಬಿಜೆಪಿ ಪರ ಒಲವು ಕಾಣಿಸುತ್ತಿದೆ. ಮೋದಿ ಜನಪ್ರಿಯತೆ ದಿನೇ ದಿನೆ ಹೆಚ್ಚಾಗುತ್ತಿದೆ. ಇದು ಕಾಂಗ್ರೆಸ್ ಪಕ್ಷದ ನಿದ್ದೆಗೆಡಿಸಿದೆ. ಮನೆ, ಮನೆಯಲ್ಲಿ ಮೋದಿ ಬಗ್ಗೆ ಮಾತನಾಡುತ್ತಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಬೇಕು ಎಂದು ಹರಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ 28 ಕ್ಷೇತ್ರಗಳಲ್ಲೂ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ. ಕಾಂಗ್ರೆಸ್‌ಗೆ ರಾಜ್ಯದಲ್ಲಿ ಒಂದು ಸ್ಥಾನವೂ ಬರುವುದಿಲ್ಲ. ರಾಘವೇಂದ್ರ ಮಾಡಿರುವ ಅಭಿವೃದ್ಧಿ ಬಗ್ಗೆ ಕ್ಷೇತ್ರದ ಜನ ಮಾತನಾಡುತ್ತಿದ್ದಾರೆ. ರಾಘವೇಂದ್ರ ಈ ಬಾರಿ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದರು.
ಮುಂಬರುವ ದಿನಗಳಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರಾಜ್ಯಕ್ಕೆ ಪ್ರಚಾರಕ್ಕೆ ಬರಲಿದ್ದಾರೆ ಎಂದು ಇದೇ ವೇಳೆ ಅವರು ತಿಳಿಸಿದರು.
ಈಶ್ವರಪ್ಪನವರೇ ನಮ್ಮ ಜೊತೆ ಬನ್ನಿ: ಬಿವೈವಿ
ಶಿವಮೊಗ್ಗ : ಈಶ್ವರಪ್ಪ ಅವರಿಗೆ ಇನ್ನೂ ಕಾಲ ಮಿಂಚಿಲ್ಲ. ಅವರೂ ಸಹ ನಮ್ಮ ಜೊತೆ ಇರಬೇಕು ಎಂಬುದು ನಮ್ಮ ಆಸೆ. ನಮ್ಮ ಜೊತೆ ಕೈ ಜೋಡಿಸಿ ಎಂದು ವಿನಂತಿ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಶ್ವರಪ್ಪನವರು ಹಿರಿಯರು, ಪಕ್ಷ ಕಟ್ಟಲು ನಿಮ್ಮದು ದೊಡ್ಡ ಪಾಲಿದೆ. ಯಾವುದೋ ಪರಿಸ್ಥಿತಿ, ಸಂದರ್ಭ ಈ ಸನ್ನಿವೇಶಕ್ಕೆ ತಮ್ಮನ್ನು ದೂಡಿದೆ. ಮೋದಿ ಪ್ರಧಾನಿ ಆಗಲು ಪಕ್ಷದ ಹಿತದೃಷ್ಟಿಯಿಂದ ತಾವು ಕೈಜೋಡಿಸಬೇಕು. ನಿಮ್ಮ ಸಮಸ್ಯೆ ಇದ್ದರೆ ದೆಹಲಿ ನಾಯಕರ ಜೊತೆ ಮಾತನಾಡುತ್ತೇವೆ. ನಾವಂತು ನಿಮ್ಮ ಜೊತೆ ಇರುತ್ತೇವೆ ಎಂದು ಭರವಸೆ ನೀಡಿದರು.ಇದೇ ವೇಳೆ, ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ ವಿಜಯೇಂದ್ರ, ಕಾಂಗ್ರೆಸ್ ಪಕ್ಷ ದಿಕ್ಕಾಪಾಲಾಗಿದೆ. ರಾಜ್ಯದಲ್ಲಿ ಯಾವುದೇ ಸ್ಥಾನ ಗೆಲ್ಲಲ್ಲ. ಜನರು ಮೋದಿ ಗ್ಯಾರಂಟಿ ನೋಡುತ್ತಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿಯನ್ನು ಯಾರೂ ನೋಡುತ್ತಿಲ್ಲ. ಗ್ಯಾರಂಟಿ ಯೋಜನೆ ಮೇಲೆ ಅಧಿಕಾರಕ್ಕೆ ಬಂದಿದ್ದೀರ, ಅದನ್ನು ಮುಂದುವರಿಸಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ನಿಲ್ಲಿಸಿದರೆ ನಾವು ಬಿಡಲ್ಲ ಎಂದು ಎಚ್ಚರಿಸಿದರು.
ಪ್ರೀತಂಗೌಡ ಜೊತೆ ಮಾತನಾಡಿದ್ದೇನೆ. ಅವರಿಗೆ ಮೈಸೂರು, ಚಾಮರಾಜನಗರ ಜವಾಬ್ದಾರಿ ಕೊಟ್ಟಿದ್ದೇವೆ. ಎಲ್ಲವೂ ಸರಿ ಹೋಗುತ್ತದೆ. ಪ್ರಜ್ವಲ್ ರೇವಣ್ಣ ಹೆಚ್ಚಿನ ಬಹುಮತದಿಂದ ಗೆಲ್ಲುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.ರಾಜ್ಯಕ್ಕೆ ಮೋದಿ, ಅಮಿತ್ ಶಾ, ಆದಿತ್ಯನಾಥ್:ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ನಾಲ್ಕೈದು ಬಾರಿ ರಾಜ್ಯಕ್ಕೆ ಪ್ರಚಾರಕ್ಕಾಗಿ ಬರುತ್ತಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ರಾಜ್ಯಕ್ಕೆ ಪ್ರಚಾರಕ್ಕೆ ಬರಲಿದ್ದಾರೆ ಎಂದು ಅವರು ತಿಳಿಸಿದರು.ನಾನು ಸ್ಪರ್ಧೆಗೆ ನಿರ್ಧರಿಸಿ ಆಗಿದೆ: ಈಶ್ವರಪ್ಪ
ನಾನು ಸ್ಪರ್ಧೆ ಮಾಡಲು ನಿರ್ಧರಿಸಿ ಆಗಿದೆ. ಇದರಿಂದ ಹಿಂದೆ ಸರಿಯುವ ಮಾತೇ ಇಲ್ಲ. ಕನಿಷ್ಠ ಒಂದು ಲಕ್ಷ ಮತದಿಂದ ಗೆಲ್ಲುತ್ತೇನೆ ಎನ್ನುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಮಾಜಿ ಸಚಿವ, ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಸ್ಪರ್ಧೆ ಮಾಡಿದರೆ ಬಿಜೆಪಿಯವರು ಏನು ಮಾಡಬಹುದು, ಉಚ್ಚಾಟನೆ ಮಾಡಬಹುದು. ಅಷ್ಟೇ ತಾನೇ, ಇನ್ನೇನು ಮಾಡಲು ಸಾಧ್ಯ. ನಾನು ಸಾಯೋವರೆಗೂ ಬಿಜೆಪಿಯಲ್ಲಿರುತ್ತೇನೆ. ನಾನು ಯಾವತ್ತೂ ಪಕ್ಷ ಬಿಟ್ಟು ಹೋಗಿಲ್ಲ. ಚುನಾವಣೆ ನಂತರ ಮತ್ತೆ ನಾನು ಬಿಜೆಪಿಗೆ ಬರುತ್ತೇನೆ ಎಂದರು.
ಪಕ್ಷದಿಂದ ನನ್ನ ಮೇಲೆ ಕ್ರಮ ತೆಗೆದುಕೊಳ್ಳುವುದಾದರೆ ನಾನು ನಾಮಪತ್ರ ಸಲ್ಲಿಸುವ ತನಕ ಏಕೆ ಕಾಯುತ್ತೀರಿ. ನಾನು ಸ್ಪರ್ಧೆ ಮಾಡುತ್ತೇನೆ ಎಂದು ಭಗವಂತನ ಮೇಲೆ ಪ್ರಮಾಣ ಮಾಡಿ ಹೇಳಿದ್ದೇನೆ. ಇನ್ನೂ ಯಾವ ಭಾಷೆಯಲ್ಲಿ ಹೇಳಲಿ. ಜಗದೀಶ ಶೆಟ್ಟರ್ ಪಕ್ಷ ಬಿಟ್ಟು ಕಾಂಗ್ರೆಸ್‌ಗೆ ಹೋದರು. ಮತ್ತೆ ಪಕ್ಷಕ್ಕೆ ಬಂದರು. ಅವರ ಮನೆಗೆ ಹೋಗಿ ಚುನಾವಣೆಗೆ ಟಿಕೆಟ್ ಕೊಟ್ಟಿದ್ದೀರಾ, ಅವರನ್ನೇ ನೀವು ಪಕ್ಷಕ್ಕೆ ಸೇರಿಸಿಕೊಂಡಿದ್ದೀರ, ನನ್ನ ಮೇಲೆ ಏನು ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವುದು ನೋಡೋಣ ಎಂದು ಕುಟುಕಿದರು.ಬಳಿಕ, ರಾಷ್ಟ್ರ ಭಕ್ತರ ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಮೋದಿ ಫೋಟೋವನ್ನು ಯಾರೂ ಬಳಸಬಾರದು ಎಂದು ಇಲ್ಲಿಯವರೆಗೂ ಎಲ್ಲೂ ಆದೇಶವಾಗಿಲ್ಲ. ನನ್ನ ಹೃದಯದಲ್ಲಿರುವ ಮೋದಿಯವರನ್ನು ತೆಗೆಯಲು ಸಾಧ್ಯವಿಲ್ಲ. ಮೋದಿ ಮತ್ತು ಜನರ ಆಶೀರ್ವಾದದಿಂದ ನಾನು ಚುನಾವಣೆಯಲ್ಲಿ ಗೆಲ್ಲುತ್ತೇನೆ. ಇವತ್ತೇ ಚುನಾವಣೆ ನಡೆದರೆ ಕನಿಷ್ಠ ಒಂದು ಲಕ್ಷ ಮತಗಳ ಅಂತರದಿಂದ ನಾನು ಗೆಲ್ಲಲಿದ್ದೇನೆ. ಇನ್ನೂ ಸಮಯ ಇದೆ ಚುನಾವಣೆ ಫಲಿತಾಂಶದಲ್ಲಿ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.