ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ

KannadaprabhaNewsNetwork | Published : Feb 11, 2025 12:50 AM

ಸಾರಾಂಶ

ರಾಜ್ಯಾದ್ಯಂತ ಆಧಾರ ಸೀಡಿಂಗ್ ಪ್ರಕ್ರಿಯೆಯಲ್ಲಿ ಪತ್ತೆಯಾಗಿರುವ 51.5 ಲಕ್ಷ ಮೃತ ಖಾತೆದಾರರ ಪಹಣಿ ದಾಖಲೆ ಅಭಿಯಾನ ಮಾದರಿಯಲ್ಲಿ ವಾರಸುದಾರರ ಹೆಸರುಗಳಿಗೆ ಪೌತಿ ಖಾತೆ ದಾಖಲಿಸುವಂತೆ ಇ-ಪೌತಿ ಖಾತಾ ಆಂದೋಲನ ಕೈಬಿಡಬೇಕು.

ಗದಗ: ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆ ಮತ್ತು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ಗ್ರಾಮ ಆಡಳಿತ ಅಧಿಕಾರಿಗಳು ಸೋಮವಾರ ಕರ್ತವ್ಯಕ್ಕೆ ಗೈರಾಗುವ ಮೂಲಕ 2ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

ಜಿಲ್ಲೆಯ 7ತಾಲೂಕುಗಳ 163 ಗ್ರಾಮ ಆಡಳಿತಾಧಿಕಾರಿಗಳು ಕರ್ತವ್ಯಕ್ಕೆ ಗೈರಾಗಿ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಆಯಾ ತಹಸೀಲ್ದಾರ್‌ ಕಚೇರಿ ಎದುರು ಮೌನವಾಗಿ ಕುಳಿತು ಮುಷ್ಕರ ನಡೆಸಿದರು. ಈ ವೇಳೆ ಜಿಲ್ಲಾ ಸರ್ಕಾರಿ ನೌಕರರ ಸಂಘ, ಜಿಲ್ಲಾ ಕಂದಾಯ ನೌಕರರ ಸಂಘ, ವಿವಿಧ ರೈತರ ಸಂಘಟನೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ವಿವಿಧ ಸಂಘಟನೆ ಮುಖಂಡರು ಮುಷ್ಕರದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.

ರಾಜ್ಯಾದ್ಯಂತ ಆಧಾರ ಸೀಡಿಂಗ್ ಪ್ರಕ್ರಿಯೆಯಲ್ಲಿ ಪತ್ತೆಯಾಗಿರುವ 51.5 ಲಕ್ಷ ಮೃತ ಖಾತೆದಾರರ ಪಹಣಿ ದಾಖಲೆ ಅಭಿಯಾನ ಮಾದರಿಯಲ್ಲಿ ವಾರಸುದಾರರ ಹೆಸರುಗಳಿಗೆ ಪೌತಿ ಖಾತೆ ದಾಖಲಿಸುವಂತೆ ಇ-ಪೌತಿ ಖಾತಾ ಆಂದೋಲನ ಕೈಬಿಡಬೇಕು. ಚಿಕ್ಕಮಗಳೂರು ಜಿಲ್ಲೆಯಲ್ಲಿ 30 ಗ್ರಾಮ ಆಡಳಿತ ಅಧಿಕಾರಿಗಳ ವಾರ್ಷಿಕ ವೇತನ ಬಡ್ತಿ ತಡೆದು ನೈಸರ್ಗಿಕ ನ್ಯಾಯ ತತ್ವ ಹಾಗೂ ಎಲ್ಲ ನಿಯಮ ಉಲ್ಲಂಘಿಸಿ ಹೊರಡಿಸಿರುವ ದಂಡನಾ ಆದೇಶ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕಂದಾಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಎಲ್ಲಾ ವೃಂದ ಒಳಗೊಂಡಂತೆ ನೀಡುತ್ತಿರುವ ಅನುಕಂಪದ ನೇಮಕಾತಿಯ ಹುದ್ದೆಯ ವೃಂದ ಹಾಗೂ ನೇಮಕಾತಿ ತಿದ್ದುಪಡಿ ಮಾಡಬೇಕು. ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಜೀವಹಾನಿ ಸಂಭವಿಸಿದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಮಂಜೂರು ಮಾಡಬೇಕು. ಪ್ರಯಾಣ ಭತ್ಯೆ ₹500 ರಿಂದ ₹ 5 ಸಾವಿರ ಹೆಚ್ಚುವರಿ ಮಾಡಬೇಕು ಎಂದು ಒತ್ತಾಯಿಸಿದರು.

ಬೆಳೆ ಸಮೀಕ್ಷೆ, ಬೆಳೆ ಹಾನಿ ಪರಿಹಾರದ ಕೆಲಸ ಕೃಷಿ, ತೋಟಗಾರಿಕೆ ಇಲಾಖೆಗೆ ನಿರ್ವಹಿಸುವಂತೆ ಆದೇಶಿಸಬೇಕು. ಮ್ಯೂಟೇಶನ್ ಅವಧಿ ದಿನ ವಿಸ್ತರಿಸಬೇಕು. ಪ್ರೋಟೋಕಾಲ್ ಕೆಲಸದಿಂದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕೈಬಿಡಬೇಕು. ಜಾಬ್ ಚಾರ್ಟ್ ನಿಗದಿಪಡಿಸಬೇಕು. ದಫ್ತರ್ ಹಾಗೂ ಜಮಾಬಂದಿ ರದ್ದುಪಡಿಸಬೇಕು ಹಾಗೂ ರಾಜ್ಯದ ಗ್ರಾಮ ಸಹಾಯಕರಿಗೆ ಸೇವಾಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿಕೊಂಡರು.

ಜಿಲ್ಲಾ ಘಟಕದ ಗೌರವಾಧ್ಯಕ್ಷ ಪಿ.ಬಿ.ಘೋರೆಖಾನ್, ಅಧ್ಯಕ್ಷ ಅರುಣಗೌಡ ಮಂಟೂರ, ಉಪಾಧ್ಯಕ್ಷ ಚಂದ್ರಶೇಖರ ನಾಯಕ, ರಾಧಾ ದೇಸಾಯಿಪಟ್ಟಿ, ಪ್ರಧಾನ ಕಾರ್ಯದರ್ಶಿ ಐ.ವೈ. ಕಳಸಣ್ಣವರ, ಖಜಾಂಜಿ ಯೋಗೇಶ ಬಡಿಗೇರ, ಮುಂಡರಗಿ ತಾಲೂಕಾಧ್ಯಕ್ಷ ಬಸವರಾಜ ಪೊಲೂರ, ಶಿರಹಟ್ಟಿ ತಾಲೂಕಾಧ್ಯಕ್ಷ ನಾಗರಾಜ ಚೋಳಮ್ಮನವರ, ಲಕ್ಷೇಶ್ವರ ತಾಲೂಕು ಅಧ್ಯಕ್ಷ ಡಿ.ಎಸ್.ಕುಲಕರ್ಣಿ, ಗದಗ ತಾಲೂಕಾಧ್ಯಕ್ಷ ಸಂತೋಷ ಜಾಧವ, ರೋಣದ ಶಂಕರಗೌಡ ಗಿರಿಯಪ್ಪಗೌಡರ, ಗಜೇಂದ್ರಗಡದ ಉಮೇಶ ಅರಳಿಗಿಡದ, ನರಗುಂದ ಅನಿಲಕುಮಾರ ಭೋವಿ ಸೇರಿದಂತೆ ಜಿಲ್ಲೆಯ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು ಪಾಲ್ಗೊಂಡಿದ್ದರು.

Share this article