ಕಂಪ್ಲಿ: ಮೂಢನಂಬಿಕೆಗಳು, ಜಾತಿ ಪದ್ಧತಿ, ಅಸಮಾನತೆಯ ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಸಮಸಮಾಜ ಕಟ್ಟುವಲ್ಲಿ ಕಾಯಕ ನಿಷ್ಠೆ ಮೆರೆದ ಕಾಯಕ ಶರಣರ ಕೊಡುಗೆ ಅಪಾರ ಎಂದು ತಹಸೀಲ್ದಾರ್ ಶಿವರಾಜ್ ಶಿವಪುರ ತಿಳಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕಾಯಕ ಶರಣರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಸರಳ ಜೀವನ, ಶುದ್ಧ ಧ್ಯಾನ, ನಿಷ್ಕಲ್ಮಶ ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯವೆಂದು ಸಾರಿದ ಕಾಯಕ ಶರಣರ ವಚನಗಳು ಇಂದಿಗೂ ಚಿರಪರಿಚಿತವಾಗಿವೆ ಎಂದರು.
ಭಕ್ತಿ ಭಂಡಾರಿ ಬಸವೇಶ್ವರ ಆಶ್ರಮದ ಪೀಠಾಧಿಪತಿ ಪಾಮಯ್ಯ ಶರಣರು ಮಾತನಾಡಿ, 12ನೇ ಶತಮಾನವು ಧಾರ್ಮಿಕ, ಸಾಮಾಜಿಕ, ರಾಜಕೀಯವಾಗಿ ಕ್ರಾಂತಿ ಉಂಟು ಮಾಡಿದೆ. ಯಾರನ್ನೂ ಕೀಳಾಗಿ ಕಾಣಬಾರದು ಎಂಬುವುದು ಬಸವೇಶ್ವರರ ಸಮಾನತೆಯ ತತ್ವವಾಗಿದ್ದು, ಅವರ ಹಾದಿಯಲ್ಲಿ ನಡೆದ ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿಯವರು ಶರಣ ಪಡೆಯ ಮಹನೀಯರಾಗಿದ್ದಾರೆ. ಕಾಯಕ ಮತ್ತು ದಾಸೋಹಕ್ಕೆ ಶರಣರು ಶ್ರೇಷ್ಠತೆ ಕಲ್ಪಿಸಿದ್ದಾರೆ. ಕಾಯಕ ದಾಸೋಹದಿಂದ ಸಮಾನತೆ ಸಾಧಿಸಲು ಸಾಧ್ಯ. ಶರಣರ ಆಶಯದಂತೆ ನಿತ್ಯ ಜೀವನದಲ್ಲಿ ಕಾಯಕ, ದಾಸೋಹ ನಿಷ್ಠೆಯನ್ನು ಅಳವಡಿಸಿಕೊಳ್ಳಬೇಕು ಎಂದರು.ಕಾಯಕ ಶರಣರ ಜಯಂತಿ ನಿಮಿತ್ತ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗ ಪೆದ್ದಿಯವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ನಮಿಸಲಾಯಿತು.
ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ ಎಂ.ಆರ್. ಷಣ್ಮುಖ, ಡಿಟಿ ಬಿ. ರವೀಂದ್ರಕುಮಾರ್, ಶಿರಸ್ತೇದಾರ್ ಎಸ್.ಡಿ. ರಮೇಶ್, ಆರ್‌ಐ ಜಗದೀಶ, ಸಿಬ್ಬಂದಿ ಮಾಲತೇಶ ದೇಶಪಾಂಡೆ, ರಾಧಾ, ಶಮೀಮ್, ಶಿಲ್ಪಾ, ಪ್ರಮುಖರಾದ ವಸಂತರಾಜ ಕಹಳೆ, ಸಿ.ಚನ್ನಬಸಪ್ಪ, ಕಹಳೆ ಹನುಮಂತಪ್ಪ, ನಿಲಯಪಾಲಕ ಕೆ.ವಿರುಪಾಕ್ಷಿ ಸೇರಿ ಇದ್ದರು.