ಮುಳಗುಂದ: ಪ್ರಾಮಾಣಿಕ ಮತ್ತು ರಚನಾತ್ಮಕ ಮನೋಭಾವ ಇದ್ದಲ್ಲಿ ಗ್ರಾಮದಲ್ಲಿ ಪೂರ್ಣ ಪ್ರಮಾಣದ ಅಭಿವೃದ್ಧಿ ಕಾಮಗಾರಿಗಳು ನಡೆಯಲು ಸಾಧ್ಯವಾಗುತ್ತದೆ. ಗ್ರಾಮದಲ್ಲಿನ ಅಭಿವೃದ್ಧಿ ಕಟ್ಟಡಗಳನ್ನು ಗ್ರಾಮಸ್ಥರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಗ್ರಾಮದಲ್ಲಿ ಬಸ್ ಸ್ಟ್ಯಾಂಡ್, ಅಂಗನವಾಡಿ ನಿರ್ಮಾಣ, ರೈತರ ಹೊಲದಲ್ಲಿ ಬದು, ಕೃಷಿ ಹೊಂಡ, ಹೊಳಗಟ್ಟಿ ನಿರ್ಮಾಣದಂತಹ ಅನೇಕ ಕೆಲಸಗಳಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಳ್ಳುತ್ತಿದ್ದೇವು. ಆದರೆ ಈಗ ಅದನ್ನು ರದ್ದು ಮಾಡಿದ್ದಾರೆ. ಕೃಷಿ ಕಾರ್ಮಿಕರಿಗೆ ಹತ್ತಿರದಿಂದ ಉದ್ಯೋಗ ಸಿಗುತ್ತಿತ್ತು. ಕಾರ್ಮಿಕರಿಗೆ ಕೆಲಸ ಕೊಡದೆ ಇದ್ದರೆ ನಿರುದ್ಯೋಗ ಭತ್ತೆ ಕೊಡಬೇಕಾಗಿತ್ತು. ಅಂತಹ ಕಾನೂನು ನಾವು ರಾಷ್ಟ್ರದೊಳಗೆ ಮಾಡಿದ್ದೆವು. ಅಂತಹ ಕಾನೂನನ್ನು ಈಗ ಕೇಂದ್ರ ಸರ್ಕಾರ ರದ್ದು ಮಾಡಿದೆ. ಈ ಮೂಲಕ ರೈತ ಕಾರ್ಮಿಕರ ಶಕ್ತಿಯನ್ನು ಕ್ಷೀಣಿಸುವಂತೆ ಮಾಡಿದೆ. ರಾಜ್ಯ ಸರ್ಕಾರ ಗ್ಯಾರಂಟಿ ಮೂಲಕ ಬಡತನ ನಿರ್ಮೂಲನೆ ಸಾಧ್ಯವಾಗಿದೆ. ಅದೇ ರೀತಿ ಸಣ್ಣ, ಅತಿ ಸಣ್ಣ ರೈತರಿಗೆ, ಕೃಷಿ ಕಾರ್ಮಿಕರಿಗೆ ಅನುಕೂಲವಾಗಿದ್ದ ಮನರೇಗಾ ಯೋಜನೆಯನ್ನು ಮತ್ತೆ ಆರಂಭಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ಗ್ರಾಪಂ ಅಧ್ಯಕ್ಷ ಪ್ರಕಾಶಗೌಡ ಪಾಟೀಲ, ಉಪಾಧ್ಯಕ್ಷೆ ನೀಲವ್ವ ಬಡ್ನಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಮುಖಂಡರಾದ ನಾರಾಯಣರಾವ್, ಅಪ್ಪಣ್ಣ ಇನಾಮತಿ, ರವಿ ಮೂಲಿಮನಿ, ಎನ್.ಜೆ. ಕುರಹಟ್ಟಿ, ಎಚ್.ಬಿ. ಹದ್ಲಿ, ಶಿವಪ್ರಕಾಶ ಮಣಕವಾಡ, ಪಿಡಿಒ ಕೆ.ಎಲ್. ಪೂಜಾರ, ಎಸ್.ಎಚ್. ಚೆಟ್ರಿ ಹಾಗೂ ಗ್ರಾಪಂ ಸದಸ್ಯರು, ಸಿಬ್ಬಂದಿ ಇದ್ದರು.