ಮಕ್ಕಳ ರಕ್ಷಣೆಗೆ ಗ್ರಾಮಮಟ್ಟದ ಕಾವಲು ಸಮಿತಿಗಳು ಕ್ರಿಯಾಶೀಲಗೊಳ್ಳಲಿ

KannadaprabhaNewsNetwork |  
Published : Nov 18, 2024, 12:02 AM IST
17ಶಿರಾ1: ಶಿರಾ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವತಿಯಿಂದ ಆಯೋಜಿಸಿದ್ದ ಮಕ್ಕಳ ರಕ್ಷಣೆ ಹಾಗೂ ವಿವಿಧ ಕಾನೂನುಗಳ ಜಾಗೃತಿ ಕಾರ್ಯಾಗಾರವನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಅಧಿಕಾರದಲ್ಲಿರುವ ನಮ್ಮ ಸಮಯವೆಲ್ಲ ಸಭೆ, ಸಮಾರಂಭಗಳಲ್ಲಿಯೇ ಕಳೆದು ಹೋಗುತ್ತಿದೆ. ದೈನಂದಿನ ಕೆಲಸ ಕಾರ್ಯಗಳಲ್ಲಿಯೇ ನೌಕರರು ಬಸವಳಿದು ಹೋಗುತ್ತಿದ್ದಾರೆ. ಇರುವ ವ್ಯವಸ್ಥೆಯನ್ನು ಸುಧಾರಿಸಿಕೊಂಡು ಸಾಮಾಜಿಕ ಪರಿವರ್ತನೆಯ ಕಡೆಗೂ ಗಮನ ಹರಿಸಬೇಕು.

ಡಾ.ಕೆ.ಟಿ.ತಿಪ್ಪೇಸ್ವಾಮಿ ಕರೆ । ಮಕ್ಕಳ ರಕ್ಷಣೆ, ಬಾಲ್ಯ ವಿವಾಹ ನಿಷೇಧ ಕುರಿತು ಜಾಗೃತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಶಿರಾ

ಮಕ್ಕಳ ರಕ್ಷಣೆಗಾಗಿ ರಚನೆಗೊಂಡಿರುವ ಕಾವಲು ಸಮಿತಿ ಸೇರಿದಂತೆ ಗ್ರಾಮ ಪಂಚಾಯತಿ ಮಟ್ಟದ ಸಮಿತಿಗಳು ಹೆಚ್ಚು ಕ್ರಿಯಾಶೀಲಗೊಳ್ಳುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಕರೆ ನೀಡಿದರು.

ಅವರು ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಪಂಚಾಯತ್, ಮಹಿಳಾ ಇಲಾಖೆ, ಮಕ್ಕಳ ರಕ್ಷಣಾ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳ ರಕ್ಷಣೆ ಹಾಗೂ ವಿವಿಧ ಕಾನೂನುಗಳ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು, ಮಕ್ಕಳ ರಕ್ಷಣೆಗಾಗಿಯೇ ವಿವಿಧ ಇಲಾಖೆಗಳಲ್ಲಿ ಇರುವ ಸುತ್ತೋಲೆಗಳು ಕಡತದೊಳಗೆ ಸೇರಿಹೋಗಿವೆ. ಆ ಸುತ್ತೋಲೆಗಳನ್ನು ಎಲ್ಲ ಇಲಾಖೆಗಳು ಗಮನಿಸುತ್ತಾ ಮಕ್ಕಳ ರಕ್ಷಣೆಗೆ ಇರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.

ತಾಲೂಕು ಮಟ್ಟದಲ್ಲಿ ಇರುವಂತೆಯೇ ಗ್ರಾಪಂ ಮಟ್ಟದಲ್ಲಿ ಸಮಿತಿಗಳು ಅಸ್ತಿತ್ವದಲ್ಲಿವೆ. ಪಿಡಿಒಗಳು ಇದಕ್ಕೆ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಮಕ್ಕಳ ಕಾವಲು ಸಮಿತಿಗಳು ನಿರ್ದಿಷ್ಟ ಅವಧಿಯೊಳಗೆ ಸಭೆ ಸೇರಿ ಮಕ್ಕಳ ಹಕ್ಕುಗಳ ಬಗ್ಗೆ ನಿರ್ಣಯಿಸಬೇಕು. ಪ್ರತಿ ಗ್ರಾಪಂಗಳಲ್ಲಿ ವಾರ್ಷಿಕ ಮಕ್ಕಳ ಗ್ರಾಮ ಸಭೆಗಳು ನಡೆಯಬೇಕು. ಇವೆಲ್ಲವನ್ನೂ ಪಂಚಾಯತಿಗಳು ನಿಯಮಿತವಾಗಿ ನಡೆಸುತ್ತಾ ಬಂದರೆ ಮಕ್ಕಳಿಗಾಗಿ ಇರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದ ವಕೀಲರು, ಮಕ್ಕಳ ಕಲ್ಯಾಣ ಸಮಿತಿ ಮಾಜಿ ಸದಸ್ಯ ಸಾ.ಚಿ.ರಾಜಕುಮಾರ ಮಾತನಾಡಿ, ಹಿಂದಿನಿಂದಲೂ ಹೆಣ್ಣು ಮಕ್ಕಳ ಬಗ್ಗೆ ತಾತ್ಸಾರ ಮನೋಭಾವದಿಂದಾಗಿ ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ನಡುವಿನ ಲಿಂಗಾನುಪಾತದಲ್ಲಿ ಅಜಗಜಾಂತರ ವ್ಯತ್ಯಾಸಗಳಾಗಿವೆ. ಪರಿಣಾಮವಾಗಿ ಗಂಡುಗಳಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಇದಕ್ಕೆಲ್ಲ ನಮ್ಮ ನಿರ್ಧಾರಗಳೇ ಕಾರಣ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಪಂ ಇಒ ಹರೀಶ್ ಮಾತನಾಡಿ, ಅಧಿಕಾರದಲ್ಲಿರುವ ನಮ್ಮ ಸಮಯವೆಲ್ಲ ಸಭೆ, ಸಮಾರಂಭಗಳಲ್ಲಿಯೇ ಕಳೆದು ಹೋಗುತ್ತಿದೆ. ದೈನಂದಿನ ಕೆಲಸ ಕಾರ್ಯಗಳಲ್ಲಿಯೇ ನೌಕರರು ಬಸವಳಿದು ಹೋಗುತ್ತಿದ್ದಾರೆ. ಇರುವ ವ್ಯವಸ್ಥೆಯನ್ನು ಸುಧಾರಿಸಿಕೊಂಡು ಸಾಮಾಜಿಕ ಪರಿವರ್ತನೆಯ ಕಡೆಗೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಮಚಂದ್ರಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಾಂಸ್ಥಿಕ ಅಧಿಕಾರಿ ಶಿವಣ್ಣ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರದಲ್ಲಿ ತಾಲೂಕಿನ ಪಿಡಿಒಗಳು, ಬಿಆರ್ಪಿ, ಸಿಆರ್ಪಿ, ಶಾಲಾ ಮುಖ್ಯೋಪಾಧ್ಯಾಯರು, ಅಂಗನವಾಡಿ ಮೇಲ್ವಿಚಾರಕರು ಭಾಗವಹಿಸಿದ್ದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ