ಕನ್ನಡಪ್ರಭ ವಾರ್ತೆ ಬಂಟ್ವಾಳ
ಉಳ್ಳಾಲ ತಾಲೂಕು ಮತ್ತು ಬಂಟ್ವಾಳ ತಾಲೂಕಿನ 7 ಗ್ರಾಮ ಪಂಚಾಯಿತಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರು ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಪ್ರಗತಿ ಪರಿಶೀಲನಾ ಸಭೆಯು ಬಂಟ್ವಾಳ ತಾ.ಪಂ.ನ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ಬುಧವಾರ ನಡೆಯಿತು.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಕೆ.ಇ. ಜಯರಾಮ್ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾಪಂ ಸಹಾಯಕ ನಿರ್ದೇಶಕ ವಿಶ್ವನಾಥ್ ಬೈಲಾಮೂಲೆ ಮಾತನಾಡಿ, ಪಂಚಾಯಿತಿ ಮಟ್ಟದಲ್ಲಿ ತ್ಯಾಜ್ಯ ವಿಲೇವಾರಿಯ ಜವಾಬ್ದಾರಿ ಒಕ್ಕೂಟದಾಗಿದ್ದು, ಎಲ್ಲ ಗ್ರಾಪಂಗಳಲ್ಲೂ ಸರ್ಕಾರದ ನಿರ್ದೇಶನದನ್ವಯ ಒಕ್ಕೂಟದ ಸಿಬ್ಬಂದಿಯೇ ತ್ಯಾಜ್ಯ ವಿಲೇವಾರಿಯ ಕಾರ್ಯ ನಿರ್ವಹಿಸಬೇಕು. ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಪಂಚಾಯಿತಿ ವತಿಯಿಂದ ಒದಗಿಸಲಾಗುವುದು ಎಂದು ತಿಳಿಸಿದರು.
ಉದ್ಯೋಗ ಖಾತರಿ ಯೋಜನೆಯ ಒಗ್ಗೂಡಿಸುವಿಕೆಯೊಂದಿಗೆ ಪ್ರತಿಯೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ 75 ಕೃಷಿ ಪೌಷ್ಟಿಕ ತೋಟ ರಚನೆ ಮಾಡಬೇಕಿದ್ದು, ಒಕ್ಕೂಟದ ಮೂಲಕ ಫಲಾನುಭವಿಗಳ ಆಯ್ಕೆ ಮಾಡಬೇಕು ಎಂದು ತಿಳಿಸಿದರು. ಉದ್ಯೋಗ ಖಾತರಿ ಯೋಜನೆಯ ಬಂಟ್ವಾಳ ತಾಲೂಕು ಐ ಇ ಸಿ ಸಂಯೋಜಕ ರಾಜೇಶ್ ರವರು ಕೃಷಿ ಪೌಷ್ಟಿಕ ತೋಟ ರಚನೆಯ ತಾಂತ್ರಿಕ ವಿಷಯದ ಬಗ್ಗೆ ಮಾಹಿತಿ ನೀಡಿದರು.ಸಂಜೀವಿನಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್, ಲೋಕೋಸ್‌ನ ಪ್ರಗತಿ, ಸಮುದಾಯ ಬಂಡವಾಳ ನಿಧಿ ವಿತರಣೆ, ಕೃಷಿ ಮತ್ತು ಕೃಷಿಯೇತರ ಜೀವನೋಪಾಯ ಚಟುವಟಿಕೆ, ಕೃಷಿಯೇತರ ಚಟುವಟಿಕೆ ಪ್ರಮಾಣ ಪತ್ರ, ಬ್ಯಾಂಕ್ ಸಂಪರ್ಕ, ಸಾಮಾಜಿಕ ವಿಮೆ, ಗುಂಪು ಉದ್ಯಮ, ಉತ್ಪಾದಕರ ಗುಂಪು, ಲೆಕ್ಕಪರಿಶೋಧನೆ, 2024- 25ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಲಾಯಿತು.ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಪ್ರಕಾಶ್, ಸಂಜೀವಿನಿ ಜಿಲ್ಲಾ ವ್ಯವಸ್ಥಾಪಕಿ ವಾಣಿಶ್ರೀ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಸುಧಾ, ವಲಯ ಮೇಲ್ವಿಚಾರಕ ಕುಶಾಲಪ್ಪ ಗೌಡ, ಪ್ರೀತಿಕಾ ಸಭೆಯಲ್ಲಿ ಉಪಸ್ಥಿತರಿದ್ದರು. ಸಂಜೀವಿನಿ ಬಂಟ್ವಾಳ ತಾಲೂಕು ವ್ಯವಸ್ಥಾಪಕ ಪ್ರದೀಪ್ ಕಾಮತ್ ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ಕುಸುಮ ವಂದಿಸಿದರು.