(ಕೊಟ್ಟಿಗೆಹಾರ) ಕಳೆದ ಮೂರು ವರ್ಷದಿಂದ ಕಲುಷಿತ ನೀರು ಪೂರೈಕೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ದೂರು ಸಲ್ಲಿಸಿದರೂ ಸರಿಪಡಿಸದಿದ್ದರೆ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ಗ್ರಾಮಸ್ಥರು ನೀಡಿರುವ ಘಟನೆ ಮೂಡಿಗೆರೆ ತಾಲೂಕಿನ ದಾಸರಹಳ್ಳಿಯಲ್ಲಿ ನಡೆದಿದೆ.
ಗ್ರಾಮಕ್ಕೆ ಕ್ರಿಮಿನಾಶಕ, ರಾಸಾಯನಿಕಯುಕ್ತ ನೀರೇ ಗತಿ । ಅಧಿಕಾರಿಗಳ ನಿರ್ಲಕ್ಷ್ಯ
---ಬಾಟಂ----
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು (ಕೊಟ್ಟಿಗೆಹಾರ)
ಕಳೆದ ಮೂರು ವರ್ಷದಿಂದ ಕಲುಷಿತ ನೀರು ಪೂರೈಕೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ದೂರು ಸಲ್ಲಿಸಿದರೂ ಸರಿಪಡಿಸದಿದ್ದರೆ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ಗ್ರಾಮಸ್ಥರು ನೀಡಿರುವ ಘಟನೆ ಮೂಡಿಗೆರೆ ತಾಲೂಕಿನ ದಾಸರಹಳ್ಳಿಯಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ದಾಸರಹಳ್ಳಿ ಗ್ರಾಮಕ್ಕೆ ಕಳೆದ ಮೂರು ವರ್ಷಗಳಿಂದ ಕಲುಷಿತಗೊಂಡ ಕುಡಿಯುವ ನೀರು ಸರಬರಾಜಾಗುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ಕೂಡಲೇ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಗ್ರಾಮ ಪಂಚಾಯಿತಿ ಕಚೇರಿಯ ಎದುರು ಖಾಲಿ ಕೊಡ ಹಿಡಿದು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಗ್ರಾಮದ ಮತ್ತಿಕಟ್ಟೆ ಭಾಗದಿಂದ ಹರಿದು ಬರುವ ಹಳ್ಳದ ನೀರು ನೇರವಾಗಿ ಕುಡಿಯುವ ನೀರಿನ ಬಾವಿಗೆ ಸೇರುತ್ತಿದೆ. ಸೂಕ್ತ ಶುದ್ಧೀಕರಣ ವ್ಯವಸ್ಥೆ ಇಲ್ಲದೆ ಇದೇ ನೀರನ್ನು ನಲ್ಲಿಗಳ ಮೂಲಕ ಮನೆಗಳಿಗೆ ಪೂರೈಸಲಾಗುತ್ತಿದೆ. ಮಳೆಗಾಲದಲ್ಲಿ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತಿದ್ದು, ತೋಟಗಳಿಗೆ ಸಿಂಪಡಿಸುವ ಕ್ರಿಮಿನಾಶಕಗಳು ಮತ್ತು ರಾಸಾಯನಿಕಗಳು ಬಾವಿಗೆ ಸೇರಿ ನಲ್ಲಿ ನೀರಿನಲ್ಲಿ ಹುಳುಗಳು ತೇಲಿಬರುತ್ತಿವೆ ಎಂದು ಸ್ಥಳೀಯರು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಕಲುಷಿತ ನೀರು ಬಳಸುವುದರಿಂದ ಗ್ರಾಮದಲ್ಲಿ ಕಾಲರಾ, ಭೇದಿ ಹಾಗೂ ಟೈಫಾಯಿಡ್ ನಂತಹ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
-- ಕೋಟ್ ---
ಗ್ರಾಪಂ ಕಚೇರಿ ಅತ್ಯಂತ ಸಮೀಪದಲ್ಲಿದ್ದರೂ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಅಧಿಕಾರಿಗಳಿಗೆ, ಸ್ಥಳೀಯ ಪಂಚಾಯಿತಿ ಸದಸ್ಯರಿಗೆ ಹಾಗೂ ಶಾಸಕರಿಗೆ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೆ, ಈವರೆಗೆ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ.
- ಪ್ರದೀಪ್, ಸ್ಥಳೀಯ ನಿವಾಸಿ
--ಬಾಕ್ಸ್--
ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ಎಚ್ಚರಿಕೆಸರ್ಕಾರ ಶುದ್ಧ ಕುಡಿಯುವ ನೀರಿನ ಯೋಜನೆಗಳಿಗೆ ಕೋಟ್ಯಂತರ ರು. ಹಣ ವೆಚ್ಚ ಮಾಡುತ್ತಿದ್ದರೂ, ದಾಸರಹಳ್ಳಿಯ ಜನರಿಗೆ ಕಲುಷಿತ ನೀರೇ ಗತಿಯಾಗಿದೆ. ತಕ್ಷಣವೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಶಾಶ್ವತ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ಮಹಿಳೆಯರು ಹಾಗೂ ಸಾರ್ವಜನಿಕರು ಖಾಲಿ ಕೊಡಗ ಳೊಂದಿಗೆ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಲಿದ್ದೇವೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.