ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಿರ್ಜಾನ್ ಶಾಖಾ ಮಠದ ಸ್ವಾಮೀಜಿ
ಗ್ರಾಮ ಸತ್ಸಂಗ ಕಾರ್ಯಕ್ರಮಗಳು ಧಾರ್ಮಿಕ ಪ್ರಜ್ಞೆ, ಒಗ್ಗಟ್ಟು, ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವ ಮೂಲಕ ಸಮುದಾಯವನ್ನು ಸದಾ ಜಾಗೃತವಾಗಿರಿಸಲು ಮತ್ತು ಉತ್ತಮ ಕಾರ್ಯಗಳಲ್ಲಿ ತೊಡಗಲು ಸಹಕಾರಿಯಾಗುತ್ತವೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ ಶ್ರೀಗಳು ತಿಳಿಸಿದರು.
ತಾಲೂಕಿನ ಮಲ್ಲಾಪುರ ಗ್ರಾಪಂ ಸಭಾಭವನದಲ್ಲಿ ಆಯೋಜಿಸಿದ್ದ ಗ್ರಾಮ ಸತ್ಸಂಗ ಹಾಗೂ ಗುರು ಪಾದುಕಾ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು. ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತನೆ ನಮ್ಮನ್ನು ಸದಾ ಜಾಗೃತವಾಗಿ ಇರುವಂತೆ ಮಾಡುತ್ತವೆ. ಗ್ರಾಮದ ಕುಲಬಾಂಧವರು ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಇಂತಹ ಶ್ರೇಷ್ಠ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸಲು ಸಾಧ್ಯ ಎಂದರು.ಸತ್ಸಂಗದ ಮಹತ್ವದ ಜೊತೆಗೆ ಶ್ರೀಗಳು ಶಿಕ್ಷಣ ಮತ್ತು ಸಂಸ್ಕಾರದ ಕುರಿತು ಮಹತ್ವದ ಸಂದೇಶ ನೀಡಿದರು. ನಮ್ಮ ಮಕ್ಕಳಿಗೆ ಉತ್ತಮ ವಿದ್ಯೆಯ ಜೊತೆಗೆ ಸಂಸ್ಕಾರ ಸಹ ನೀಡಬೇಕು. ವಿದ್ಯಾಭ್ಯಾಸವು ಜ್ಞಾನ ನೀಡಿದರೆ, ಸಂಸ್ಕಾರವು ಜೀವನಕ್ಕೆ ಸರಿಯಾದ ದಿಕ್ಕನ್ನು ನೀಡುತ್ತದೆ ಎಂದು ಹೇಳಿದರು.
ಹರ್ಟುಗಾ, ಕೊಡಾರ, ಕುಚೆಗಾರ್, ವಿರ್ಜೆ, ಕೈಗಾ ವಸತಿ ಸಂಕೀರ್ಣ, ಮತ್ತು ಕೈಗವಾಡದ ಒಕ್ಕಲಿಗ ಸಮುದಾಯದ ಹಿರಿಯ ನಾಗರಿಕರು ಹಾಗೂ ಕುಲಬಾಂಧವರು ಕುಟುಂಬ ಸಮೇತರಾಗಿ ಭಾಗವಹಿಸಿದ್ದರು.