ಹದಗೆಟ್ಟ ರಸ್ತೆ, ಗಲೀಜು ನೀರಿನಿಂದ ಗ್ರಾಮಸ್ಥರು ತತ್ತರ!

KannadaprabhaNewsNetwork |  
Published : Jun 18, 2025, 01:54 AM IST
ಹೊಸೂರ ಗ್ರಾಮದಲ್ಲಿ ಮುಖ್ಯರಸ್ತೆಯಲ್ಲಿ ನೀರು ನಿಂತಿರುವುದು. | Kannada Prabha

ಸಾರಾಂಶ

ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನರೇಗಾ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಗ್ರಾಮ ಪಂಚಾಯತಿಗಳಿಗೆ ಪ್ರತಿವರ್ಷ ಕೋಟ್ಯಂತರ ರುಪಾಯಿ ಅನುದಾನ ನೀಡುತ್ತಿವೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಗ್ರಾಮಗಳು ಮೂಲಸೌಲಭ್ಯಗಳ ಕೊರತೆಯಿಂದ ನಾಗರಿಕರು ಪರದಾಡುವಂತಾಗಿದೆ.

ಶಂಕರ ಕುದರಿಮನಿ

ಕನ್ನಡಪ್ರಭ ವಾರ್ತೆ ಬಾದಾಮಿ

ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನರೇಗಾ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಗ್ರಾಮ ಪಂಚಾಯತಿಗಳಿಗೆ ಪ್ರತಿವರ್ಷ ಕೋಟ್ಯಂತರ ರುಪಾಯಿ ಅನುದಾನ ನೀಡುತ್ತಿವೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಗ್ರಾಮಗಳು ಮೂಲಸೌಲಭ್ಯಗಳ ಕೊರತೆಯಿಂದ ನಾಗರಿಕರು ಪರದಾಡುವಂತಾಗಿದೆ.

ಇದಕ್ಕೆ ಬಾದಾಮಿ ತಾಲೂಕಿನ ಹೊಸೂರು ಗ್ರಾಮ ಉದಾಹರಣೆಯಾಗಿ ನಿಂತಿದೆ. ಹೊಸೂರು ಗ್ರಾಮದ ಮುಖ್ಯರಸ್ತೆಯಾದ ಬಜಾರ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದು ರಸ್ತೆಯಲ್ಲಿ ತೆಗ್ಗುಗಳಿವೆಯೋ, ಇಲ್ಲವೇ ತೆಗ್ಗುಗಳಲ್ಲೇ ರಸ್ತೆ ಇದೆಯೋ ಎಂಬ ಅನುಮಾನ ಮೂಡುವಂತಿದೆ. ಈ ಮಾರ್ಗದಲ್ಲಿ ಸಂಚರಿಸುವ ಗ್ರಾಮಸ್ಥರು ಪ್ರತಿನಿತ್ಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಗ್ರಾಮದ ಪ್ರಮುಖ ರಸ್ತೆ ಹಲವು ವರ್ಷಗಳಿಂದ ಅಭಿವೃದ್ಧಿಯನ್ನೇ ಕಂಡಿಲ್ಲ. ರಸ್ತೆಯಲ್ಲಿ ಮಾರ್ಗದುದ್ದಕ್ಕೂ ಗುಂಡಿಗಳೇ ಕಂಡುಬರುತ್ತಿವೆ. ಮಳೆಗಾಲ ಬಂದರಂತೂ ಮುಗಿದೇ ಹೋಯ್ತು. ಗುಂಡಿಗಳಲ್ಲಿ ನೀರು ನಿಂತು ಗುಂಡಿಯ ಆಳ ಅಗಲ ತಿಳಿಯದೇ ದ್ವಿಚಕ್ರವಾಹನ ಸವಾರರು ಬಿದ್ದು ಅಪಘಾತಗಳಾಗುವುದು ಸಾಮಾನ್ಯವಾಗಿದೆ. ಗುಂಡಿಗಳಲ್ಲಿ ಹಲವು ದಿನಗಳವರೆಗೆ ನೀರು ನಿಂತು ಗಲೀಜಾಗಿ ಜನರು ಸಂಚಾರಕ್ಕೆ ಹರಸಾಹಸ ಮಾಡಬೇಕಾಗುತ್ತದೆ. ಗಲೀಜು ನೀರಿನಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ. ಇಷ್ಟಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ತಿರುಗಿಯೂ ನೋಡಿಲ್ಲ.ಚರಂಡಿ ಅವ್ಯವಸ್ಥೆ:

ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದ್ದರಿಂದ ಗಟಾರು ನೀರು ಹರಿಯದೇ ಮಡುಗಟ್ಟಿ ನಿಂತು ದುರ್ನಾತ ಬೀರುತ್ತಿವೆ. ಇದರಿಂದ ಮಳೆಯ ನೀರು ರಸ್ತೆ ಮೇಲೆಯೇ ಹರಿಯುತ್ತದೆ. ಮಕ್ಕಳು, ಮಹಿಳೆಯರು ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಮಾಡಬೇಕಿದೆ. ರಸ್ತೆ ಅಭಿವೃದ್ಧಿಗೆ ಸ್ಥಳೀಯರು ಹಲವು ಬಾರಿ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಮೌಖಿಕ ಹಾಗೂ ಲಿಖಿತ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ, ನೀರು, ಗಟಾರು ಸೇರಿದಂತೆ ಮೂಲಸೌಕರ್ಯ ಒದಗಿಸಲಾಗದಿದ್ದರೆ ಗ್ರಾಮ ಪಂಚಾಯತಿಗಳು ಯಾಕಿರಬೇಕು ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಮಾಡುವ ಕಾರ್ಯ ಒಂದು ವರ್ಷದಿಂದ ನಡೆದಿಲ್ಲ. ಕೂಡಲೇ ಪಿಡಿಒ ಹಾಗೂ ಜನಪ್ರತಿನಿಧಿಗಳು ತುರ್ತು ಗಮನಹರಿಸಿ ರಸ್ತೆ ಹಾಗೂ ಗಟಾರ ಕಾಮಗಾರಿ ಪೂರ್ಣಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬಾದಾಮಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಎರಡ್ಮೂರು ವರ್ಷಗಳಿಂದ ಯಾವುದೇ ಕಾಮಗಾರಿ ನಡೆದಿಲ್ಲ. ರಸ್ತೆಯಲ್ಲಿಯೇ ನೀರು ನಿಂತಿರುವುದರಿಂದ ಗಲೀಜಾಗಿದೆ. ಸಾಂಕ್ರಾಮಿಕ ರೋಗ ಭೀತಿ ಆವರಿಸಿದೆ. ಜನಪ್ರತಿನಿಧಿಗಳು, ಮೇಲಧಿಕಾರಿಗಳು ಇತ್ತ ಗಮನ ಹರಿಸಿ ಕೂಡಲೇ ರಸ್ತೆ ಸುಧಾರಣೆ ಕಾಮಗಾರಿ ಮಾಡಬೇಕಿದೆ.

-ಶಿವಕುಮಾರ ಸಜ್ಜನ, ಹೊಸೂರ ಗ್ರಾಮದ ಮುಖಂಡರು.

ಹೊಸೂರ ಗ್ರಾಮ ಪಂಚಾಯತಿ ಪಿಡಿಒ ಆಗಿ ಬಂದು ಒಂದು ವರ್ಷ ಆಗಿದೆ. ಸಮಸ್ಯೆಗಳನ್ನು ಪರಿಶೀಲಿಸಿ ಕೂಡಲೇ ಕಾಮಗಾರಿ ಮಾಡಲು ಕ್ರಮ ತೆಗೆದುಕೊಳ್ಳುತ್ತೇನೆ.

-ನೀಲಮ್ಮ ಬಸಪ್ಪ ಮೇಟಿ, ಪಿಡಿಒ ಗ್ರಾಪಂ ಹೊಸೂರ

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ