ಮೆರವಣಿಗೆ ವೇಳೆ ‘ಬಾರೋ ಬಾರೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ’... ಎಂದು ಮಳೆಗಾಗಿ ಮಳೆರಾಯನ ಮೊರೆ ಇಟ್ಟು, ಗ್ರಾಮದೆಲ್ಲೆಡೆ ಹೊತ್ತು ಸಾಗಿ ಬಳಿಕ ಗಾಳಿ ದೇವಪ್ಪನ ದೇವಾಲಯದ ಬಳಿ ಮಾಡಿ ಪೂಜೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಬಿರು ಬಿಸಿಲು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ತಾಲೂಕಿನ ಅರಕೆರೆ ಗ್ರಾಮದಲ್ಲಿ ಮಳೆರಾಯನ ಹಬ್ಬವನ್ನು ಆಚರಿಸಿದರು.
ಗ್ರಾಮದ ಮಧ್ಯ ಭಾಗದ ಬಿಸಿಲು ಮಾರಮ್ಮನ ದೇವಾಲಯದ ಬಳಿ ಮರದಿಂದ ಮಾಡಿದ ಜೋಡಿ ಬಸವಗಳಿಗೆ ಪೂಜೆ ಸಲ್ಲಿಸಿ, ನಂತರ ಗ್ರಾಮಸ್ಥರೊಂದಿಗೆ ಗ್ರಾಮದ ರೇವಣ್ಣ ಅವರು ಗ್ರಾಮದೆಲ್ಲೆಡೆ ತಲೆಮೇಲೆ ಹೊತ್ತು ಮೆರವಣಿಗೆ ಮಾಡಿದರು.
ಜೋಡಿ ಬಸವಗಳನ್ನು ಹೊತ್ತು ಸಾಗುತ್ತಿದ್ದ ವೇಳೆ ಗ್ರಾಮದ ವಿವಿಧ ಬೀದಿಗಳಲ್ಲಿ ಸಾರ್ವಜನಿಕರು ಬಸವಗಳನ್ನು ಹೊತ್ತವರಿಗೆ ಕೊಡದಲ್ಲಿ ನೀರು ಹಾಕಿ ಪೂಜೆ ಸಲ್ಲಿಸಿದರು.
ಮೆರವಣಿಗೆ ವೇಳೆ ‘ಬಾರೋ ಬಾರೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ’... ಎಂದು ಮಳೆಗಾಗಿ ಮಳೆರಾಯನ ಮೊರೆ ಇಟ್ಟು, ಗ್ರಾಮದೆಲ್ಲೆಡೆ ಹೊತ್ತು ಸಾಗಿ ಬಳಿಕ ಗಾಳಿ ದೇವಪ್ಪನ ದೇವಾಲಯದ ಬಳಿ ಮಾಡಿ ಪೂಜೆ ಸಲ್ಲಿಸಿದರು.
ಈ ಬಾರಿ ಮೇ ಎರಡನೇ ವಾರಕ್ಕೆ ಕಾಲಿಟ್ಟರೂ ಮಳೆ ಬರುತ್ತಿಲ್ಲ. ಕೃಷಿ ಚಟುವಟಿಕೆ, ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗುವ ಆತಂಕ ಎದುರಾಗಿದೆ, ಈ ಹಿನ್ನೆಲೆ ಈ ಹಬ್ಬವನ್ನು ಹಿರಿಯರ ಸಲಹೆಯಂತೆ ಆಚರಿಸಲಾಗಿದೆ. ಮೆರವಣಿಗೆ ವೇಳೆ ಸಾರ್ವಜನಿಕರು ನೀಡಿದ ಧವಸ ದಾನ್ಯಗಳಿಂದ ಪ್ರಸಾದ ತಯಾರಿಸಿ ಬಳಿಕ ದೇವರಿಗೂ ಎಡೆ ಇಟ್ಟು ಎಲ್ಲರಿಗೂ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ನಡೆಸಿರುವುದಾಗಿ ಗ್ರಾಮಸ್ಥರು ತಿಳಿಸಿದರು.
ಈ ವೇಳೆ ಗ್ರಾಮದ ಎ.ಎಸ್.ಕಿಶೋರ್, ನಾರಾಯಣಪ್ಪ, ಶಿವರಾಜು, ಚಂದ್ರಶೇಖರ್, ರವಿಕುಮಾರ್, ಎ.ಎಸ್. ರಾಜು, ಕುಮಾರ್, ನವೀನ್, ರೋಹಿತ್ ಸೇರಿದಂತೆ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.