ಕೆಲ ಸಂಘಟನೆಗಳ ಕಾರ್ಯಕರ್ತರಿಂದ ಸರ್ಕಾರಿ ಕಚೇರಿಗಳಿಗೆ ನುಗ್ಗಿ ನಿಂದನೆ

KannadaprabhaNewsNetwork |  
Published : May 10, 2026, 01:30 AM IST
9ಕೆಎಂಎನ್ ಡಿ21 | Kannada Prabha

ಸಾರಾಂಶ

ಕಿರಗಸೂರು ಗ್ರಾಮದಲ್ಲಿ ಹಿರಿಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಸರ್ಕಾರಿ ಶಾಲೆ ಮಾದರಿಶಾಲೆಯಾಗಿ ರೂಪುಗೊಂಡಿದೆ. ಅಲ್ಲಿನ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳ ನಿರ್ಮಾಣಕ್ಕೆ ಸಿಎಸ್‌ಆರ್ ಅನುದಾನವನ್ನು ಕೊಟ್ಟು ಶಾಲೆಯ ಅಭಿವೃದ್ಧಿಗೆ ಪ್ರೋತ್ಸಾಹಿಸಲಾಗುತ್ತಿದೆ .

ಕನ್ನಡಪ್ರಭ ವಾರ್ತೆ ಮಳವಳ್ಳಿ

ರಾಜಕೀಯ ಸೋಗಿನಲ್ಲಿರುವ ಕೆಲವು ಸಂಘಟನೆಗಳ ಕಾರ್ಯಕರ್ತರು ಸರ್ಕಾರಿ ಕಚೇರಿಗಳಿಗೆ ನುಗ್ಗಿ ಅಲ್ಲಿನ ಸಿಬ್ಬಂದಿಗೆ ಹಲವು ಪ್ರಶ್ನೆಗಳನ್ನು ಮಾಡುವ ಜೊತೆಗೆ ಸರ್ಕಾರ, ಶಾಸಕರು ಹಾಗೂ ಅಧಿಕಾರಿಗಳ ವಿರುದ್ಧ ಏಕವಚನ ಪದ ಬಳಸಿ ನಿಂದಿಸಿದ್ದು, ಇವರ ವಿರುದ್ಧ ಜಿಲ್ಲಾಧಿಕಾರಿಗಳು ಸುಮೋಟೋ ಕೇಸು ದಾಖಲಿಸಬೇಕು ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ಆಗ್ರಹಿಸಿದರು.

ಪಟ್ಟಣದ ಪಶ್ಚಿಮ ಬಡಾವಣೆ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನೆಸ್ಲೆ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅವರ ಸಿಎಸ್‌ಆರ್ ಅನುದಾನದಲ್ಲಿ ₹1.30 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಆರು ಕೊಠಡಿಗಳ ನಿರ್ಮಾಣದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಯಾರೇ ಆದರೂ ಸಾರ್ವಜನಿಕ ಬದುಕಿನಲ್ಲಿರುವವರು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ, ಪದಬಳಕೆ ಬಗ್ಗೆ ಎಚ್ಚರವಿರಲಿ. ಬೂಟಾಟಿಕೆ, ಗುಂಡಾಗಿರಿ ಮಾಡಲು ದೇಶದ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಎಚ್ಚರಿಕೆ ನೀಡಿದರು.

ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ಅಥವಾ ಕಚೇರಿಯಲ್ಲಿ ಸರಿಯಾಗಿ ಕೆಲಸ ನಿರ್ವಹಿಸದಿದ್ದರೇ ಮೇಲಾಧಿಕಾರಿಗಳ ಗಮನಕ್ಕೆ ತರಬಹುದು. ಲೋಕಾಯುಕ್ತ, ತನಿಖಾ ಸಂಸ್ಥೆ ಹಾಗೂ ಸಕ್ಷಮ ಪ್ರಾಧಿಕಾರಕ್ಕೆ ದೂರು ನೀಡಬಹುದು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದರೇ ಸರ್ಕಾರದ ವತಿಯಿಂದ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದರು.

ಟೀಕೆ ಟಿಪ್ಪಣೆಗಳಿಗೆ ಸಮಯವನ್ನು ವ್ಯರ್ಥ ಮಾಡದೇ, ರಾಜಕೀಯ ಲಾಭಕ್ಕಾಗಿ ಅಧಿಕಾರವನ್ನು ಬಳಸಿಕೊಳ್ಳದೇ, ದೂರ ದೃಷ್ಟಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಯೋಚಿತವಾಗಿ ನಮ್ಮ ಜವಾಬ್ದಾರಿಯನ್ನು ಬದ್ಧತೆಯಿಂದ ನಿರ್ವಹಿಸಿದ್ದೇನೆ, ಸಾರ್ವಜನಿಕ ಬದುಕಿನಲ್ಲಿ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನಮ್ಮ ಶತ್ರುಗಳು ಕೂಡ ಅಭಿವೃದ್ಧಿಯ ವಿಷಯದಲ್ಲಿ ಪ್ರೀತಿಸುವಂತೆ ಇಚ್ಛಾಶಕ್ತಿಯಿಂದ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ ಎಂದು ಹೇಳಿದರು.

ಸರ್ಕಾರ ಕೊಟ್ಟಿರುವ ಜವಾಬ್ದಾರಿಯನ್ನು ನಿರ್ವಹಿಸುವ ಸಂದರ್ಭದಲ್ಲಿ ಉದ್ಯಮ ಸಂಸ್ಥೆಗಳು ನನ್ನ ಸಂಪರ್ಕಕ್ಕೆ ಬಂದಾಗ ತಮ್ಮ ಸಿಎಸ್‌ಆರ್ ಅನುದಾನವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೀಡಬೇಕೆಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಹಲವರು ಸಂಸ್ಥೆಗಳು ಮೂಲ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ ಎಂದರು.

ತಾಲೂಕಿನ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಡಿಜಿಲೀಕರಣ, ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಿಗೆ ಮಲ್ಟಿಮೀಡಿಯಾ ಸ್ಥಾಪನೆ ಮಾಡುವುದರ ಮೂಲಕ ಗ್ರಾಮೀಣ ವಿದ್ಯಾರ್ಥಿಗಳು ಪಟ್ಟಣದ ಖಾಸಗಿ ಶಾಲೆಗಳ ಮಕ್ಕಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಸೌಲಭ್ಯ ನೀಡಲಾಗಿದೆ. ಮಲ್ಟಿಮೀಡಿಯಾ ಸ್ಥಾಪನೆ ಹಿನ್ನೆಲೆಯಲ್ಲಿ ಪ್ರಸ್ತುತ ವರ್ಷದ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕಟ್ಟೆಕಡೆಯ ರೈತನಿಗೂ ನೀರನ್ನು ಕೊಟ್ಟು ತಾಲೂಕಿನ ನೀರಾವರಿ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಸುಮಾರು ₹700 ಕೋಟಿಗೂ ಹೆಚ್ಚು ಅನುದಾನ ತಂದು ನಾಲಾ ಆಧುನೀಕರಣಗೊಳಿಸಲಾಗಿದೆ. ಹಲವು ವರ್ಷಗಳಿಂದ ಸಾರ್ವಜನಿಕ ಅಸ್ಪತ್ರೆಗೆ ಬೇಕಾಗಿದ್ದ ಶವಾಗಾರಕ್ಕೆ ಸೂಕ್ತ ಅನುದಾನ ಬಿಡುಗಡೆಗೊಳಿಸಿ, ಸುಸಜ್ಜಿತ ಶವಾಗಾರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ತಿಳಿಸಿದರು.

ಕಿರಗಸೂರು ಗ್ರಾಮದಲ್ಲಿ ಹಿರಿಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಸರ್ಕಾರಿ ಶಾಲೆ ಮಾದರಿಶಾಲೆಯಾಗಿ ರೂಪುಗೊಂಡಿದೆ. ಅಲ್ಲಿನ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳ ನಿರ್ಮಾಣಕ್ಕೆ ಸಿಎಸ್‌ಆರ್ ಅನುದಾನವನ್ನು ಕೊಟ್ಟು ಶಾಲೆಯ ಅಭಿವೃದ್ಧಿಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ವಿವರಿಸಿದರು.

ನಂತರ ಶಾಸಕರು ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮಿಸಿದರು.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ ಉಮಾ, ತಾಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸಂಜಯ್, ಮನ್ಮುಲ್‌ ನಿರ್ದೇಶಕ ಆರ್.ಎನ್.ವಿಶ್ವಾಸ್, ಟಿಎಪಿಸಿಎಂಎಸ್ ನಿರ್ದೇಶಕ ಕೆ.ಜೆ ದೇವರಾಜು, ದಿಲೀಪ್‌ಕುಮಾರ್, ಮಾಜಿ ಪುರಸಭೆ ಸದಸ್ಯ ನೂರುಲ್ಲಾ, ನೆಸ್ಲೆ ಮುಖ್ಯಸ್ಥ ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭ್ರಷ್ಟಾಚಾರದ ವಿರುದ್ಧ ವಾಟಾಳ್ ಪಕ್ಷದಿಂದ ರಾಜ್ಯಾದ್ಯಂತ ಹೋರಾಟ: ವಾಟಾಳ್ ನಾಗರಾಜ್
ಮಳೆಗಾಗಿ ಪ್ರಾರ್ಥಿಸಿ ಮಳೆರಾಯನ ಹಬ್ಬ ಆಚರಿಸಿದ ಅರಕೆರೆ ಗ್ರಾಮಸ್ಥರು