ನಾಗೇಂದ್ರ ಜೆ. ಕನ್ನಡಪ್ರಭ ವಾರ್ತೆ ಪಾವಗಡ
ತಾಲೂಕಿನ ಕಸಬಾ ಹೋಬಳಿಯ ಕೊಡಮಡಗು ಗ್ರಾಪಂನ ಕಡಮಲಕುಂಟೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಪಕ್ಕದಲ್ಲಿನ ಆಂಧ್ರ ಪ್ರದೇಶದ ರೊದ್ದಂ ಮೂಲದ ವ್ಯಕ್ತಿಯೊಬ್ಬ ದಿನ ನಿತ್ಯ ಸರಬರಾಜು ಮಾಡುತ್ತಿದ್ದು ವಾಟರ್ ಟ್ಯಾಂಕ್ ನೀರು ಖರೀದಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಮತ್ತು ಒಳ ಚರಂಡಿ ವ್ಯವಸ್ಥೆ ಇಲ್ಲದೆ ಮನೆಗಳ ಮುಂದೆ ನೀರು ಹೊರ ಚೆಲ್ಲುತ್ತಿರುವುದರಿಂದ ರಸ್ತೆ ಜಲಾವೃತವಾಗಿದ್ದು, ಸೊಳ್ಳೆ ಹಾಗೂ ಕ್ರಿಮಿ ಕೀಟಗಳ ಹಾವಳಿಗೆ ತತ್ತರಿಸಿದ್ದೇವೆ. ಇಲ್ಲಿನ ಬಹುತೇಕ ಜನರು ಈಗಾಗಲೇ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಸಾಮಾನ್ಯವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.ಕೊಡಮಡಗು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ದಾದಲೂರಿ ಎಂಬುವರಿಗೆ ಮನವಿ ಪತ್ರ ಸಲ್ಲಿಸಿದ್ದು ಸಮಸ್ಯೆ ನಿವಾರಣೆಯಲ್ಲಿ ವಿಫಲರಾದ ಪರಿಣಾಮ ನೀರಿನ ಅಭಾವ ತಲೆದೊರಿದೆ. ಗ್ರಾಪಂನ 15ನೇ ಹಣಕಾಸು ಯೋಜನೆ ಅಡಿಯಲ್ಲಿ 5ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದು ಕಾಮಗಾರಿ ಕೈಗೊಳ್ಳದ ಕಾರಣ ಎಸ್ಸಿ ಕಾಲೋನಿ ಕೊಳಚೆ ಪ್ರದೇಶವಾಗಿ ನಿರ್ಮಾಣಗೊಂಡಿದೆ. ಈ ಸಂಬಂಧ ತಾಪಂ ಇಒ ಮಧುಸೂದನ್ ಮನವಿ ಸಲ್ಲಿಸಿ ಒಂದುವರೆ ತಿಂಗಳು ಕಳೆದರೂ ಸೂಕ್ತ ಕ್ರಮ ಜರುಗಿಸಿ ಸಮಸ್ಯೆ ಬಗೆಹರಿಸಲು ವಿಫಲರಾಗಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಇನ್ನೂ ಈ ಬಗ್ಗೆ ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಸಮಸ್ಯೆಗೆ ಇತಿಶ್ರೀ ಹಾಡಬೇಕು ಎಂದು ತಾಳೇಮರದಹಳ್ಳಿ ಗೋವಿಂದಪ್ಪ, ಕಡಮಲಕುಂಟೆ ಗೋವಿಂದಪ್ಪ, ಚಿದಾನಂದರೆಡ್ಡಿ, ಮಾರುತಿ ಕೆ. ಎನ್.ಗುರುಮೂರ್ತಿ ಎನ್, ನರೇಶ್ ಟಿ,ಹರೀಶ್ ಎಚ್. ಗಣೇಶ್. ನಾಗೇಂದ್ರ ಡಿ. ರಮೇಶ್ ಇತರರು ಒತ್ತಾಯಿಸಿದ್ದಾರೆ.