ಕನ್ನಡಪ್ರಭ ವಾರ್ತೆ ಬ್ಯಾಟರಾಯನಪುರ
ಈ ಕುರಿತು ತರಹುಣಿಸೆ ಗ್ರಾಮದ ರೈತ ಮುಖಂಡ ಟಿ.ಪಿ.ಪ್ರಕಾಶ್ ಅವರು ಮಾತನಾಡಿ, ತರಹುಣಿಸೆಯಲ್ಲಿ ಸರ್ಕಾರ ನಿರ್ಮಿಸಲು ಹೊರಟಿರುವ ಉದ್ದೇಶತ ಘನ ತ್ಯಾಜ್ಯ ನಿರ್ವಹಣಾ ಘಟಕ(ಎಂಆರ್‌ಎಫ್)ದ ಈ ಜಾಗದ ಪಕ್ಕದಲ್ಲಿ ದ್ರಾವಿಡ್ ಪಡುಕೋಣೆ ಸ್ಪೋರ್ಟ್ಸ್ ಅಕಾಡೆಮಿ ಯಂತಹ ಪ್ರತಿಷ್ಠಿತ ಕ್ರೀಡಾ ತರಬೇತಿ ಕೇಂದ್ರವಿದೆ. ಇಲ್ಲಿ ನಿತ್ಯ ಕ್ರೀಡಾಪಟುಗಳು ಕ್ರೀಡಾ ತರಬೇತಿ ಪಡೆಯುತ್ತಾರೆ. ತರಹುಣಸೆ ಸರ್ಕಾರಿ ಪ್ರೌಢಶಾಲೆ, ರಾಕುಂ ಅಂದರ ಶಾಲೆ, ವಿದ್ಯಾಶಿಲ್ಪ ಅಕಾಡೆಮಿ, ಸ್ಟೋನ್ ಹಿಲ್ ಶಾಲೆ, ಗುರುಕುಲ ವಿದ್ಯಾ ಸಂಸ್ಥೆ, ಸೇರಿದಂತೆ ಹಲವಾರು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿದ್ದು, ಪ್ರತಿನಿತ್ಯ ಸಹಸ್ರಾರು ವಿದ್ಯಾರ್ಥಿಗಳು ಈ ಮೂಲಕ ಹಾದು ಹೋಗಬೇಕಾಗುತ್ತದೆ. ಸನಿಹದಲ್ಲೇ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಾದ ಎಂಬೆಸಿ, ಆದರ್ಶ್, ಸರ್ಜ್, ಪ್ರೆಸ್ಟೀಜ್, ಮಾರಿಗೋಲ್ಡ್ ನಂತಹ ನಿರ್ಮಾಣ ಸಂಸ್ಥೆಗಳು ವಸತಿ ನಿರ್ಮಾಣ ಕಾರ್ಯಕ್ಕಾಗಿ ನೂರಾರು ಎಕರೆ ಪ್ರದೇಶವನ್ನು ಸಜ್ಜುಗೊಳಿಸುತ್ತಿದ್ದಾರೆ. ಘನ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸುತ್ತಿರುವ ಜಾಗದ ಸುತ್ತಲಿನ ಪ್ರದೇಶದಲ್ಲಿ ತರಹುಣಸೆ, ಬೆಟ್ಟಹಲಸೂರು, ತಿಮ್ಮಸಂದ್ರ, ಮರಗೊಂಡನಹಳ್ಳಿ, ಗಡಿನಹಳ್ಳಿ, ಬೆಟ್ಟೇನಹಳ್ಳಿ, ಕುದುರೆಗೆರೆ, ಮಾರಗೊಂಡನಹಳ್ಳಿ ಕೆರೆಗಳಿವೆ.
ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಯಿಂದ ಈ ಎಲ್ಲಾ ಕೆರೆಗಳು ಕಲುಷಿತಗೊಳ್ಳುವ ಸಂಭಾವ್ಯತೆ ಇದೆ. ಇದೇ ಪ್ರದೇಶದ ಸಮೀಪದಲ್ಲಿ ಪ್ರಸಿದ್ಧ ದೇವಾಲಯ ಶ್ರೀ ಪಟಾಲಮ್ಮ ದೇವಿ ದೇವಾಲಯ ಸೇರಿದಂತೆ ಹತ್ತಾರು ದೇವಾಲಯಗಳು ಇವೆ, ಕಲ್ಯಾಣ ಮಂಟಪವಿದೆ, ಎರಡು ಕುದುರೆ ಓಟ ತರಬೇತಿ ಕೇಂದ್ರಗಳಿವೆ. ಇಲ್ಲಿನ ಸಹಸ್ರಾರು ಎಕರೆ ಪ್ರದೇಶದಲ್ಲಿ ತೋಟ, ಹೊಲಗದ್ದೆ ಸೇರಿದಂತೆ ಕೃಷಿ ಮತ್ತು ತೋಟಗಾರಿಕಾ ಚಟುವಟಿಕೆ ನಿರಂತರವಾಗಿ ನಡೆಯುತ್ತಿದೆ. ಇಂತಹ ಜಾಗದಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸುವ ಯೋಜನೆಯನ್ನು ಸರ್ಕಾರ ಕೂಡಲೇ ಕೈ ಬಿಡಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.