ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಗುಂಡಿ ಬಿದ್ದ ರಸ್ತೆಯಲ್ಲಿ ಭತ್ತದ ನಾಟಿ ಮಾಡಿ ತಾಲೂಕಿನ ಮಹದೇವಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಗ್ರಾಮದ ಮುಖ್ಯ ರಸ್ತೆ ಗುಂಡಿ ಬಿದ್ದು ನೀರು ತುಂಬಿದ್ದು, ಕೆಸರುಗದ್ದೆಯಾಗಿದ್ದು, ಗ್ರಾಮಸ್ಥರು ಭತ್ತದ ನಾಟಿ ಮಾಡಿ ರಸ್ತೆ ದುರಸ್ತಿಗೊಳಿಸದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿದರು.
ಮಂಡ್ಯ- ಬನ್ನೂರು ಮಾರ್ಗದಿಂದ ಸಾವಿರಾರು ವಾಹನಗಳು ಮಹದೇವಪುರ ಗ್ರಾಮದಿಂದ ಮೈಸೂರಿಗೆ ಪ್ರತಿನಿತ್ಯ ಸಂಚರಿಸುತ್ತವೆ. ಆದರೆ, ಗ್ರಾಮದ ಮುಖ್ಯ ರಸ್ತೆ ಗುಂಡಿ ಬಿದ್ದು, ಹಾಳಾಗಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ರಸ್ತೆ ದುರಸ್ತಿಗೊಳಿಸುವಂತೆ ಒತ್ತಾಯಿಸಿದರೂ ಪ್ರಯೋಜವಾಗಿಲ್ಲ ಎಂದು ಆರೋಪಿಸಿದರು.ಪ್ರತಿನಿತ್ಯ ಸಾರಿಗೆ, ಖಾಸಗಿ ಬಸ್ಸುಗಳು, ಲಾರಿಗಳು ಬೈಕುಗಳು ಹಾಗೂ ಶಾಲಾ- ಕಾಲೇಜು ವಾಹನಗಳು ಸಹ ಚಲಿಸುತ್ತಿರುತ್ತವೆ. ದ್ವಿಚಕ್ರ ವಾಹನ ಸವಾರರು ಜೀವ ಭಯದಲ್ಲೇ ಸಂಚರಿಸುವಂತಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಿನನಿತ್ಯ ಸಂಚರಿಸುವ ಕ್ರಷರ್ ಲಾರಿಗಳು ಮತ್ತು ಟಿಪ್ಪರ್‌ಗಳ ಹಾವಳಿಯಿಂದಾಗಿ ರಸ್ತೆ ಹದಗೆಟ್ಟಿದೆ. ಈಗಾಗಲೇ ಹಲವು ವಾಹನ ಸವಾರರು ಕೆಳಕ್ಕೆ ಬಿದ್ದು ಅಪಘಾತ ಸಂಭವಿಸಿವೆ. ಹೆಚ್ಚಿನ ಅವಘಢಗಳು ಸಂಭವಿಸುವ ಮುನ್ನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ರಸ್ತೆ ದುರಸ್ಥಿ ಪಡಿಸುವಂತೆ ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಹಲವರು ಭಾಗವಹಿಸಿದ್ದರು.ಇಂದು ರೈತರಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ
ಮದ್ದೂರು:ಕೆಆರ್‌ಎಸ್ ಅಣೆಕಟ್ಟು ತುಂಬಿದ್ದರೂ ತಾಲೂಕಿನ ಶಿಂಷಾ ಎಡದಂಡೆ, ಬಲದಂಡೆ ನಾಲೆಗಳಿಗೆ ನೀರು ಹರಿಸದ ಪರಿಣಾಮ ಕೃತಕ ಬರಗಾಲ ಉಂಟಾಗಿದೆ. ಇದರಿಂದ ಈ ಭಾಗದ ರೈತರು ಮುಂಗಾರು ಬೆಳೆ ಬೆಳೆಯಲಾಗದೆ ಕಂಗಾಲಾಗಿದ್ದಾರೆ. ಸರ್ಕಾರ ಕೂಡಲೇ ಈ ಭಾಗದ ನಾಲೆಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಸೆ.11ರಂದು ಬೆಳಗ್ಗೆ 10.30 ಕ್ಕೆ ತಾಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ರೈತರು ಸ್ವಯಂ ಪ್ರೇರಿತವಾಗಿ ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕೆಂದು ಮದ್ದೂರು ತಾಲೂಕು ರೈತಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.