ಕೆರೆ ತುಂಬಿಸಲು ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

KannadaprabhaNewsNetwork |  
Published : Sep 20, 2026, 03:15 AM IST
ಗದಗ ತಾಲೂಕಿನ ಲಕ್ಕುಂಡಿಯ ಕೆರೆಗಳನ್ನು ಸಿಂಗಟಾಲೂರು ಏತ ನೀರಾವರಿಯ ಕಾಲುವೆಯಿಂದ ತುಂಬಿಸಲು ಅಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ತಾಲೂಕಿನ ಲಕ್ಕುಂಡಿ ಗ್ರಾಮದ ಎರಡು ಬೃಹತ್ ಕೆರೆಗಳನ್ನು ಸಿಂಗಟಾಲೂರು ಏತ ನೀರಾವರಿಯ ಕಾಲುವೆಯಿಂದ ತುಂಬಿಸಬೇಕು ಎಂದು ಒತ್ತಾಯಿಸಿ ರೈತರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನೆಡಸಿದರು.

ಸಿಂಗಟಾಲೂರು ಏತ ನೀರಾವರಿಯ ಕಾಲುವೆಯಿಂದ ನೀರು ತರಲು ಒತ್ತಾಯ

ಕನ್ನಡಪ್ರಭ ವಾರ್ತೆ ಗದಗ

ತಾಲೂಕಿನ ಲಕ್ಕುಂಡಿ ಗ್ರಾಮದ ಎರಡು ಬೃಹತ್ ಕೆರೆಗಳನ್ನು ಸಿಂಗಟಾಲೂರು ಏತ ನೀರಾವರಿಯ ಕಾಲುವೆಯಿಂದ ತುಂಬಿಸಬೇಕು ಎಂದು ಒತ್ತಾಯಿಸಿ ರೈತರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನೆಡಸಿದರು.

ಗ್ರಾಮದ ಸಮೀಪದ ಚುರ್ಚಿಹಾಳ ಗ್ರಾಮದ ಹತ್ತಿರದ ತುಂಗಾಭದ್ರಾ ಕಾಲುವೆಯ ನೀರು ಪೊರೈಕೆಯ ಜಾಕ್‌ವೆಲ್ ಕೇಂದ್ರಕ್ಕೆ ಮುತ್ತಿಗೆ ಹಾಕಿದ ಗ್ರಾಮಸ್ಥರು ಏತ ನೀರಾವರಿ, ಮತ್ತು ಹನಿ ನೀರಾವರಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಸ್ಥಳಕ್ಕೆ ಆಗಮಿಸಿದ ಹೂವಿನ ಹಡಗಲಿ ವಿಭಾಗದ ಏತ ನೀರಾವರಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರ ಅವರ ಜತೆ ಚರ್ಚಿಸಿ ಲಕ್ಕುಂಡಿ ಗ್ರಾಮದ ರೈತರಿಗೆ ಆಗುತ್ತಿರುವ ತಾರತಮ್ಯದ ಕುರಿತು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ತಾಪಂ ಮಾಜಿ ಸದಸ್ಯ ಮಹೇಶ ಮುಸ್ಕಿನಭಾವಿ ಹಾಗೂ ಲಕ್ಕುಂಡಿ ಬಿಜೆಪಿ ಮಂಡಲದ ಅಧ್ಯಕ್ಷ ಪ್ರಕಾಶ ಅರಹುಣಶಿ ಮಾತನಾಡಿ, ಪ್ರಸಕ್ತ ವರ್ಷ ಮುಂಗಾರು ಕೊರತೆಯಿಂದ ಹಳ್ಳ, ಕೊಳ್ಳ, ಕೆರೆ, ಭಾವಿಗಳಲ್ಲಿ ಅಂತರ್ಜಲ ಕುಸಿತಗೊಂಡು ಜನ, ಜಾನುವಾರುಗಳಿಗೆ ನೀರಿನ ಕೊರತೆ ಎದುರಾಗಿದೆ. ಹೀಗಾಗಿ ಎರಡು ತಿಂಗಳ ಹಿಂದೆಯೇ ನರಗುಂದ ಕ್ಷೇತ್ರದ ಶಾಸಕ ಸಿ.ಸಿ. ಪಾಟೀಲ ಅವರು ಅಧಿಕಾರಿಗಳಿಗೆ ದೂರವಾಣಿ ಮೂಲಕ ಹೇಳಿದರೂ ಸಹ ಕಾಲುವೆಗೆ ನೀರು ಹರಿಸಲು ಆಸಕ್ತಿ ವಹಿಸುತ್ತಿಲ್ಲ. ಇನ್ನೂ ಗ್ರಾಮದ ರೈತರು ಹಲವಾರು ಸಲ ದೂರವಾಣಿ ಸಂಪರ್ಕ ಮಾಡಿ ಕಾಲುವೆಗೆ ನೀರು ಬೀಡಲು ವಿನಂತಿಸಿದರು ಸ್ಪಂದನೆ ನೀಡುತ್ತಿಲ್ಲ. ಮುಂಡರಗಿ ತಾಲೂಕಿನ ಗ್ರಾಮಗಳ ಕೆರೆಗಳನ್ನು ಮಾತ್ರ ತುಂಬಿಸಲು ಕಾಲುವೆಗೆ ನೀರು ಹರಿಸುತ್ತಿದ್ದು ಅಧಿಕಾರಿಗಳು ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೂವಿನ ಹಡಗಲಿ ವಿಭಾಗದ ಏತ ನೀರಾವರಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರ ಪ್ರಕಾಶ ಅವರು, ಈಗಾಗಲೇ ನೀರಾವರಿಗೆ ಅನುಕೂಲ ಮಾಡಿಕೊಡಲು ಯಾವುದೇ ನೀರಿನ ಸಮಸ್ಯೆಯಿಲ್ಲ. ಇಲ್ಲಿಯ ಕೆಲವು ಪಂಪ್‌ ಸೆಟ್‌ಗಳು ದುರಸ್ತಿ ಇದ್ದ ಕಾರಣ ತೊಂದರೆಯಾಗಿತ್ತು. ಮುಂಡರಗಿ ತಾಲೂಕಿನ ಪೇಠಾಲೂರು, ಜಂತ್ಲಿ, ಲಕ್ಕುಂಡಿಯ ಹಾಲಗೊಂಡ ಬಸವೇಶ್ವರ, ದಂಡಿನ ದುರ್ಗಾದೇವಿ ಹಾಗೂ ಗದಗ ಭೀಷಮ ಕೆರೆ ತುಂಬಿಸುವುದು ಬಾಕಿ ಉಳಿದಿದೆ. ಸೋಮವಾರದಿಂದ ಈ ಎಲ್ಲ ಕೆರೆಗಳನ್ನು ತುಂಬಿಸಲು ಕಾಲುವೆಗೆ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈ ಬಿಡಲಾಯಿತು.

ಈ ವೇಳೆ ಅಶೋಕ ಬೂದಿಹಾಳ, ಬಸವರಾಜ ಮುಳ್ಳಾಳ, ಮರಿಯಪ್ಪ ವಡ್ಡರ, ವೆಂಕಟೇಶ ದೊಂಗಡೆ, ಈರಣ್ಣ ಕಮತರ, ಕುಬೇರಗೌಡ ಪಾಟೀಲ, ಬಸನಗೌಡ ಪಾಟೀಲ, ಅಶೋಕ ಮಂದಾಲಿ, ಮಹಾಂತೇಶ ಹುಬ್ಬಳ್ಳಿ, ಚನ್ನಪ್ಪ ಹುಬ್ಬಳ್ಳಿ, ಮಂಜುನಾಥ ಕವಲೂರು ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬುಡಕಟ್ಟು ಸಿದ್ದಿ ಸಮುದಾಯಕ್ಕೆ ಪೌಷ್ಟಿಕಾಹಾರ ವಿತರಿಸಿ
ರೋಗ ಬರುವ ಮುಂಚೆ ಜಾಗೃತಿ ವಹಿಸಿ: ಡಾ. ಯೋಗೇಶ್ ಮಡಗಾಂವಕರ