ಮನಮನೆ ಗ್ರಾಮದ ಗೋಮಾಳ ಉಳಿವಿಗೆ ಗ್ರಾಮಸ್ಥರ ಧರಣಿ

KannadaprabhaNewsNetwork | Published : Oct 4, 2024 1:05 AM

ಸಾರಾಂಶ

ಖಾಸಗಿ ಕಂಪನಿಗಳು ನಮ್ಮೂರಿನ ಗೋಮಾಳ ಜಾಗದಲ್ಲಿ ಆ ಜಾಗ ತಮಗೆ ಬೇಕು ಎಂದು ಗ್ರಾಪಂ ಠರಾವು ಮಾಡಿಸಿ ಕೆಲಸವನ್ನು ಆರಂಭಿಸಿದ್ದಾರೆ. ಅದು ಫಲವತ್ತಾದ ಜಾಗ. ಅಲ್ಲಿ ಕೈಗಾರಿಕಾ ಕಟ್ಟಡ ಕಟ್ಟುವುದು ಸೂಕ್ತವಲ್ಲ ಎಂದು ಗ್ರಾಮಸ್ಥರು ತಿಳಿಸಿದರು.

ಸಿದ್ದಾಪುರ: ತಾಲೂಕಿನ ಮಳವಳ್ಳಿಯ ಕೈಗಾರಿಕಾ ವಸಾಹತು ಸ್ಥಾಪನೆಗೆ ಜಮೀನುಗಳ ಮಂಜೂರು ಮಾಡಿದ ಠರಾವನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಸ್ಥಳೀಯ ಗ್ರಾಮಸ್ಥರು ಮನಮನೆ ಗ್ರಾಪಂ ಕಾರ್ಯಾಲಯದ ಎದುರು ಗುರುವಾರ ಧರಣಿ ನಡೆಸಿದರು.ಮನಮನೆ ಗ್ರಾಮ ಸುಧಾರಣಾ ಕಮಿಟಿ ಅಧ್ಯಕ್ಷ ವೆಂಕಟೇಶ ನಾಯ್ಕ ಮಲವಳ್ಳಿ ಮಾತನಾಡಿ, ಖಾಸಗಿ ಕಂಪನಿಗಳು ನಮ್ಮೂರಿನ ಗೋಮಾಳ ಜಾಗದಲ್ಲಿ ಆ ಜಾಗ ತಮಗೆ ಬೇಕು ಎಂದು ಗ್ರಾಪಂ ಠರಾವು ಮಾಡಿಸಿ ಕೆಲಸವನ್ನು ಆರಂಭಿಸಿದ್ದಾರೆ. ಅದು ಫಲವತ್ತಾದ ಜಾಗ. ಅಲ್ಲಿ ಕೈಗಾರಿಕಾ ಕಟ್ಟಡ ಕಟ್ಟುವುದು ಸೂಕ್ತವಲ್ಲ. ಜಾನುವಾರುಗಳ ಮೇವಿಗಾಗಿ ಆ ಜಾಗವನ್ನು ರಕ್ಷಿಸಿಕೊಂಡು ಬಂದಿದ್ದೇವೆ. ಇಲ್ಲಿ ಪ್ರತಿಭಟನೆಗೆ ಕುಳಿತ ಹೆಣ್ಣುಮಕ್ಕಳನ್ನು ನೋಡಿದರೆ ಇದಕ್ಕೆ ಎಷ್ಟು ವಿರೋಧವಿದೆ ಎನ್ನುವುದು ಅರಿವಾಗುತ್ತದೆ ಎಂದರು.ಶಾಸಕ ಭೀಮಣ್ಣ ನಾಯ್ಕ ಅವರಲ್ಲಿ ಸಮಸ್ಯೆ ಬಗೆಹರಿಸುವ ಕುರಿತು ಜಿಲ್ಲಾಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಎಂದು ಈ ಹಿಂದೆ ಹೇಳಿದ್ದೆವು. ಆದರೆ ಭೀಮಣ್ಣ ನಾಯ್ಕ ಹಾರಿಕೆ ಉತ್ತರ ನೀಡಿ ನುಣುಚಿಕೊಂಡಿದ್ದಾರೆ. ಸರ್ಕಾರ ಈ ಜಾಗದ ಠರಾವನ್ನು ರದ್ದುಪಡಿಸಿ, ಆದೇಶ ಕೈಬಿಡದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಸಿದ್ದಾಪುರ ದಂಡಾಧಿಕಾರಿಗಳ ಕಚೇರಿ ಎದುರು ಗ್ರಾಮದ ಜನರು ದನ, ಕರು, ಜಾನುವಾರುಗಳೊಂದಿಗೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದರು.ಗ್ರಾಮದ ಪ್ರಮುಖರಾದ ಕೃಷ್ಣ ಬಿ. ನಾಯ್ಕ ಮಾತನಾಡಿ, ಸಮಸ್ಯೆ ಪರಿಹಾರಕ್ಕೆ ಸ್ಪಂದನೆ ಸಿಗದಿದ್ದಲ್ಲಿ ಪಾದಯಾತ್ರೆಯಲ್ಲಿ ತಹಸೀಲ್ದಾರ್ ಕಚೇರಿಗೆ ಬಂದು ಮನವಿ ನೀಡಲಿದ್ದೇವೆ. ನ್ಯಾಯ ಸಿಗದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮಾತ್ರವಲ್ಲ, ವಿಧಾನಸೌಧಕ್ಕೂ ಮುತ್ತಿಗೆ ಹಾಕುತ್ತೇವೆ. ರೈತರು ಕೈಕಟ್ಟಿ ಕುಳಿತರೆ ನಮ್ಮ ಮೇಲೆ ದರ್ಬಾರ್ ಮಾಡುತ್ತಾರೆ ಎಂದರು.

ಗೋಪಾಲ ವಿ. ನಾಯ್ಕ ಮಾತನಾಡಿ, ಬರಡು ಜಾಗವಾಗಿದ್ದರೆ ಇಲ್ಲಿ ಯೋಜನೆ ಮಾಡಬಹುದಿತ್ತು. ನಮ್ಮ ಗ್ರಾಮದಲ್ಲಿ ಪ್ರತಿ ಮನೆಯಲ್ಲೂ ಕನಿಷ್ಠ ೧೦ ಜಾನುವಾರುಗಳಿವೆ. ಈ ಫಲವತ್ತಾದ ಭೂಮಿಯನ್ನು ೯೮೧ ಜಾನುವಾರುಗಳ ಸಲುವಾಗಿ ಕಾಯ್ದಿಟ್ಟುಕೊಂಡಿದ್ದೇವೆ. ನಾವು ಜಾನುವಾರುಗಳಿಗಾಗಿ ಹೋರಾಟ ನಡೆಸುತ್ತೇವೆ ಎಂದರು. ಅಧಿಕ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು. ಉಪತಹಸೀಲ್ದಾರ್‌ ಡಿ.ಎಂ. ನಾಯ್ಕ ಮನವಿ ಸ್ವೀಕರಿಸಿದರು.

Share this article