ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಗ್ರಾಮದ ಅಂಗನವಾಡಿಗೆ 12 ಮಕ್ಕಳು ದಾಖಲಾಗಿದ್ದರು. ನೇತ್ರಾವತಿ ಎಂಬ ಅಂಗನವಾಡಿ ಶಿಕ್ಷಕಿಯು ಅವಧಿ ಮುಗಿದ ಮತ್ತು ಹುಳು ಬಿದ್ದಿರುವ ಆಹಾರ ಸಾಮಗ್ರಿಗಳನ್ನು ಬಳಸಿ ಮಕ್ಕಳಿಗೆ ಉಣ ಬಡಿಸುತ್ತಿದ್ದರು.
ಹುಳು ಹಿಡಿದ ಆಹಾರ ತಿಂದು ಅಂಗನವಾಡಿ ಕೇಂದ್ರದ ನಾಲ್ಕಾರು ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದರು. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಹುಳು ಇರುವ, ಅವಧಿ ಮುಗಿದಿರುವ ಆಹಾರ ಸಾಮಗ್ರಿ ಬಳಕೆ ಮಾಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಅಂಗನವಾಡಿ ಕೇಂದ್ರಕ್ಕೆ ಬಂದು ಪ್ರತಿಭಟನೆ ನಡೆಸಿದರು.ಅಂಗನವಾಡಿ ಕಾರ್ಯಕರ್ತೆ ನೇತ್ರಾವತಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅಂಗನವಾಡಿಗೆ ಬೀಗ ಜಡಿಯಲು ಮುಂದಾದರು. ಸುದ್ದಿ ತಿಳಿದು ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ವಿದ್ಯಾವತಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಅವಧಿ ಮುಗಿದ ಆಹಾರ ಪದಾರ್ಥ ಬಳಸಿ ನಮ್ಮ ಮಕ್ಕಳನ್ನು ಬಲಿಕೊಡಲು ಮುಂದಾಗಿರುವ ಅಂಗನವಾಡಿ ಕಾರ್ಯಕರ್ತೆಯ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಅಂಗನವಾಡಿ ಟೀಚರ್ ನೇತ್ರಾವತಿಯನ್ನು ತಮ್ಮೂರಿನಿಂದ ಹೊರಗೆ ಕಳುಹಿಸುವವರೆಗೂ ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದಿಲ್ಲ ಎಂದು ತಾಕೀತು ಮಾಡಿದರು.
ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಅಂಗನವಾಡಿಯ ದಾಸ್ತಾನು ಜಾಗದಿಂದ ಹೊರಗೆ ತಂದು ಅಧಿಕಾರಿಗಳ ಮುಂದೆ ಗ್ರಾಮಸ್ಥರು ತಂದು ಸುರಿದು ಕ್ರಮಕ್ಕೆ ಒತ್ತಾಯಿಸುತ್ತಿದ್ದರೆ ಅಂಗನವಾಡಿ ಸೂಪರ್ ವೈಸರ್ ಶಾಂತಮ್ಮ ನನ್ನ ವ್ಯಾಪ್ತಿಯಲ್ಲಿ 64 ಅಂಗನವಾಡಿ ಕೇಂದ್ರಗಳಿವೆ. ಎಲ್ಲ ಕಡೆಗೂ ಭೇಟಿ ನೀಡಿ ಪರಿಶೀಲಿಸಲು ನನ್ನಿಂದ ಆಗುವುದಿಲ್ಲ ಎಂದು ಉಡಾಫೆ ಉತ್ತರ ನೀಡಿದರು.
ಬಿಲ್ಲೇನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ವೆಂಕಟೇಶ್ ಮಾತನಾಡಿ, ಕೇವಲ ಅಂಗನವಾಡಿ ಕಾರ್ಯಕರ್ತೆಯ ಮೇಲೆ ಕ್ರಮವಾದರೆ ಸಾಲದು, ಬದಲಾಗಿ ಅವಧಿ ಮುಗಿದ ಆಹಾರ ಪದಾರ್ಥಗಳನ್ನು ನಮ್ಮ ಅಂಗನವಾಡಿ ಕೇಂದ್ರಕ್ಕೆ ಪೂರೈಕೆ ಮಾಡಿದವ್ಯಾರು? ಇದರಲ್ಲಿ ಅಧಿಕಾರಿಗಳ ಪಾತ್ರವೇನು? ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೂ ಇದೇ ಆಹಾರ ಪದಾರ್ಥ ಪೂರೈಕೆಯಾಗಿದೆಯಾ? ಎನ್ನುವುದರ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.