ಸರ್ಕಾರಿ ಶಾಲೆ ಮುಚ್ಚುತ್ತಿರುವುದಕ್ಕೆ ಗ್ರಾಮಸ್ಥರಿಂದ ತೀವ್ರ ವಿರೋಧ

KannadaprabhaNewsNetwork |  
Published : Feb 23, 2026, 03:00 AM IST
22ಬಿಎಸ್ವಿ02- ಬಸವನಬಾಗೇವಾಡಿ ತಾಲೂಕಿನ ನೇಗಿನಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚುತ್ತಿರುವದನ್ನು ವಿರೋಧಿಸಿ ಶನಿವಾರ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. | Kannada Prabha

ಸಾರಾಂಶ

ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆಯಡಿ ತಾಲೂಕಿನ ನೇಗಿನಾಳ ಗ್ರಾಮದ ಸರ್ಕಾರಿ ಶಾಲೆಯನ್ನು ಮುಚ್ಚುತ್ತಿರುವುದನ್ನು ವಿರೋಧಿಸಿ ಗ್ರಾಮಸ್ಥರು ಹಾಗೂ ಶಾಲೆ ವಿದ್ಯಾರ್ಥಿಗಳು ಎಐಡಿಎಸ್ಓ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆಯಡಿ ತಾಲೂಕಿನ ನೇಗಿನಾಳ ಗ್ರಾಮದ ಸರ್ಕಾರಿ ಶಾಲೆಯನ್ನು ಮುಚ್ಚುತ್ತಿರುವುದನ್ನು ವಿರೋಧಿಸಿ ಗ್ರಾಮಸ್ಥರು ಹಾಗೂ ಶಾಲೆ ವಿದ್ಯಾರ್ಥಿಗಳು ಎಐಡಿಎಸ್ಓ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಗ್ರಾಮದ ಶಾಲೆಯ ಮುಂದೆ ಶನಿವಾರ ಜಮಾವಣೆಗೊಂಡ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಮಾತನಾಡಿ, ರಾಜ್ಯದ ಗ್ರಾಮೀಣ ಭಾಗದ 40,000ಕ್ಕೂ ಅಧಿಕ ಶಾಲೆಗಳನ್ನು ಮುಚ್ಚಿ ಪಂಚಾಯಿತಿಗೊಂದರಂತೆ ಕೇವಲ 6,000 ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಸ್ಥಾಪಿಸಲು ಕರ್ನಾಟಕ ರಾಜ್ಯ ಸರ್ಕಾರ ಮುಂದಾಗಿದೆ. ಮೊದಲ ಹಂತದಲ್ಲೇ 900 ಮ್ಯಾಗ್ನೆಟ್ ಶಾಲೆ ಸ್ಥಾಪಿಸಲು ಆದೇಶಿಸಲಾಗಿದೆ. ಈ ಉದ್ದೇಶಕ್ಕಾಗಿ ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕಿನಿಂದ ₹2500 ಕೋಟಿ ಸಾಲ ಪಡೆಯಲಾಗಿದೆ. ಯಾಕೆ ಇವರಿಗೆ ನಾವು ಕಟ್ಟುತ್ತಿರುವ ತೆರಿಗೆ ದುಡ್ಡು ಸಾಕಾಗುತ್ತಿಲ್ಲವಾ ಎಂದು ಪ್ರಶ್ನಿಸಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2025 ಅಕ್ಟೋಬರ್ 15ರಂದು ಹೊರಡಿಸಿದ ಸುತ್ತೋಲೆಯಲ್ಲಿ ಕೆಪಿಎಸ್- ಮ್ಯಾಗ್ನೆಟ್ ಶಾಲೆಗಳೊಂದಿಗೆ 1 ರಿಂದ 5 ಕಿಮೀ ವ್ಯಾಪ್ತಿಯ ಒಳಗಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಸುಲಲಿತವಾಗಿ ಸಮ್ಮಿಳಿತಗೊಳಿಸುವುದು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸರ್ಕಾರದ ಈ ನಿರ್ದೇಶನಗಳು ಜಾರಿಯಾದಲ್ಲಿ ವಿಜಯಪುರದಲ್ಲಿ ಸಾವಿರಾರು ಶಾಲೆಗಳು ಮುಚ್ಚಲಿವೆ. ಅದರಲ್ಲಿ ನೇಗಿನಾಳ ಗ್ರಾಮದ ಶಾಲೆಯು ಕೂಡ ಒಂದಾಗಿದೆ ಎಂದು ಹೆಳಿದರು.

ಎಸ್‌ಡಿಎಂಸಿ ಅಧ್ಯಕ್ಷ ಮಹೆಬೂಬ ದುಂಡಸಿ ಮಾತನಾಡಿ, ನಮ್ಮೂರಿನಲ್ಲಿ ಕಲಿಯುವ ಮಕ್ಕಳು, ಬಡವರು, ಕೂಲಿ ಕಾರ್ಮಿಕರ ಮಕ್ಕಳು, ಇವರ ಪಾಲಕರು ದಿನ ಬೆಳಗಾದರೆ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಇವರು ಕೆಲಸದಿಂದ ಬರುವಷ್ಟರಲ್ಲಿ ಅವರ ಮಕ್ಕಳು ಅವರವರ ಮನೆಯಲ್ಲಿರುತ್ತಾರೆ. 5 ಕಿ.ಮೀ ದೂರ ಹೋಗಬೇಕಾದರೆ ಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಕರೆದುಕೊಂಡು ಹೋಗುವ ಪರಿಸ್ಥಿತಿ ಬರುತ್ತದೆ. ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಹೇಳುತ್ತಿದ್ದಾರೆ, ಆದರೆ ಅದನ್ನು ಶಾಲೆಯ ಎಸ್.ಡಿ.ಎಂ.ಸಿ ಸಮಿತಿಗೆ ಈ ಜವಾಬ್ದಾರಿ ಕೊಡುತ್ತಾರಂತೆ. ಈಗಾಗಲೇ ಹಳ್ಳಿಗಳಿಗೆ ಜನರ ಓಡಾಟಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ. ಇನ್ನು ಈ ಮಕ್ಕಳಿಗೆ ಬಸ್ ವ್ಯವಸ್ಥೆ ಹೇಗೆ ಮಾಡಲು ಸಾಧ್ಯ. ಯಾವುದೇ ಕಾರಣಕ್ಕೂ ನಮ್ಮೂರಿನ ಸರ್ಕಾರಿ ಶಾಲೆ ಮುಚ್ಚಲು ನಾವು ಬಿಡಲ್ಲ ಎಂದು ತಿಳಿಸಿದರು.

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಜಿಲ್ಲಾ ಜಂಟಿ ಕಾರ್ಯದರ್ಶಿ ಶಿವರಂಜನಿ ಎಸ್.ಬಿ, ಗ್ರಾಮದ 60 ಕ್ಕೂ ಹೆಚ್ಚು ಜನ ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆಯಡಿ ವಿಲೀನದ ಪರಿಣಾಮ ಸಮುದಾಯ ಮತ್ತು ಹಳ್ಳಿಗಳ ನಡುವಿನ ಶಾಲೆ ಊರು ದಾಟಿ ಪಕ್ಕದೂರಿಗೆ ಹೋಗುತ್ತದೆ. ಇದರಿಂದ ಬಡ ಮತ್ತು ಗ್ರಾಮೀಣ ಮಕ್ಕಳಿಗೆ ಹತ್ತಿರದ ನೆರೆಹೊರೆಯ ಶಾಲೆಗಳಿಗೆ ಪ್ರವೇಶ ಕಷ್ಟವಾಗುತ್ತದೆ. ಪ್ರಯಾಣದ ದೂರ, ಅಸುರಕ್ಷತೆ ಹೆಚ್ಚಳದಿಂದಾಗಿ, ವಿಶೇಷವಾಗಿ ಹೆಣ್ಣು ಮಕ್ಕಳಲ್ಲಿ ಶಾಲೆ ಬಿಡುವವರ ಸಂಖ್ಯೆ ಹೆಚ್ಚಳವಾಗುತ್ತದೆ. ಜೊತೆಗೆ ಸರ್ಕಾರಿ ಶಾಲೆಗಳಿಗಾಗಿ ಆದಾಯ ಸಂಗ್ರಹಿಸಲು ಶಾಲೆಗಳ ಗೋಡೆಯ ಮೇಲೆ ಜಾಹೀರಾತಿಗೆ ಅವಕಾಶ ನೀಡುವ ಸರ್ಕಾರದ ನಡೆ ಸಂಪೂರ್ಣ ಖಾಸಗೀಕರಣಕ್ಕೆ ನಾಂದಿ ಹಾಡಲಿದೆ. ಕಾವೇರಿ ರಜಪೂತ, ಜಿಲ್ಲಾ ಕಾರ್ಯದರ್ಶಿ, ಎಐಡಿಎಸ್ಓ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯವಸಾಯದಲ್ಲಿ ತಂತ್ರಜ್ಞಾನದ ಅಳವಡಿಕೆ ಅವಶ್ಯ: ಚೇತನಾ ಪಾಟೀಲ
ಸಿಎಂ ಜೊತೆ ಚರ್ಚಿಸಿ ವಿವಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ: ಸಚಿವ ಡಾ. ಎಂ.ಸಿ. ಸುಧಾಕರ್