ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಮೃತ ಕುಟುಂಬಗಳಿಗೆ ಗ್ರಾಮಸ್ಥರೇ ಆಸರೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.ಅವರು ಸಮೀಪದ ಎಮ್ಮೆಹಟ್ಟಿ ಗ್ರಾಮದಲ್ಲಿ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿ ಮಾತನಾಡಿದರು.ಈಗಾಗಲೇ ಸರ್ಕಾರ ಮೃತರಿಗೆ ತಲಾ 2 ಲಕ್ಷ ಘೋಷಣೆ ಮಾಡಿದೆ. ಮುಖ್ಯಮಂತ್ರಿಗಳು ದೆಹಲಿ ಪ್ರವಾಸದಲ್ಲಿದ್ದಾರೆ. ಅವರು ಬಂದ ನಂತರ ಅವರೊಂದಿಗೆ ಚರ್ಚಿಸಿ 5 ಲಕ್ಷ ವಿತರಣೆ ಮಾಡುವಂತೆ ಮನವಿ ಮಾಡಲಾಗುವುದು. ವೈಯಕ್ತಿಕವಾಗಿ ಹಣ ಸಹಾಯ ಮಾಡಲಾಗುವುದು ಎಂದರು.
ಗೀತಾ ಧನ ಸಹಾಯದ ಭರವಸೆ:ಗೀತಾ ಶಿವರಾಜ್ ಕುಮಾರ್ ಈ ಘಟನೆಯಿಂದಾಗಿ ಸಾಕಷ್ಟು ನೊಂದಿದ್ದು, ಮೃತರಿಗೆ ತಲಾ 1 ಲಕ್ಷ ರು. ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದರು.
ಹಣದಿಂದ ಆರ್ಥಿಕವಾಗಿ ಸಹಾಯ ಮಾಡಬಹುದೇ ಹೊರತು, ಮೃತರ ಜೀವವನ್ನು ವಾಪಾಸ್ಸು ನೀಡುವ ಶಕ್ತಿಯನ್ನು ಆ ಭಗವಂತ ಯಾರಿಗೂ ಕೊಟ್ಟಿಲ್ಲ. ಇನ್ನೊಂದು ವಾರದ ಬಳಿಕ ನನ್ನ ಕೈಲಾದ ಸಹಾಯವನ್ನು ಮಾಡುವುದಾಗಿ ಭರವಸೆ ನೀಡಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ. ಹನುಮಂತು, ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಉಮೇಶ್, ರಾಜ್ಯ ಕುರುಬರ ಸಂಘದ ನಿರ್ದೇಶಕ ಶರತ್ ಮರಿಯಪ್ಪ, ಮರಾಠ ಸಮಾಜದ ತಾಲ್ಲೂಕು ಅಧ್ಯಕ್ಷ ಲಾಯರ್ ಲೋಕೇಶ್, ಕೇಶವ, ಕೆ.ಆರ್.ಶ್ರೀಧರ್, ಬಿಜೆಪಿ ಮುಖಂಡ ರಂಗನಾಥ ಗ್ರಾಮಸ್ಥರಾದ ಕೃಷ್ಣೋಜಿರಾವ್, ಮುರಾರಿ ರಾವ್, ಮಲ್ಲೇಶ್ ರಾವ್ (ಕಗ್ಗಿ) ತಿಪ್ಪೇಶ್ ರಾವ್, ಪರಶುರಾಮ್, ಮಂಜುನಾಥ್, ಬೋಜರಾವ್ ಬಸವರಾಜ್, ಸಂಪತ್ ಕುಮಾರ್ ಪಿಂಗ್ಳೆ ಸೇರಿದಂತೆ ಇನ್ನಿತರರಿದ್ದರು.ಪೋಟೋ: ಎಚ್.ಎಚ್.ಆರ್ ಪಿ.2: ಹೊಳೆಹೊನ್ನೂರಿನ ಸಮೀಪದ ಎಮ್ಮೆಹಟ್ಟಿ ಗ್ರಾಮದಲ್ಲಿ ಅಪಘಾತಕ್ಕೀಡಾದ ಆದರ್ಶ ಕುಟುಂಬದವರಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಾಂತ್ವನ ಹೇಳಿದರು.ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ
ತಲಾ 5 ಲಕ್ಷ ಪರಿಹಾರ ನೀಡಿ: ಸಂಸದಶಿವಮೊಗ್ಗ: ಹಾವೇರಿಯಲ್ಲಿ ನಡೆದ ಭೀಕರ ಅಪಘಾತ ದುಃಖ ತಂದಿದೆ. ಮೃತ ಕುಟುಂಬಕ್ಕೆ ತಲಾ 5 ಲಕ್ಷ ರು. ಪರಿಹಾರ ನೀಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಒತ್ತಾಯಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರಾವತಿ ತಾಲೂಕು ಎಮ್ಮೆಹಟ್ಟಿ ಗ್ರಾಮದ ಒಂದೇ ಕುಟುಂಬದ 13 ಸದಸ್ಯರು ಸಾವನಪ್ಪಿದ್ದಾರೆ. ಮೃತ ಕುಟುಂಬಕ್ಕೆ ಸರ್ಕಾರ ಈಗಾಗಲೇ ಎರಡು ಲಕ್ಷ ಪರಿಹಾರ ಘೋಷಣೆ ಮಾಡಿದೆ. ಇನ್ನು ಹೆಚ್ಚಿನ ಪರಿಹಾರ ನೀಡಬೇಕು. ಕನಿಷ್ಠ ಒಬ್ಬರಿಗೆ 5 ಲಕ್ಷ ಪರಿಹಾರ ನೀಡಬೇಕು. ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಲು ಬಿಜೆಪಿ ಪಕ್ಷದಿಂದಲೂ ಪ್ರಯತ್ನ ಮಾಡುತ್ತೇವೆ ಎಂದರು.ಇನ್ನು, ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ನಡೆದ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಸಂಸದ ರಾಘವೇಂದ್ರ. ಸಹಕಾರಿ ಪ್ರಕೋಷ್ಟದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಅವರು ಸಾಕಷ್ಟು ವರ್ಷದಿಂದ ಅಧಿಕಾರಿದಲ್ಲಿದ್ದಾರೆ. ಅವರ ಪಕ್ಷವೇ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಹಾಗಾಗಿ ಅವರು ಸಹಕಾರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಎಲ್ಲಾ ರೀತಿಯ ಪ್ರಯತ್ನ ಹಾಗೂ ಶಕ್ತಿ ಮೀರಿ ನಮ್ಮ ಪಕ್ಷದ ಅಭ್ಯರ್ಥಿಗಳು ಪ್ರಯತ್ನ ಮಾಡಿದ್ದಾರೆ. ಬಿಜೆಪಿ ಹತ್ತಿರದಿಂದ ಸೋತಿದೆ ಅಷ್ಟೇ. ಬಿಜೆಪಿ ಅಭ್ಯರ್ಥಿಗಳು ತುಂಬಾ ಪೈಟ್ ನೀಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.