ಚಿರತೆ ಹಾವಳಿ ತಪ್ಪಿಸಲು ಗ್ರಾಮಸ್ಥರ ಒತ್ತಾಯ

KannadaprabhaNewsNetwork |  
Published : Jul 01, 2026, 03:15 AM IST
ಹೂವಿನಹಡಗಲಿ ತಾಲೂಕಿನ ಬೀರಬ್ಬಿ ಗ್ರಾಮದಲ್ಲಿ ಚಿರತೆ ಹಾವಳಿಯನ್ನು ತಪ್ಪಿಸಬೇಕೆಂದು ಒತ್ತಾಯಿಸಿ ಬೀರಬ್ಬಿ ನಾಗರಿಕ ವೇದಿಕೆಯ ಸಂಘಟನೆ ಗ್ರಾಪಂ ಕಾರ್ಯದರ್ಶಿ ಜಗದೀಶ ಇವರಿಗೆ ಮನವಿ ಪತ್ರ ಸಲ್ಲಿಸಿದರು.  | Kannada Prabha

ಸಾರಾಂಶ

ಎಲ್ಲಿಯೂ ಮಳೆ ಇಲ್ಲ. ಕಾಡಿನಲ್ಲಿಯೂ ಕಾಡು ಪ್ರಾಣಿಗಳಿಗೆ ಕುಡಿವ ನೀರಿಲ್ಲದೇ ಗ್ರಾಮಗಳ ಸುತ್ತಮುತ್ತ ಇರುವ ರೈತರ ನೀರಾವರಿ ಜಮೀನುಗಳಿಗೆ ನುಗ್ಗುತ್ತಿವೆ.

ಹೂವಿನಹಡಗಲಿ: ತುಂಬಿನಕೆರೆ ಕಾಯ್ದಿಟ್ಟ ಅರಣ್ಯ ಪ್ರದೇಶದಿಂದ ಚಿರತೆಗಳು ನೀರನ್ನು ಅರಸಿ ರೈತರ ಜಮೀನುಗಳ ಕಡೆಗೆ ಬರುತ್ತಿವೆ. ಇದರಿಂದ ರೈತರು ಆತಂಕದಲ್ಲಿದ್ದಾರೆ. ಕೂಡಲೇ ಚಿರತೆಗಳನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿ ಬೀರಬ್ಬಿ ನಾಗರಿಕ ವೇದಿಕೆ ಸಂಘಟನೆ ಗ್ರಾಪಂಗೆ ಮನವಿ ಸಲ್ಲಿಸಿದೆ.

ಈ ವೇಳೆ ವೇದಿಕೆ ಸದಸ್ಯ ಮಲ್ಲಿಕಾರ್ಜುನ ಮಾತನಾಡಿ, ಎಲ್ಲಿಯೂ ಮಳೆ ಇಲ್ಲ. ಕಾಡಿನಲ್ಲಿಯೂ ಕಾಡು ಪ್ರಾಣಿಗಳಿಗೆ ಕುಡಿವ ನೀರಿಲ್ಲದೇ ಗ್ರಾಮಗಳ ಸುತ್ತಮುತ್ತ ಇರುವ ರೈತರ ನೀರಾವರಿ ಜಮೀನುಗಳಿಗೆ ನುಗ್ಗುತ್ತಿವೆ. ಕಳೆದೊಂದು ವಾರದಿಂದ ಬೀರಬ್ಬಿ ಗ್ರಾಮದ ಪ್ರದೇಶದಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿವೆ. ರೈತರು ಜಮೀನುಗಳಲ್ಲಿ ಬಿತ್ತನೆ ಕಾರ್ಯ ನಡೆಸಿದ್ದು, ಮಳೆ ಬರುತ್ತಿಲ್ಲ. ಬಿತ್ತನೆ ಮಾಡಿರುವ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಬೆಳೆಗಳಿಗೆ ನೀರುಣಿಸಲು ರಾತ್ರಿ ವೇಳೆ ಹೋಗುತ್ತಾರೆ. ಅಲ್ಲಲ್ಲಿ ಚಿರತೆಗಳು ಕಾಣಿಸಿಕೊಂಡ ಪರಿಣಾಮ ರೈತರು ತಮ್ಮ ಜಮೀನುಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ರೈತರು, ಕೂಲಿ ಕಾರ್ಮಿಕರು ಜೀವ ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ. ಕೂಡಲೇ ಚಿರತೆಗಳನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.

ಅರಣ್ಯ ಇಲಾಖೆಯ ಅಧಿಕಾರಿಗಳು ಆಯ್ದ ಭಾಗಗಳಲ್ಲಿ ಸಿಮೆಂಟ್‌ನ ತೊಟ್ಟಿಯಲ್ಲಿ ಕಾಡು ಪ್ರಾಣಿಗಳಿಗೆ ಕುಡಿವ ನೀರಿನ ವ್ಯವಸ್ಥೆ ಮಾಡಿದರೆ ಚಿರತೆಗಳು ರೈತರ ಜಮೀನು ಕಡೆಗೆ ಬರುವುದಿಲ್ಲ. ಗ್ರಾಪಂ ಅಧಿಕಾರಿಗಳು ಈ ಮಾಹಿತಿಯನ್ನು ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ರೈತರಿಗೆ ಅನುಕೂಲ ಮಾಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬೀರಬ್ಬಿಯ ಚಿದಾನಂದ, ಅಶೋಕ, ಫಕ್ಕೀರೇಶ, ಗುರುಸ್ವಾಮಿ, ಹನುಮಂತ ಸೇರಿದಂತೆ ಇತರರು ಬೀರಬ್ಬಿ ಗ್ರಾಪಂ ಕಾರ್ಯದರ್ಶಿ ಜಗದೀಶ ಅವರಿಗೆ ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಾವಳಿ ರಂಗಾಯಣಕ್ಕೆ ಪೂರ್ಣಗೊಳ್ಳಲು ಬೇಕು ಇನ್ನೂ ₹ 4 ಕೋಟಿ
ರಂಗ ಸಮಾಜ ಶಿಫಾರಸಿನಂತೆ ‘ರಂಗಾಯಣ ಕಾರ್ಕಳ’ ಹೆಸರು ಬದಲಾವಣೆ: ಸ್ಪಷ್ಟನೆ