ಹೊಳೆಆಲೂರು: ವಿಬಿ ಜಿ ರಾಮ್ ಜಿ ಯೋಜನೆಯು ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿಗೆ ಬಲ ನೀಡುವ ಮಹತ್ವದ ಹೆಜ್ಜೆಯಾಗಿದೆ. ಮೂಲ ಸೌಕರ್ಯ, ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಡಿಜಿಟಲ್ ಮೂಲಕ ಗ್ರಾಮಗಳನ್ನು ಸ್ವಾವಲಂಬಿ ಮತ್ತು ಸಶಕ್ತವಾಗಿಸುವುದು ಇದರ ಉದ್ದೇಶವಾಗಿದ್ದು, ಕಾಂಗ್ರೆಸ್ ಬೇರೆ ರೀತಿಯೇ ಅಪಪ್ರಚಾರ ಮಾಡುತ್ತಿದೆ ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.
ಯಾರು ದುಡಿಯಲು ಹೋಗುತ್ತಾರೆ, ಅವರಿಗೆ ನೇರವಾಗಿ ಹಣ ಹೋಗುತ್ತದೆ. ಜನಪ್ರಿಯ ಯೋಜನೆಗಿಂತ ಜನಪರ ಯೋಜನೆಗಳು ಅನುಕೂಲ, ಯೋಜನೆಯಿಂದ ಪ್ರವಾಹ ಸಂದರ್ಭದಲ್ಲಿ ಕಾಮಗಾರಿ ಆರಂಭ ಮಾಡಬಹುದು. 100ರಿಂದ 125 ದಿನ ಮಾಡಿದೆ. 2047ರ ವೇಳೆಗೆ ವಿಕಸಿತ ಭಾರತದ ದೂರದೃಷ್ಟಿಕೋನವನ್ನು ಇಟ್ಟುಕೊಂಡು ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ ಮಾಡುವುದಾಗಿದೆ. ಬಯೋಮೆಟ್ರಿಕ್ ದೃಢೀಕರಣ, ಡಿಜಿಟಲ್ ಮೇಲ್ವಿಚಾರಣೆ, ಸಾರ್ವಜನಿಕವಾಗಿ ಪಾರದರ್ಶಕತೆ ಮತ್ತು ಕಠಿಣವಾದ ಲೆಕ್ಕಪರಿಶೋಧನೆ ಇದ್ದು, ಫಲಾನುಭವಿಗಳು ಹೆಚ್ಚಿನ ಮಟ್ಟದಲ್ಲಿ ಕೆಲಸವನ್ನು ಪಡೆಯುತ್ತಾರೆ. ಇದರಿಂದ ಅನುಕೂಲವಾಗುತ್ತದೆ ಹೊರತು ಯಾರಿಗೂ ಅನ್ಯಾಯ ಆಗಲ್ಲ. ಇದನ್ನು ಪ್ರತಿಯೊಬ್ಬರೂ ಎಲ್ಲರಿಗೂ ಮನ ಮುಟ್ಟುವಂತೆ ಹೇಳಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿ, ಮೊದಲಿದ್ದ ಯೋಜನೆಯಲ್ಲಿ ಕೊಡಲಿ ಇಲ್ಲದೆ ಕಂಟಿ ಕಡೆದು, ಗುದ್ದಲಿ ಇಲ್ಲದೆ ತಗ್ಗು ತೋರಿಸುವುದು, ಕೆಲವು ಕಡೆ ಗಂಡುಮಕ್ಕಳು ಸೀರೆ ಉಟ್ಟು ಯೋಜನೆಯ ಫಲಾನುಭವಿಗಳು ಆಗಿದ್ದಾರೆ. ಆದ್ದರಿಂದ ಈ ಯೋಜನೆಯಲ್ಲಿ ಪರಿಶೀಲನೆ ಇರುವುದರಿಂದ ಕೇಂದ್ರ ಸರ್ಕಾರ ಯೋಜಿತ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ಜಾರಿಗೆ ತಂದಿದೆ. ಇದರಲ್ಲಿ ರೈತರಿಗೆ ತುಂಬಾ ಅನುಕೂಲ, ಬಿತ್ತನೆ ಮತ್ತು ಕೊಯ್ಲು ಸಂದರ್ಭದಲ್ಲಿ ರಾಜ್ಯಗಳು ನೀಡುವ ಸರಾಸರಿ ಕೆಲಸವನ್ನು 60 ದಿನಗಳವರೆಗೆ ಸ್ಥಗಿತಗೊಳಿಸಬಹುದು ಎಂದರು.ಈ ವೇಳೆ ಹೊಳೆಆಲೂರು ಮಂಡಳ ಅಧ್ಯಕ್ಷ ಸೋಮು ಚರೀದ, ಗ್ರಾಪಂ ಮಾಜಿ ಅಧ್ಯಕ್ಷೆ ಚಂದವ್ವ ಪೂಜಾರ, ಶ್ರೀಪತಿ ಉಡುಪಿ, ಮಹಾಂತಗೌಡ ಪಾಟೀಲ, ಶಂಭುಗೌಡ ಪಾಟೀಲ, ಈರಪ್ಪ ತಾಳಿ, ಪಾಂಡು ಪತ್ತಾರ, ರಾಮನಗೌಡ ಪಾಟೀಲ, ಮುತ್ತಣ್ಣ ಜಂಗಣ್ಣವರ, ಶಶಿಧರ ಪಾಟೀಲ, ಮಂಡಳ ಪ್ರದಾನ ಕಾರ್ಯದರ್ಶಿ ಸುರೇಶ ಗಾಣಿಗೇರ, ಕೇದಾರಗೌಡ ಭರಮಗೌಡ್ರ, ಅಶೋಕ ಹೆಬ್ಬಳ್ಳಿ, ಶಿವಕುಮಾರ ನೀಲಗುಂದ, ಉಮೇಶ ಪೂಜಾರ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.