ಕನ್ನಡಪ್ರಭ ವಾರ್ತೆ ನಾಪೋಕ್ಲು
ಅಧಿಕಾರಿಗಳು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಜವಾಬ್ದಾರಿಯನ್ನು ನಿರ್ವಹಿಸಿದಾಗ ಗ್ರಾಮಗಳು ಅಭಿವೃದ್ಧಿಯಾಗಲು ಸಾಧ್ಯ ಎಂದು ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಕೆ. ಮೊಣ್ಣಪ್ಪ ಹೇಳಿದರು.ದಕ್ಷ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ನಿರ್ದೇಶಕ ಶೇಖರ್ ಅವರನ್ನು ಮಂಗಳವಾರ ಹೊದ್ದೂರು ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳು, ಸದಸ್ಯರು ಮತ್ತು ಕಾನ್ಸೀರಾಂಜೀ ನಗರದ ಪಾಲೆಮಾಡುವಿನ ನಿವಾಸಿಗಳ ಪರವಾಗಿ ಸನ್ಮಾನಿಸಿ ಮಾತನಾಡಿದರು.
ಸರ್ಕಾರಿ ಹುದ್ದೆಯಲ್ಲಿರುವ ಶೇ.75ರಷ್ಟು ಅಧಿಕಾರಿಗಳು ನಾಮಕಾವಸ್ಥೆಗೆ ಕೆಲಸ ಮಾಡುತ್ತಾ ದರ್ಪ ಮತ್ತು ಬೇಜವಾಬ್ದಾರಿತನದಿಂದ ಕೂಡಿದ್ದು, ಇಂತಹ ಅಧಿಕಾರಿಗಳನ್ನು ಸಮಾಜವು ಸೂಕ್ಷ್ಮವಾಗಿ ನೋಡುತ್ತಿದೆ ಎಂಬ ಅರಿವು ಮೂಡಿಸಬೇಕು. ಇವರಲ್ಲಿ ಶೇಖರ್ ಅವರಂಥ ಪ್ರಾಮಾಣಿಕ ಅಧಿಕಾರಿಗಳಿದ್ದಾರೆ. ಇಂತಹ ನಿಷ್ಠಾವಂತ ಅಧಿಕಾರಿಗಳನ್ನು ಸನ್ಮಾನಿಸಿ, ಅಭಿನಂದನೆ ಸಲ್ಲಿಸುವ ಮೂಲಕ ಅಧಿಕಾರಿಗಳ ಜವಾಬ್ದಾರಿ ಮತ್ತು ಕರ್ತವ್ಯವನ್ನು ಹೆಚ್ಚಿಸುವ ಅಗತ್ಯವಿದೆ ಎಂದರು.ಕಾನ್ಸಿರಾಂಜೀ ನಗರ ಪಾಲೆಮಾಡುವಿನಂತಹ ಕುಗ್ರಾಮಗಳ ಅಭಿವೃದ್ಧಿಗೆ ಮತ್ತು ಮೂಲ ಸೌಕರ್ಯಕ್ಕೆ ಶೇಖರ್ ಅವರ ದಕ್ಷತೆಯ ಕರ್ತವ್ಯ ನಿಷ್ಠೆ ಪೂರಕವಾಗಿದೆ. ಇವರಂತ ಅಧಿಕಾರಿಗಳು ಭವಿಷ್ಯದ ಯುವ ಅಧಿಕಾರಿಗಳಿಗೆ ಸ್ಫೂರ್ತಿಯಾಗುತ್ತಾರೆ. ಇಂತಹ ಅಧಿಕಾರಿಗಳು ಜಿಲ್ಲೆಗೆ ಅಗತ್ಯವಿದೆ ಎಂದು ಆಶಯ ವ್ಯಕ್ತಪಡಿಸಿದರು.
ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎ. ಹಂಸ ಮಾತನಾಡಿ, ಹೊದ್ದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಲ್ಲಿ ಮತ್ತು ಪಾಲೆಮಾಡುವಿನ ವಿಷಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಮೊದಲ ಸರ್ಕಾರಿ ಬಸ್ಸು, ಹಕ್ಕು ಪತ್ರವನ್ನು ನೀಡಿರುವುದು, ಅದೇ ರೀತಿ ನೂತನವಾದ ಕಾಂಕ್ರೀಟ್ ರಸ್ತೆಗಳು ಹೀಗೆ ಅಭಿವೃದ್ಧಿ ಕಾರ್ಯಗಳಲ್ಲಿ ಶೇಖರ್ ಅವರು ಕರ್ತವ್ಯ ನಿಷ್ಠೆ ಮೆರೆದಿದ್ದಾರೆ ಎಂದು ಹೇಳಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ನಿರ್ದೇಶಕ ಶೇಖರ್, ಅಧಿಕಾರಿಗಳು ಉತ್ತಮ ಕರ್ತವ್ಯಗಳನ್ನು ನಿರ್ವಹಿಸಲು ಶಾಸಕ ಡಾ. ಮಂಥರ್ ಗೌಡ ಅವರು ಮುಕ್ತವಾದ ಸ್ವಾತಂತ್ರ್ಯವನ್ನು ನೀಡಿದ್ದು, ಅವರಿಗೆ ಧನ್ಯವಾದ ತಿಳಿಸುತ್ತೇನೆ. ಹೊದ್ದೂರು ಗ್ರಾಮ ಪಂಚಾಯಿತಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ವಿನೂತನವಾಗಿ ಅನುಷ್ಠಾನಕ್ಕೆ ತರುತ್ತದೆ. ಇದೇ ರೀತಿ ಜಿಲ್ಲೆಯ ಎಲ್ಲ ಪಂಚಾಯಿತಿಗಳು ಬೆಳೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಬಿ. ಹಮೀದ್, ಕುಸುಮಾವತಿ ಆನಂದ್, ನರೇಗಾ ಯೋಜನೆಯ ತಾಲೂಕು ಸಹ ನಿರ್ದೇಶಕ ಹೇಮಂತ್, ಹೊದ್ದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಎ. ಅಬ್ದುಲ್ಲಾ, ಇಲಾಖೆ ಸಿಬ್ಬಂದಿ ವರ್ಗ, ಕಾನ್ಸಿರಾಂಜಿ ನಗರ ಪಾಲೆಮಾಡುವಿನ ನಿವಾಸಿಗಳು ಹಾಜರಿದ್ದರು.