ತೆಪ್ಪೋತ್ಸವ ಸಮಿತಿ ಸಭೆಯಲ್ಲಿ ವಿನಃ ಕಾರಣ ನನ್ನ ಹೆಸರನ್ನು ಎಳೆದು ತಂದಿದ್ದಾರೆ

KannadaprabhaNewsNetwork | Published : Dec 10, 2024 12:32 AM

ಸಾರಾಂಶ

ತೀರ್ಥಹಳ್ಳಿ: ನನ್ನ ಶಾಸಕತ್ವದ ಅವಧಿಯಲ್ಲಿ ನಡೆದಿದ್ದ ಪಟ್ಟಣದ ಶ್ರೀರಾಮೇಶ್ವರ ದೇವಸ್ಥಾನ ಜೀರ್ಣೊದ್ಧಾರ ಸಮಿತಿಯ ಹಣಕಾಸಿನ ವ್ಯವಹಾರದ ವಿವರವನ್ನು ಸಾರ್ವಜನಿಕವಾಗಿ ನೀಡುವ ಮುನ್ನ ಸೌಜನ್ಯಕ್ಕೂ ನನ್ನ ಗಮನಕ್ಕೆ ತಾರದೇ ಶನಿವಾರ ನಡೆದ ತೆಪ್ಪೋತ್ಸವ ಸಮಿತಿ ಸಭೆಯಲ್ಲಿ ನನ್ನ ಹೆಸರನ್ನು ಎಳೆದು ತಂದಿರುವ ಸಮಿತಿಯ ಸಂಚಾಲಕರಾಗಿದ್ದ ಸೊಪ್ಪುಗುಡ್ಡೆ ರಾಘವೇಂದ್ರ ಹೇಳಿಕೆ ಖಂಡನೀಯವಾಗಿದೆ ಎಂದು ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಹೇಳಿದರು.

ತೀರ್ಥಹಳ್ಳಿ: ನನ್ನ ಶಾಸಕತ್ವದ ಅವಧಿಯಲ್ಲಿ ನಡೆದಿದ್ದ ಪಟ್ಟಣದ ಶ್ರೀರಾಮೇಶ್ವರ ದೇವಸ್ಥಾನ ಜೀರ್ಣೊದ್ಧಾರ ಸಮಿತಿಯ ಹಣಕಾಸಿನ ವ್ಯವಹಾರದ ವಿವರವನ್ನು ಸಾರ್ವಜನಿಕವಾಗಿ ನೀಡುವ ಮುನ್ನ ಸೌಜನ್ಯಕ್ಕೂ ನನ್ನ ಗಮನಕ್ಕೆ ತಾರದೇ ಶನಿವಾರ ನಡೆದ ತೆಪ್ಪೋತ್ಸವ ಸಮಿತಿ ಸಭೆಯಲ್ಲಿ ನನ್ನ ಹೆಸರನ್ನು ಎಳೆದು ತಂದಿರುವ ಸಮಿತಿಯ ಸಂಚಾಲಕರಾಗಿದ್ದ ಸೊಪ್ಪುಗುಡ್ಡೆ ರಾಘವೇಂದ್ರ ಹೇಳಿಕೆ ಖಂಡನೀಯವಾಗಿದೆ ಎಂದು ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಹೇಳಿದರು.ಸೋಮವಾರ ಇಲ್ಲಿನ ಗಾಂಧಿಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದರಿ ದೇವಸ್ಥಾನದ ಜೀರ್ಣೊದ್ಧಾರ ಕಾರ್ಯದ ಹಣಕಾಸಿನ ವ್ಯವಹಾರವನ್ನು ಪೂರ್ಣವಾಗಿ ಅಂದಿನ ತಹಸೀಲ್ದಾರ್ ಮತ್ತು ಸಮಿತಿಯ ಸಂಚಾಲಕರಾಗಿದ್ದ ಸೊಪ್ಪುಗುಡ್ಡೆ ರಾಘವೇಂದ್ರರೇ ಜಂಟಿಯಾಗಿ ನಿರ್ವಹಿಸಿದ್ದಾರೆ. ವೈಯಕ್ತಿಕವಾಗಿ ನಾನು ಒಂದು ಲಕ್ಷ ರು. ದೇಣಿಗೆ ನೀಡಿದ್ದೇನೆ. ದಾನಿಗಳಿಂದ ಹಣವನ್ನು ಕೊಡಿಸಿದ್ದನ್ನು ಹೊರತು ಪಡಿಸಿ ಒಂದು ರು. ಕೂಡಾ ನಾನು ಸಂಗ್ರಹ ಮಾಡಿರಲಿಲ್ಲ. ಸಾರ್ವಜನಿಕವಾಗಿ ಆರೋಪ ಬಂದ ನಂತರ ಸಾರ್ವಜನಿಕ ಸಭೆಯಲ್ಲಿ ನನ್ನನ್ನು ಕೇಳಿ ಎಂದು ಹೇಳಿರುವುದು ರಾಘವೇಂದ್ರರ ಬೇಜವಾಬ್ದಾರಿ ಹೇಳಿಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸೊಪ್ಪುಗುಡ್ಡೆ ರಾಘವೇಂದ್ರ ಬಿಜೆಪಿ ಗೆ ಸೇರಿದವರಾಗಿದ್ದರೂ, ಪಕ್ಷಭೇದ ಮಾಡದೇ ಅವರನ್ನು ಸಂಚಾಲಕರನ್ನಾಗಿ ನೇಮಕ ಮಾಡಿದ್ದೇನೆ. ಎಷ್ಟೇ ಪ್ರಾಮಾಣಿಕ ವ್ಯಕ್ತಿಯಾಗಿದ್ದರೂ ಬೇರೆಯವರನ್ನು ಆಧರಿಸುವ ಇಂತಹಾ ಒಂದು ಉದಾಹರಣೆ ಬಿಜೆಪಿಗರಿಗೆ ಇದೆಯೇ ಎಂದೂ ಪ್ರಶ್ನಿಸಿ ನಾನು ಅಧಿಕಾರದಲ್ಲಿ ಇಲ್ಲ ಎಂಬ ಕಾರಣಕ್ಕೆ ಸಮಿತಿಯವರು ಈ ವರೆಗೆ ನನ್ನನ್ನು ಯಾವುದೇ ವಿಚಾರಕ್ಕೂ ಸಂಪರ್ಕಿಸದೇ ತಾವೇ ನಿರ್ವಹಣೆ ಮಾಡಿದ್ದಾರೆ ಎಂದರು.ಜೀರ್ಣೊದ್ಧಾರ ಸಮಿತಿಯ ಹಣಕಾಸಿನ ವಿವರವನ್ನು ನೀಡುವ ಮುನ್ನ ಸೌಜನ್ಯಕ್ಕೂ ವಿಚಾರವನ್ನು ನನ್ನ ಗಮನಕ್ಕೆ ತಂದಿರಲಿಲ್ಲಾ. ರಾಮೇಶ್ವರ ದೇವರ ಮುಖವಾಡದ ಸಲುವಾಗಿ ದಾನಿಯೊಬ್ಬರು ನೀಡಿದ್ದ ದೇಣಿಗೆ ಹಣವನ್ನು ಜೀರ್ಣೊದ್ಧಾರ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂಬ ಆರೋಪದ ಮೇಲೆ ಮುಜರಾಯಿ ಇಲಾಖೆಯಿಂದ ನೋಟಿಸ್ ಬಂದಿರುವ ಬಗ್ಗೆಯೂ ಉತ್ತರ ನೀಡಬೇಕಾದ ಹೊಣೆ ಆ ಸಮಿತಿಗೆ ಸೇರಿದೆ. ಈ ಬಗ್ಗೆ ನನ್ನ ಪಾತ್ರದ ಕುರಿತು ಸಮಿತಿಯವರು ಸಾರ್ವಜನಿಕವಾಗಿ ವಿಚಾರವನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.ತಾಲೂಕಿನ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಿಗೆ ಮಹತ್ತರ ಕೊಡುಗೆ ನೀಡಿದ ಮಹನೀಯರುಗಳ ಮೇಲೆ ರಾಜಕೀಯ ಕಾರಣಕ್ಕೆ ಒಬ್ಬರನ್ನೂ ಬಿಡದಂತೆ ಕೇಸು ದಾಖಲಿಸಿರುವ ಆರಗ ಜ್ಞಾನೇಂದ್ರ, ತಮ್ಮ ಪಕ್ಷದವರ ವಿಚಾರದಲ್ಲಿ ಆರೋಪ ಬಂದಾಗ ಮಾತ್ರ ರಾಜಿ ಸಂಧಾನದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ, ಪಪಂ ಅಧ್ಯಕ್ಷ ರಹಮತ್‍ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯರಾದ ಬಿ.ಗಣಪತಿ, ರತ್ನಾಕರ ಶೆಟ್ಟಿ, ವಿಲಿಯಂ ಮಾರ್ಟಿಸ್ ಇದ್ದರು.

Share this article