ಶಿಷ್ಟಾಚಾರ ಉಲ್ಲಂಘನೆ: ಮಿಥುನ್‌ ಪಾಟೀಲ್‌ ಸೇರಿ 8 ಜನರ ವಿರುದ್ಧ ದೂರು

KannadaprabhaNewsNetwork |  
Published : Nov 22, 2026, 02:00 AM IST
ಲೋಕಾಯುಕ್ತದಲ್ಲಿ ದಾಖಲಾದ ದೂರಿನ ಪ್ರತಿ.. | Kannada Prabha

ಸಾರಾಂಶ

ರೋಣ ಕ್ಷೇತ್ರದ ಶಾಸಕ, ಸ್ಪೀಕರ್‌ ಜಿ.ಎಸ್‌.ಪಾಟೀಲ್‌ ಅವರು ನೆರವೇರಿಸಬೇಕಿದ್ದ ಸರ್ಕಾರಿ ಕಾರ್ಯಕ್ರಮದ ಭೂಮಿಪೂಜೆ ನೆರವೇರಿಸಿದ ಪುತ್ರ ಮಿಥುನ್‌ ಪಾಟೀಲ್‌ ಸೇರಿದಂತೆ 8 ಜನರ ವಿರುದ್ಧ ಲೋಕಾಯುಕ್ತಕ್ಕೆ ಶಿಷ್ಟಾಚಾರ ಉಲ್ಲಂಘನೆಯ ದೂರು ಸಲ್ಲಿಕೆಯಾಗಿದೆ.

-ಅಪ್ಪನ ಬದಲು ಪುತ್ರನಿಂದ ಭೂಮಿ ಪೂಜೆ

-ರೋಣ ಕ್ಷೇತ್ರದಲ್ಲಿ ಪುತ್ರನ ದರ್ಬಾರ್

-ಲೋಕಾಯುಕ್ತದ ಕದ ತಟ್ಟಿದ ಹೋರಾಟಗಾರರು

ಕನ್ನಡಪ್ರಭ ವಾರ್ತೆ ಗದಗ

ರೋಣ ಕ್ಷೇತ್ರದ ಶಾಸಕ, ಸ್ಪೀಕರ್‌ ಜಿ.ಎಸ್‌.ಪಾಟೀಲ್‌ ಅವರು ನೆರವೇರಿಸಬೇಕಿದ್ದ ಸರ್ಕಾರಿ ಕಾರ್ಯಕ್ರಮದ ಭೂಮಿಪೂಜೆ ನೆರವೇರಿಸಿದ ಪುತ್ರ ಮಿಥುನ್‌ ಪಾಟೀಲ್‌ ಸೇರಿದಂತೆ 8 ಜನರ ವಿರುದ್ಧ ಲೋಕಾಯುಕ್ತಕ್ಕೆ ಶಿಷ್ಟಾಚಾರ ಉಲ್ಲಂಘನೆಯ ದೂರು ಸಲ್ಲಿಕೆಯಾಗಿದೆ.

ಶಿಷ್ಟಾಚಾರ ಉಲ್ಲಂಘನೆಯ ಆರೋಪದ ಕುರಿತು ಸರ್ಕಾರದ ಸಚಿವರು, ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಪ್ರಯೋಜನ ಆಗದೇ ಇರುವಾಗ 8 ಜನರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸುವ ಮೂಲಕ ಆಡಳಿತದ ಹೊಣೆಗಾರಿಕೆಯನ್ನು ಪ್ರಶ್ನಿಸಲಾಗಿದೆ.

ಶಿಷ್ಟಾಚಾರವೇ ಮೂಲೆಗುಂಪು:

ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ 2026ರ ಜು. 24ರಂದು ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ₹20 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿತ್ತು. ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಮೂಲಕ ಅನುಷ್ಠಾನಗೊಳ್ಳುತ್ತಿದ್ದ ಈ ಕಾಮಗಾರಿಗೆ ಸ್ಥಳೀಯ ಶಾಸಕರು ಆಗಿರುವ ಸ್ಪೀಕರ್‌ ಜಿ.ಎಸ್‌.ಪಾಟೀಲ್‌ ಅವರು ಭೂಮಿಪೂಜೆ ನೆರವೇರಬೇಕಿತ್ತು. ಆದರೆ, ಶಾಸಕರ ಬದಲಿಗೆ ಅವರ ಪುತ್ರ ಮಿಥುನ್‌ ಜಿ.ಪಾಟೀಲ್‌ ಭೂಮಿಪೂಜೆ ನೆರವೇರಿಸಿರುವುದು ಶಿಷ್ಟಾಚಾರ ಉಲ್ಲಂಘನೆಯ ಆರೋಪಕ್ಕೆ ಕಾರಣವಾಗಿದೆ.

ಸರ್ಕಾರಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳಿಗೆ ನೀಡಬೇಕಾದ ಅಧಿಕೃತ ಆದ್ಯತೆ ಮತ್ತು ಶಿಷ್ಟಾಚಾರವನ್ನು ಬದಿಗಿಟ್ಟು ಶಾಸಕರ ಪುತ್ರನಿಂದ ಭೂಮಿಪೂಜೆ ನೆರವೇರಿಸಲು ಸಂಬಂಧಪಟ್ಟ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ ಎಂಬುದು ಹೋರಾಟಗಾರರ ಆಕ್ಷೇಪ. ಸರ್ಕಾರಿ ಕಾಮಗಾರಿಯ ಕಾರ್ಯಕ್ರಮದಲ್ಲಿ ವ್ಯಕ್ತಿಗತ ಅಥವಾ ರಾಜಕೀಯ ಪ್ರಭಾವಕ್ಕೆ ಅವಕಾಶ ನೀಡಲಾಗಿದೆಯೇ ಎಂಬ ಪ್ರಶ್ನೆಯೂ ಈ ಘಟನೆಯಿಂದ ಉದ್ಭವಿಸಿದೆ.

ದೂರು ಸಲ್ಲಿಸಿದರೂ ಸ್ಪಂದನೆಯಿಲ್ಲ:

ಈ ಘಟನೆ ಕುರಿತು ಸಾಮಾಜಿಕ ಹಾಗೂ ದಲಿತ ಹೋರಾಟಗಾರರು 2026 ರ ಆ. 1 ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಈಶ್ವರ ಖಂಡ್ರೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಗದಗ ಜಿಲ್ಲಾಧಿಕಾರಿ ಶ್ರೀಧರ ಎನ್. ಅವರಿಗೆ ಲಿಖಿತ ದೂರು ಸಲ್ಲಿಸಿ, ಶಿಷ್ಟಾಚಾರ ಉಲ್ಲಂಘನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಆದರೆ, ದೂರು ಸಲ್ಲಿಸಿ ಹಲವು ತಿಂಗಳುಗಳು ಕಳೆದರೂ ತನಿಖೆಯ ಪ್ರಗತಿ, ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮ ಅಥವಾ ದೂರಿನ ವಿಲೇವಾರಿ ಕುರಿತು ಯಾವುದೇ ಮಾಹಿತಿ ದೊರೆತಿಲ್ಲ ಎಂಬುದು ದೂರುದಾರರ ಅಳಲು.

ಲೋಕಾಯುಕ್ತರಿಗೆ ದೂರು:

ಸರ್ಕಾರದ ಮಟ್ಟದಲ್ಲಿ ನ್ಯಾಯ ಸಿಗದ ಹಿನ್ನೆಲೆ ಹೋರಾಟಗಾರರು ಈಗ ಲೋಕಾಯುಕ್ತದ ಮೊರೆ ಹೋಗಿದ್ದಾರೆ. ಸಚಿವ ಈಶ್ವರ ಖಂಡ್ರೆ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಶ್ರೀಧರ ಎನ್. ಸೇರಿದಂತೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ಕಿರಿಯ ಅಭಿಯಂತರರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಸೇರಿ ಒಟ್ಟು 8 ಜನರ ವಿರುದ್ಧ ದೂರು ಸಲ್ಲಿಸಲಾಗಿದೆ.ವಿಶ್ವಾಸಾರ್ಹತೆಯ ಪ್ರಶ್ನೆ

ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲನೆ ಕೇವಲ ಔಪಚಾರಿಕತೆಯಲ್ಲ, ಅದು ಅಧಿಕಾರದ ಮಿತಿ, ಆಡಳಿತದ ಗೌರವ ಮತ್ತು ಸಾರ್ವಜನಿಕ ಹೊಣೆಗಾರಿಕೆಯ ಪ್ರತೀಕ. ಶಾಸಕರು ನೆರವೇರಿಸಬೇಕಿದ್ದ ಕಾರ್ಯಕ್ರಮವನ್ನು ಅವರ ಪುತ್ರನಿಂದ ನೆರವೇರಿಸಿದ ಆರೋಪದ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಂಶ ಹೊರತರಬೇಕು. ದೂರುಗಳಿಗೆ ಉತ್ತರ ನೀಡದಿರುವುದೂ ಆಡಳಿತದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಹಿತ್ಯ ಸಮ್ಮೇಳನಗಳು ಚಿಂತನಾ ವೇದಿಕೆಗಳಾಗಲಿ ಡಾ. ಶರಣಬಸಪ್ಪ ಕೋಲ್ಕಾರ್
ಕೊಪ್ಪಳ ಜಿಲ್ಲಾ ೧೫ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ