ರಾಗಿಗುಡ್ಡ ಗಲಾಟೆ ಹಿಂದೆ ಉಗ್ರವಾದ ಕರಿನೆರಳು: ಸಂಸದ

KannadaprabhaNewsNetwork |  
Published : Oct 13, 2023, 12:15 AM ISTUpdated : Oct 13, 2023, 12:16 AM IST

ಸಾರಾಂಶ

ಮಥುರ ಪ್ಯಾರಡೇಸ್‌ ಎದುರು ಬೃಹತ್ ಪ್ರತಿಭಟನಾ ಸಭೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ ರಾಗಿಗುಡ್ಡದಲ್ಲಿ ಗಲಾಟೆ ಪ್ರಕರಣ ಸಣ್ಣದಲ್ಲ. ಈ ಘಟನೆಗೆ ಕಾರಣರಾದವರ ದೂರಾಲೋಚನೆ ದೊಡ್ಡದಿದೆ. ಅದು ಉಗ್ರವಾದದ ಕರಿನೆರಳನ್ನು ಬಿಂಬಿಸುತ್ತಾ ಇದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಧೋರಣೆ ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಗುರುವಾರ ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಮಥುರ ಪ್ಯಾರಡೇಸ್‌ ಎದುರು ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿ, ರಾಗಿಗುಡ್ಡದಲ್ಲಿ ನಡೆದ ಘಟನೆ ಸಣ್ಣದು ಎಂದು ಗೃಹ ಸಚಿವರು ಹೇಳಿದ್ದಾರೆ. ಕಾಂಗ್ರೆಸ್‌ನವರಿಗೆ ಒಂದೇ ಧರ್ಮದ ಸಹಕಾರದೊಂದಿಗೆ ಅಧಿಕಾರಕ್ಕೆ ಬಂದಿದ್ದೇವೆ ಎಂಬ ಪಿತ್ತ ನೆತ್ತಿಗೇರಿದ್ದರೆ, ಜನ ಮುಂದೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹರಿಹಾಯ್ದರು. ಹಲ್ಕಟ್‌ಗಿರಿ ತೋರಿದ್ದಾರೆ: ಅಬ್ದುಲ್ ಕಲಾಂ ಅವರಂತಹ ಅನೇಕ ಮುಸಲ್ಮಾನ ನಾಯಕರನ್ನು ಗೌರವಿಸಿದ ದೇಶ ಇದು. ಆದರೆ. ವಿದ್ಯೆ ಕಲಿಸಿದ ಶಿಕ್ಷಕಿಯನ್ನು ಅವರ ಶಿಷ್ಯರೇ ತಳಿಸುವ ಮಟ್ಟಕ್ಕೆ ಹಲ್ಕಟ್‍ಗಿರಿ ತೋರಿಸಿದ್ದಾರಲ್ಲ. ತಾಯಂದಿರ ಮೇಲೆ ಕೈ ಮಾಡುವ ಈ ದುಷ್ಟತನವನ್ನು ಯಾವ ಧರ್ಮ ಹೇಳಿಕೊಟ್ಟಿದೆ? ಮುಂದೆ ಕಾಂಗ್ರೆಸ್‍ನ ಮಕ್ಕಳು, ಮರಿಮಕ್ಕಳೇ ನಿಮ್ಮ ಈ ತುಷ್ಟೀಕರಣ ನೀತಿಯನ್ನು ಕ್ಷಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಬಿಜೆಪಿ ಎಂದೂ ಮುಸ್ಲಿಂ ವಿರೋಧಿಯಲ್ಲ. ತ್ರಿಬಲ್ ತಲಾಖ್ ರದ್ದುಪಡಿಸಿ ಮುಸ್ಲಿಂ ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಿದ ಪಕ್ಷ ನಮ್ಮದು. ಉಚಿತ ಸೈಕಲ್ ಭಾಗ್ಯಲಕ್ಷ್ಮಿ ಮತ್ತು ಕಿಸಾನ್ ಸಮ್ಮಾನ್ ಯೋಜನೆ ಎಲ್ಲವನ್ನೂ ಮುಸ್ಲಿಂ ಬಾಂಧವರು ಪಡೆದಿದ್ದಾರೆ. ಆದರೆ, ಇಲ್ಲೆ ಬೆಳೆದು, ಇಲ್ಲಿಯ ಅನ್ನ ತಿಂದು ಹೆತ್ತ ತಾಯಿಯನ್ನು ಹೊಡೆಯುವ ಷಡ್ಯಂತ್ರ ಮಾಡುತ್ತಿದ್ದಾರೆ. ಇದನ್ನು ಬಿಜೆಪಿ ವಿರೋಧಿಸುತ್ತದೆ ಎಂದರು. ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿ, ರಾಗಿಗುಡ್ಡದ ಘಟನೆ ಇಡೀ ರಾಜ್ಯದ ಗಮನ ಸೆಳೆದಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆದುಕೊಂಡ ರೀತಿ ಸರಿಯಿಲ್ಲ. ಹಿಂದೂ ಸಮಾಜ ಶಾಂತಿಯಿಂದ ಇದೆ ಎಂದರೆ ಅದು ದೌರ್ಬಲ್ಯವಲ್ಲ. ಗೃಹಸಚಿವರು ಇದು ಸಣ್ಣ ಘಟನೆ ಎನ್ನುತ್ತಾರೆ. ಉಸ್ತುವಾರಿ ಸಚಿವರು ಖಡ್ಗವನ್ನೇ ಅಸಲಿಯಲ್ಲ ಎನ್ನುತ್ತಾರೆ. ಮುಸಲ್ಮಾನರ ತುಷ್ಟೀಕರಣಕ್ಕಾಗಿ ಹಿಂದೂಗಳ ತಾಳ್ಮೆಯನ್ನು ಪರೀಕ್ಷಿಸಬಾರದು ಎಂದು ಹೇಳಿದರು. ಈದ್‍ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಹಿಂದೂ ಅಮಾಯಕರ ಮೇಲೆ ದೌರ್ಜನ್ಯ ನಡೆದಿದೆ. ಘಟನೆಯಲ್ಲಿ ದೌರ್ಜನ್ಯ ಎಸಗಿದ ಅಲ್ಪಸಂಖ್ಯಾತರ ಬದಲಾಗಿ ಹಿಂದೂ ಯುವಕರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ತಪ್ಪಿತಸ್ಥರನ್ನು ಗಡಿಪಾರು ಮಾಡಿದರೆ ಸಾಲದು, ಕಾಂಗ್ರೆಸ್‌ ಮುಖಂಡರನ್ನೂ ಗಡಿಪಾರು ಮಾಡಬೇಕು ಎಂದು ಕಿಡಿಕಾರಿದರು. ಮುಸಲ್ಮಾನರಾಗಿ ಸುನ್ನತ್‌ ಮಾಡಿಸಿಕೊಳ್ಳಿ: ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಕಾಶ್ಮೀರ ಭಾರತದ ಮುಕುಟ ಎಂದು ಅದನ್ನು ಭಾರತದಲ್ಲಿ ಉಳಿಸಲು ಬಲಿದಾನ ಮಾಡಿ, ಜನಸಂಘ ಕಟ್ಟಿ ರಾಷ್ಟ್ರೀಯತೆ ಪರವಾಗಿ ಹೋರಾಟ ಮಾಡಿದ ಪಕ್ಷ ಬಿಜೆಪಿ. ಮುಸ್ಲಿಂ ತುಷ್ಟೀಕರಣ ನೀತಿಯನ್ನು ಕಾಂಗ್ರೆಸ್ ಮಾಡುತ್ತಾ ಬಂದಿದೆ. ಅದಕ್ಕಾಗಿಯೇ ಮೋದಿಯನ್ನು ದೇಶದ ಜನ ಮೂರನೇ ಬಾರಿಗೆ ಪ್ರಧಾನಿ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್‍ನವರಿಗೆ ಹಿಂದುತ್ವ ಬೇಡ ಎಂದಾದಲ್ಲಿ ಮುಸಲ್ಮಾನರಾಗಿ ಎಲ್ಲರೂ ಸುನ್ನತ್‌ ಮಾಡಿಸಿಕೊಳ್ಳಿ. ಪಾಕಿಸ್ತಾನ ಬೇಕು ಎನ್ನುವ ಮನಸ್ಥಿತಿಯಲ್ಲಿ ಕಾಂಗ್ರೆಸ್‌ನವರಿದ್ದಾರೆ. ಸರಣಿ ಕೊಲೆಗಳಾದರೂ ಕೂಡ ಹಿಂದೂಗಳು ಒಂದೇ ಒಂದು ಮುಸಲ್ಮಾನನ ಕೊಲೆ ಮಾಡಲಿಲ್ಲ ಎಂದರೆ ಅದು ಹಿಂದೂ ಸಹಿಷ್ಣುತೆ. ಪಿಎಫ್‍ಐ ಮತ್ತು ಎಸ್‍ಡಿಪಿಐ ರಾಗಿಗುಡ್ಡ ಗಲಭೆಯ ಹಿಂದೆ ಇದೆ ಎಂದು ಪೊಲೀಸ್ ಅಧಿಕಾರಿಗಳೇ ಹೇಳಿದ್ದಾರೆ. ಹಿಂದೂಗಳು ತಾಳ್ಮೆ ಕಳೆದುಕೊಳ್ಳದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು. ಮಾಜಿ ಸಚಿವ ಹಾಲಪ್ಪ ಮಾತನಾಡಿ, ಡಿಸಿ, ಎಸ್‌ಪಿ ಅವರಿಗೆ ಕೈಗೆ ಕೋವಿ ಮತ್ತು ಕೋಲನ್ನು ಕೊಟ್ಟಿರುವುದು ಸಂವಿಧಾನದ ರಕ್ಷಣೆಗಾಗಿ. ಸರ್ಕಾರದ ಕೈಗೊಂಬೆ ಆಗಲಿಕ್ಕಲ್ಲ. ನಿಮ್ಮ ಅಧಿಕಾರವನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ತಾಕೀತು ಮಾಡಿದರು. ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ, ವಿಧಾನ ಪರಿಷತ್‌ ಸದಸ್ಯೆ ಶಾಸಕಿ ಭಾರತಿ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್‌, ಪ್ರಮುಖರಾದ ಆರ್‌.ಕೆ.ಸಿದ್ರಾಮಣ್ಣ, ಗಿರೀಶ್‌ ಪಟೇಲ್‌, ಎಸ್‌.ದತ್ತಾತ್ರಿ, ಎಚ್‌.ಟಿ.ಬಳಿಗಾರ್‌ ಮತ್ತಿತರರು ಹಾಜರಿದ್ದರು. - - - -12ಎಸ್‌ಎಂಜಿಕೆಪಿ02: ಶಿವಮೊಗ್ಗ ಬಾಲರಾಜ ಅರಸ್‌ ರಸ್ತೆಯ ಮಥುರಾ ಪ್ಯಾರಡೇಸ್‌ ಎದುರು ಗುರುವಾರ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಧೋರಣೆ ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ