ಕನ್ನಡಪ್ರಭ ವಾರ್ತೆ ನಾಪೋಕ್ಲು
ಹೃದಯಾಘಾತದ ಚಿಕಿತ್ಸಾ ವಿಧಾನಗಳಲ್ಲಿ ಒಂದಾದ ಸಿಪಿಆರ್ ಚಿಕಿತ್ಸಾ ವಿಧಾನದ ಅರಿವು ಪ್ರತಿಯೊಬ್ಬರಲ್ಲಿ ಇರಬೇಕು ಎಂದು ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಅಭಿಪ್ರಾಯಪಟ್ಟಿದ್ದಾರೆ.ಸಂತ ಅನ್ನಮ್ಮ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಹಾಗೂ ಎನ್.ಎಸ್.ಎಸ್. ಘಟಕಗಳ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಿಪಿಆರ್ (ಹೃದಯ ಶ್ವಾಶಕೋಶದ ಪುನರ್ ಜೀವನ ಚಿಕಿತ್ಸಾ ಕ್ರಮ)ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಜೀವನ ಶೈಲಿಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು ಅದರ ಚಿಕಿತ್ಸಾ ವಿಧಾನದ ಬಗ್ಗೆ ಜಾಗೃತಿ ಮೂಡುವುದು ಅವಶ್ಯಕ. ಸಿಪಿಆರ್ ಸಹಾಯದಿಂದ ಹೃದಯಾಘಾತ ತಡೆಗಟ್ಟಲು ಸಾಧ್ಯ. ಉತ್ತಮ ದೈಹಿಕ ವ್ಯಾಯಾಮ ಪ್ರತಿಯೊಬ್ಬರಿಗೂ ಅಗತ್ಯ ಎಂದರು.ಮೈಸೂರು ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾದ್ಯಾಪಕ ಹಾಗೂ ವೈದ್ಯ ಡಾ. ಆದರ್ಶ್ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ನಿಯಮಿತ ಆಹಾರ, ವ್ಯಾಯಾಮ, ಯೋಗ, ದೈಹಿಕ ಚಟುವಟಿಕೆಗಳಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಹೃದಯಾಘಾತ ಸಂಭವಿಸುವ ಸಂದರ್ಭದಲ್ಲಿ ಸಿಪಿಆರ್ ಮಾಡುವುದರಿಂದ ವ್ಯಕ್ತಿಯನ್ನು ಬದುಕಿಸಲು ಸಾಧ್ಯ. ಸಿಪಿಆರ್‌ನ ಜ್ಞಾನ ಪ್ರತಿಯೊಬ್ಬರಿಗೂ ಅತ್ಯವಶ್ಯಕ ಎಂದರು.
ಬಳಿಕ ಸಿಪಿಆರ್ ಚಿಕಿತ್ಸೆ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ ನಡೆಯಿತು. ಮೈಸೂರು ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾದ್ಯಾಪಕ ಹಾಗೂ ವೈದ್ಯ ಡಾ. ಆದರ್ಶ್, ಡಾ. ನಯನ್ ಡಾ. ಅರ್ಪಿತಾ ತರಬೇತಿ ನೀಡಿದರು. ಚಿಕಿತ್ಸಾ ಸಮಯ, ಅನುಸರಿಸಬೇಕಾದ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.ಬೆಂಗಳೂರಿನ ಕ್ಯಾಡರ್ ಇಂಟರ್ನ್ಯಾಷನಲ್ ಮೆಡಿಕಲ್ ಕಾಲೇಜುವಿನ ವಿದ್ಯಾರ್ಥಿಗಳು ಹಾಗೂ ಎಕ್ಮೊ ಸ್ಪೆಷಲಿಸ್ಟ್ ಡಾ. ನಿರಂಜನ್ ವಿದ್ಯಾರ್ಥಿಗಳಿಗೆ ಸಿಪಿಆರ್ ಬಗ್ಗೆ ತರಬೇತಿ ನೀಡಿದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ, ಎನ್.ಎಸ್.ಎಸ್. ಅಧಿಕಾರಿ ಬಿ. ಎನ್. ಶಾಂತಿಭೂಷಣ್, ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ವಿಲೀನ ಗೋನ್ಸಾಲ್ವೇಸ್ ಮತ್ತಿತರರಿದ್ದರು.