ಮಂಜುನಾಥ್ ಟಿ ಎನ್
ಕನ್ನಡಪ್ರಭವಾರ್ತೆ ವಿರಾಜಪೇಟೆವಿರಾಜಪೇಟೆಯ ಸರ್ಕಾರಿ ಬಸ್ ನಿಲ್ದಾಣದ ಬಳಿಯ ಇಂದಿರಾ ಕ್ಯಾಂಟೀನ್ ಸತತ ಮೂರು ತಿಂಗಳಿಂದ ಮುಚ್ಚಿದೆ. ಹಸಿದು ಬಂದವರು ಬಾಗಿಲು ಮುಚ್ಚಿದ ಕ್ಯಾಂಟೀನ್ ನೋಡಿ ಹಿಂತಿರುಗುತ್ತಿದ್ದಾರೆ.ವಿರಾಜಪೇಟೆಯ ಸರ್ಕಾರಿ ಬಸ್ ನಿಲ್ದಾಣದ ಬಳಿ ಒಂದು ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗಿತ್ತು. ಆರಂಭದಲ್ಲಿ ಉತ್ತಮ ಸೇವೆಯೊಂದಿಗೆ ಜನಮನ್ನಣೆ ಪಡೆದಿತ್ತು. ಆದರೆ ಈಗ ಇದರ ಪರಿಸ್ಥಿತಿಯೇ ಬೇರೆ. ಸತತ ಮೂರು ತಿಂಗಳಿಂದ ಈ ಕ್ಯಾಂಟೀನ್ ನ ಬಾಗಿಲು ಮುಚ್ಚಿದೆ. ಇಲ್ಲಿಗೆ ಹಸಿದು ಬರುವ ಶ್ರಮಿಕ ವರ್ಗ ಹಾಗೂ ಬಡವರ್ಗದವರು ಬಾಗಿಲು ಮುಚ್ಚಿರುವ ದೃಶ್ಯವನ್ನು ನೋಡಿ ಬೇಸರದಿಂದ ಸಪ್ಪೆ ಮೋರೆಯನ್ನು ಹಾಕಿ ಹಿಂತಿರುಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ .ಸುಮಾರು 30 ರಿಂದ 50 ಜನರು ದಿನವೂ ಇದೇ ಕ್ಯಾಂಟೀನನ್ನು ಅವಲಂಭಿಸಿದ್ದರು. ಸಣ್ಣಪುಟ್ಟ ಕೆಲಸವನ್ನು ನಿರ್ವಹಿಸುವ ಕಾರ್ಮಿಕ ವರ್ಗದವರು ಕಡಿಮೆ ಬೆಲೆಗೆ ಆಹಾರ ಸಿಗುತ್ತದೆ ಎಂದು ಇಲ್ಲಿ ಆಹಾರ ಸೇವಿಸುತ್ತಿದ್ದಾರೆ. ಪ್ರಯಾಣಿಕರು, ಬಸ್ ಚಾಲಕ, ನಿರ್ವಾಹಕರು ಸಮಯದ ಅಭಾವ ಹಾಗೂ ಕಡಿಮೆ ಬೆಲೆ ಕಾರಣ ಮೊದಲು ಈ ಇಂದಿರಾ ಕ್ಯಾಂಟಿನ್ ಕಡೆ ನೋಡುತ್ತಿದ್ದರು.
ಯಾಕೆ ಮುಚ್ಚಿದೆ? ಇಂದಿರಾ ಕ್ಯಾಂಟಿನ್ ದೆಹಲಿ ಮೂಲದ ವ್ಯಕ್ತಿ ಗುತ್ತಿಗೆ ಪಡೆದಿದ್ದಾರೆ. ವಿರಾಜಪೇಟೆ ನಿವಾಸಿಯೋರ್ವರು ವಿರಾಜಪೇಟೆ ಹಾಗೂ ಮಡಿಕೇರಿಯ ಎರಡು ಇಂದಿರಾ ಕ್ಯಾಂಟಿನ್ ಸಬ್ ಲೀಸ್ ಗೆ ಪಡೆದಿದ್ದಾರೆ. ಸರ್ಕಾರದಿಂದ ಗುತ್ತಿಗೆದಾರರಿಗೆ ಸೇರಬೇಕಾದ ಎಲ್ಲಾ ಬಾಕಿ ಹಣ ಸಂದಾಯವಾಗಿದೆ. ಆದರೆ ಸಬ್‌ಲೀಸ್ ಪಡೆದಿರುವವರಿಗೆ ಹಣ ದೊರೆಯದ ಕಾರಣ ಎರಡು ಇಂದಿರಾ ಕ್ಯಾಂಟಿನ್ ಗಳನ್ನು ಮುಚ್ಚಲಾಗಿದೆ.ಗುಣಮಟ್ಟ ರುಚಿ ಇಲ್ಲದ ಆಹಾರ: ವಿರಾಜಪೇಟೆಯಿಂದ ಕ್ಯಾಂಟೀನ್ ಬಗ್ಗೆ ಜನಸಾಮಾನ್ಯದಲ್ಲಿ ವಿಚಾರಿಸಿದಾಗ ಹೆಚ್ಚಿನ ಅವರಿಂದ ಕೇಳಿ ಬಂದ ಉತ್ತರ, ಈ ಕ್ಯಾಂಟೀನ್ ಕಡಿಮೆ ಬೆಲೆಗೆ ಆಹಾರ ಒದಗಿಸುವುದನ್ನು ಹೊರತುಪಡಿಸಿದರೆ ಇಲ್ಲಿ ದೊರೆಯುವ ಆಹಾರ ರುಚಿಕರವಾಗಿ ಇಲ್ಲ. ಹಾಗೆಯೇ ಆಹಾರದ ಗುಣಮಟ್ಟವು ಕೂಡ ಉತ್ತಮವಾಗಿ ಇಲ್ಲ. ಕೆಲವರಂತು ಆಹಾರ ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಕಾರಣಕ್ಕಾಗಿ ಇಲ್ಲಿ ಅನಿವಾರ್ಯವಾಗಿ ಆಹಾರ ಸೇವನೆ ಮಾಡುತ್ತಿದ್ದರು. ಸಂಬಂಧಪಟ್ಟವರು ಇದರ ಕಡೆ ಗಮನ ಹರಿಸಿ ಇನ್ನು ಮುಂದಾದರು ಈ ಕ್ಯಾಂಟೀನ್ ನಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ ಶುಚಿಕರ ಹಾಗೂ ರುಚಿಕರವಾದ ಆಹಾರ ತಯಾರಾಗುವಂತೆ ನೋಡಿಕೊಳ್ಳಬೇಕು. ಕ್ಯಾಂಟೀನ್ ಒಳಗೂ ಹೊರಗೂ ಆಹಾರ ಸೇವನೆಗೆ ಸೂಕ್ತವಾದ ವಾತಾವರಣ ನಿರ್ಮಾಣ ಮಾಡಬೇಕಾಗಿದೆ.ಕ್ಯಾಂಟೀನ್ ಆವರಣದ ಒಳಗೆ, ಸುತ್ತ ಕಸ , ಕಾಡು:
ಇಂದಿರಾ ಕ್ಯಾಂಟೀನ್ ಹೊರಾಂಗಣದಲ್ಲಿ ಕಸ, ಪ್ಲಾಸ್ಟಿಕ್ , ಮದ್ಯದ ಪಾಕೆಟ್ ಗಳು ಕಾಣಿಸಿದ್ದರೆ. ಇನ್ನೊಂದು ಭಾಗದಲ್ಲಿ ಗಿಡಗಂಟೆಗಳು ಬಳ್ಳಿಗಳು ಕಟ್ಟಡವನ್ನು ಆಶ್ರಯಿಸಿ ಬೆಳೆದು ನಿಂತಿದೆ. ಕುಡಿಯುವ ನೀರಿನ ಟ್ಯಾಂಕ್ ಬಳಿ ಹಾಗೂ ಕೈ ತೊಳೆಯುವ ಸ್ಥಳಗಳಲ್ಲಿ ದಟ್ಟವಾಗಿ ಪಾಚಿ ಕಟ್ಟಿದ್ದು ಅಶುಚಿತ್ವ ತಾಂಡವ ಆಡುವಂತಿದೆ.ಕ್ಯಾಂಟೀನ್ ಸ್ವಚ್ಛಗೊಳಿಸಿ, ಸರ್ಕಾರದಿಂದ ಸಾಧ್ಯವಾಗದಿದ್ದರೆ ಯಾವುದಾದರೂ ಸಂಘ ಸಂಸ್ಥೆಗಳಿಗಾದರೂ ನೀಡಿ ಬಡವರ ಹಸಿವು ನೀಗಿಸುವ ಕಾರ್ಯವಾಗಬೇಕು. ಅದನ್ನು ಹೊರತುಪಡಿಸಿ ಕ್ಯಾಂಟೀನ್ ನಿರ್ಮಾಣ ಮಾಡಿ ಬಾಗಿಲನ್ನು ಹಾಕಿ ಹಸಿದು ಬರುವ ಬಡವರ ಹೊಟ್ಟೆಯ ಮೇಲೆ ಹೊಡೆಯುವಂಥದ್ದು ಸರಿಯಲ್ಲ. ಈ ಕ್ಯಾಂಟೀನ್ ನಿರ್ಮಾಣವಾಗಿರುವುದು ಬಡವರ ಹಸಿವನ್ನು ನೀಗಿಸುವ ಉದ್ದೇಶದಿಂದ. ಆದ್ದರಿಂದ ಈ ಕ್ಯಾಂಟೀನ್ ನಲ್ಲಿ ಆದಷ್ಟು ಬೇಗ ಆರಂಭವಾಗಿ ಬಡವರಿಗೆ ಹಾಗೂ ಹಸಿದು ಬಂದವರಿಗೆ ಉತ್ತಮ ಗುಣಮಟ್ಟದ ಆಹಾರ ಒದಗಬೇಕು. ಇಂದಿರಾ ಕ್ಯಾಂಟೀನ್ ಹೆಸರಿನಲ್ಲಿ ಬಡವರಿಗೆ, ಹಸಿದವರಿಗೆ ಕಳಪೆ ಗುಣಮಟ್ಟದ ಆಹಾರ ನೀಡಿ ಅವರ ಆರೋಗ್ಯದೊಂದಿಗೆ ಚೆಲ್ಲಾಟ ಆಡಬಾರದು ಎಂದು ಜನಸಾಮಾನ್ಯರಲ್ಲಿ ಕೇಳಿ ಬರುತ್ತಿರುವ ಮಾತು.ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ಆಗುತ್ತಿದೆ. ಸಾಮಾಜಿಕ ಕಾರ್ಯಕರ್ತ ವಿ. ಟಿ. ಮದನ್, ಇದಕ್ಕೆ ಪ್ರಶಸ್ತಿ ಕೂಡ ಲಭಿಸಿದೆ ಎಂದು ಕೇಳಿರುವೆ. ಯಾವ ಉದ್ದೇಶಕ್ಕೆ ಯಾರು ಪ್ರಶಸ್ತಿ ಕೊಟ್ಟರು ಎಂಬ ಮಾಹಿತಿ ಇಲ್ಲಿಯವರೆಗೆ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಈ ಕ್ಯಾಂಟಿನ್ ಅನ್ನು ಯಾವುದಾದರೂ ಸಂಘ ಸಂಸ್ಥೆಗಳಿಗೆ ಅಥವಾ ದೇವಾಲಯಗಳಿಗೆ ನೀಡಿದ್ದಲ್ಲಿ ಒಂದಷ್ಟು ಬಡವರ ಹಸಿವಾದರೂ ನೀಗುತ್ತಿತ್ತು ಎನ್ನುತ್ತಾರೆ.
................................ಇದರ ಬಗ್ಗೆ ಮಾಹಿತಿ ದೊರಕಿದೆ. ಗುತ್ತಿಗೆದಾರ, ಸಬ್‌ಲೀಸ್‌ಗೆ ಪಡೆದವರ ನಡುವಿನ ಸಮಸ್ಯೆಯಿಂದ ಗೊಂದಲ ಉಂಟಾಗಿದೆ. ಮುಂದಿನ ಒಂದು ವಾರದಲ್ಲಿ ಈ ಸಮಸ್ಯೆ ಬಗೆ ಹರಿಸಿ ಇಂದಿರಾ ಕ್ಯಾಂಟಿನ್ ಅನ್ನು ಪುನ: ಆರಂಭಿಸಲಾಗುವುದು ಎಂದು ತಿಳಿಸಿದರು.
। ಎ ಎಸ್ ಪೊನ್ನಣ್ಣ, ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು.---------------------------------------------
ಶಾಸಕರು ಮುತುವರ್ಜಿ ವಹಿಸಿ ಇಂದಿರಾ ಕ್ಯಾಂಟೀನ್ ಪುನರಾರಂಭಿಸಬೇಕು. ಇದರಿಂದ ಬಳಲಿದ ಕಾರ್ಮಿಕರಿಗೆ ಆಹಾರ ಲಭಿಸುತ್ತದೆ. ಹಾಗೆಯೇ ರಾಜ್ಯದ ಕೆಲವೆಡೆ ಇಂದಿರಾ ಕ್ಯಾಂಟಿನ್ ಮುಚ್ಚಿದ್ದು ಅದನ್ನು ತೆರೆಯಲು ಪ್ರಯತ್ನಿಸಬೇಕು.-ಕುಭೆಯಂಡ ಸುರೇಶ್ ದೇವಯ್ಯ ಅಧ್ಯಕ್ಷರು ಕೊಡಗು ಖಾಸಗಿ ಬಸ್ಸು ಕಾರ್ಮಿಕರ ಸಂಘ