ಪೊನ್ನಣ್ಣ ಅವರ 50 ನೇ ಜನ್ಮ ದಿನದ ಪ್ರಯುಕ್ತ ಭಾಗಮಂಡಲದ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಪ್ರಾರ್ಥಿಸಿದರು. ಬಳಿಕ ಮಹಾ ಗಣಪತಿ ದೇವಾಲಯದಲ್ಲಿ ಪೂಜೆ, ನಂತರ ಶ್ರೀಭಗಂಡೇಶ್ವರ ದೇವಾಲಯದ ಆವರಣದಲ್ಲಿ ವಿಶೇಷ ಪ್ರಾರ್ಥನೆ, ನಂತರ ಶ್ರೀಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಶ್ರೀಮಹಾವಿಷ್ಣು ದೇವರಲ್ಲಿ ಪೂಜೆ ಸಲ್ಲಿಸಿದ ನಂತರ ಸುಬ್ರಮಣ್ಯ ದೇವರಲ್ಲಿ ಪ್ರಾರ್ಥಿಸಿ ಕಲ್ಲುಸಕ್ಕರೆಯ ತುಲಾಭಾರ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿ ಹಾಗೂ ಪವಿತ್ರ ಕ್ಷೇತ್ರ ಶ್ರೀಭಗಂಡೇಶ್ವರ ದೇವಾಲಯಕ್ಕೆ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮತ್ತು ಕುಟುಂಬದವರು ಮಂಗಳವಾರ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಪೊನ್ನಣ್ಣ ಅವರ 50 ನೇ ಜನ್ಮ ದಿನದ ಪ್ರಯುಕ್ತ ಭಾಗಮಂಡಲದ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಪ್ರಾರ್ಥಿಸಿದರು. ಬಳಿಕ ಮಹಾ ಗಣಪತಿ ದೇವಾಲಯದಲ್ಲಿ ಪೂಜೆ, ನಂತರ ಶ್ರೀಭಗಂಡೇಶ್ವರ ದೇವಾಲಯದ ಆವರಣದಲ್ಲಿ ವಿಶೇಷ ಪ್ರಾರ್ಥನೆ, ನಂತರ ಶ್ರೀಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಶ್ರೀಮಹಾವಿಷ್ಣು ದೇವರಲ್ಲಿ ಪೂಜೆ ಸಲ್ಲಿಸಿದ ನಂತರ ಸುಬ್ರಮಣ್ಯ ದೇವರಲ್ಲಿ ಪ್ರಾರ್ಥಿಸಿ ಕಲ್ಲುಸಕ್ಕರೆಯ ತುಲಾಭಾರ ನೆರವೇರಿಸಿದರು.
ಈ ಸಂದರ್ಭ ದೇವಂಗೋಡಿ ಹರ್ಷ, ಪ್ರಮುಖರಾದ ನೆರವಂಡ ಉಮೇಶ್ ಮಾತನಾಡಿದರು.
ಅರ್ಚಕ ಹರೀಶ್ ಭಟ್ ವಿಶೇಷ ಪೂಜೆ ಕಾರ್ಯ ನೆರವೇರಿಸಿದರು. ತಕ್ಕ ಮುಖ್ಯಸ್ಥ ಬೊಳ್ಳಡ್ಕ ಅಪ್ಪಾಜಿ, ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಇಸ್ಮಾಯಿಲ್, ಕರಿಕೆ ರಾಮನಾಥ್, ಲವಚಿಣ್ಣಪ್ಪ ಮತ್ತಿತರರಿದ್ದರು.
ಬಳಿಕ ತಲಕಾವೇರಿಗೆ ತೆರಳಿ ಸಂಕಲ್ಪ ಪೂಜೆ ಮಾಡಿ, ತುಲಾಭಾರ ನೆರವೇರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ ಹಾಜರಿದ್ದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಎ.ಎಸ್.ಪೊನ್ನಣ್ಣ, ಜನ್ಮ ದಿನದ ಪ್ರಯುಕ್ತ ಲೋಕ ಕಲ್ಯಾಣಕ್ಕಾಗಿ ಕುಟುಂಬ ಸದಸ್ಯರ ಜತೆಗೂಡಿ ತಾಯಿ ಕಾವೇರಿ ಮಾತೆ ಹಾಗೂ ಶ್ರೀ ಭಗಂಡೇಶ್ವರ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.
ನಾಡಿನಲ್ಲಿ ಉತ್ತಮ ಮಳೆ ಆಗುತ್ತಿದ್ದು, ಎಲ್ಲರಲ್ಲಿ ಸಂತಸ, ಸಮೃದ್ಧಿ ತರುವಂತಾಗಲಿ ಎಂದು ಪ್ರಾರ್ಥಿಸಲಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದ ಮನೆ, ರಸ್ತೆ, ಸೇತುವೆ ಹಾನಿ ಬಗ್ಗೆ ಮುಖ್ಯಮಂತ್ರಿ ಅವರು, ಲೋಕೋಪಯೋಗಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಲ್ಲಿ ಗಮನ ಸೆಳೆಯಲಾಗಿದ್ದು, ಹೆಚ್ಚಿನ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿದೆ ಎಂದರು.
ಭಾಗಮಂಡಲ ಬಳಿಯ ಚೇರಂಬಾಣೆ ವ್ಯಾಪ್ತಿಯಲ್ಲಿನ ಸೇತುವೆ ಸರಿಪಡಿಸಲಾಗುವುದು, ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆ ಹೆಚ್ಚಿಸುವಲ್ಲಿ 66/11 ಸಾಮರ್ಥ್ಯದ 7 ವಿದ್ಯುತ್ ಉಪ ಘಟಕ ನಿರ್ಮಾಣ ಮಾಡಲು ಮುಂದಾಗಲಾಗಿತ್ತು, ಆದರೆ ಭವಿಷ್ಯದಲ್ಲಿ ಮತ್ತಷ್ಟು ವಿದ್ಯುತ್ ಬೇಡಿಕೆ ಹೆಚ್ಚಾಗುವುದರಿಂದ ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಉಪ ಘಟಕ ನಿರ್ಮಾಣ ಮಾಡಲಾಗುವುದು, ಆ ನಿಟ್ಟಿನಲ್ಲಿ ಪ್ರಯತ್ನಿಸಲಾಗಿದೆ ಎಂದರು.
ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ವಿವಿಧ ಕಾರ್ಯಕ್ರಮ ಆಯೋಜಿಸಿದ್ದಾರೆ. ಆ ನಿಟ್ಟಿನಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 59 ಗ್ರಾ.ಪಂ.ಗಳಲ್ಲಿ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ, ಗೋಣಿಕೊಪ್ಪದ ಕೀರೆಹೋಳೆ ಬದಿ ಗಿಡ ನೇಡುವ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ಮಾಹಿತಿ ನೀಡಿದರು.
ವಿದ್ಯಾರ್ಥಿಗಳ ಜೊತೆ ಹುಟ್ಟುಹಬ್ಬ: ಬಳಿಕ ಭಾಗಮಂಡಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳ ಜೊತೆಗೂಡಿ ಕೇಕ್ ವಿತರಿಸುವ ಮೂಲಕ ಜನ್ಮ ದಿನ ಆಚರಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಮಕ್ಕಳಿಗೆ ಪೆನ್ನು, ಪೆನ್ಸಿಲ್ ವಿತರಿಸಲಾಯಿತು.
ಬಳಿಕ ಭಾಗಮಂಡಲದ ಮಾರುಕಟ್ಟೆ ಆವರಣದಲ್ಲಿ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿದರು. ಅಲ್ಲಿನ ಅಂಗಡಿಗೆ ತೆರಳಿ ಸ್ವಚ್ಚತೆ ಬಗ್ಗೆ ಅರಿವು ಮೂಡಿದರು.
ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಇಸ್ಮಾಯಿಲ್, ಕರಿಕೆ ರಾಮನಾಥ್, ಲವಚಿಣ್ಣಪ್ಪ, ಕೋಳಿಬೈಲು ವೆಂಕಟೇಶ್, ಸುನಿಲ್ ಪತ್ರವೋ, ಇಸ್ಮಾಯಿಲ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ರಂಗಧಾಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಭಾಗಮಂಡಲ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಪ್ರಾಂಶುಪಾಲ ಲೋಕೇಶ್, ಎಸ್‌ಡಿಎಂಸಿ ಅಧ್ಯಕ್ಷ ಉಸ್ಮಾನ್, ಹೊಸೂರು ಸೂರಜ್ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.