ವಿರಾಜಪೇಟೆ, ಪೊನ್ನಂಪೇಟೆ ತಾಲೂಕಿನ ಟಾಸ್ಕ್ ಪೋರ್ಸ್ ಸಮಿತಿ ಸಭೆ

KannadaprabhaNewsNetwork |  
Published : Jun 03, 2025, 12:40 AM IST
ಚಿತ್ರ :  2ಎಂಡಿಕೆ1 : ಸಭೆಯಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿದರು. | Kannada Prabha

ಸಾರಾಂಶ

ಈಗಾಗಲೇ ಮುಂಗಾರು ಆರಂಭವಾಗಿದ್ದು ಎಲ್ಲಾ ಹಂತದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಶಾಸಕ ಎ.ಎಸ್‌. ಪೊನ್ನಣ್ಣ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಈಗಾಗಲೇ ಮುಂಗಾರು ಆರಂಭವಾಗಿದ್ದು, ಎಲ್ಲಾ ಹಂತದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಸೂಚಿಸಿದ್ದಾರೆ.

ಪೊನ್ನಂಪೇಟೆಯ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಸೋಮವಾರ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ ಟಾಸ್ಕ್‌ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೆಚ್ಚಿನ ಮಳೆಯಿಂದಾಗಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಉದಾರವಾಗಿ ವರದಿ ನೀಡಿ ಮನೆ ಪರಿಹಾರ ಹಣ ಬಿಡುಗಡೆಗೆ ಕ್ರಮವಹಿಸುವಂತೆ ಕಂದಾಯ, ಪಂಚಾಯತ್ ರಾಜ್, ಲೋಕೋಪಯೋಗಿ ಅಧಿಕಾರಿಗಳಿಗೆ ಶಾಸಕರು ನಿರ್ದೇಶನ ನೀಡಿದರು. ಅಧಿಕಾರಿಗಳು ಉದಾರತೆ ತೋರಬೇಕು:

ಸಂಪೂರ್ಣ ಮನೆ ಹಾನಿಯಾದ ಕುಟುಂಬಗಳಿಗೆ ಸರ್ಕಾರ ನೀಡುವುದು 1.20 ಲಕ್ಷ ರು. ಮಾತ್ರ. ಆದ್ದರಿಂದ ಮನೆ ಹಾನಿ ವರದಿ ನೀಡುವಾಗ ಅಧಿಕಾರಿಗಳು ಉದಾರತೆ ತೋರಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸರ್ಕಾರದ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು. ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಪ್ರತೀ ಗ್ರಾಮ ಪಂಚಾಯಿತಿಗೆ 50 ರಿಂದ 75 ಸಾವಿರ ರು. ಬಿಡುಗಡೆಗೆ ಜಿಲ್ಲಾಧಿಕಾರಿ ಜೊತೆ ಚರ್ಚಿಸಲಾಗುವುದು. ಪ್ರವಾಹ ಪೀಡಿತ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾವಹಿಸಬೇಕು ಎಂದು ನಿರ್ದೇಶನ ನೀಡಿದರು.

ಮುಂದಿನ ದಿನಗಳಲ್ಲಿ ವ್ಯಾಪಕ ಮಳೆಯಾಗುವುದರಿಂದ ಕಂದಾಯ, ಅರಣ್ಯ, ಪೊಲೀಸ್, ಪಂಚಾಯತ್ ರಾಜ್, ಸೆಸ್ಕ್, ಗೃಹರಕ್ಷಕ ದಳ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಎಂಜಿನಿಯರು ಸೇರಿದಂತೆ ಎಲ್ಲ ಹಂತದ ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕರು ಸೂಚಿಸಿದರು. ಸಮರ್ಪಕವಾಗಿ ನಿರ್ವಹಿಸಬೇಕು:

ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕಸ ವಿಲೇವಾರಿಗೆ ಜಾಗ ಕಾಯ್ದಿರಿಸಬೇಕು. ಜಾಗ ಇಲ್ಲದಿದ್ದಲ್ಲಿ ಕಂದಾಯ ಇಲಾಖೆಗೆ ಮನವಿ ಮಾಡಬೇಕು. ಅದರ ಪ್ರತಿಯನ್ನು ಕಳುಹಿಸಿಕೊಡುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಯಾವುದೇ ಕಾರಣಕ್ಕೂ ರಸ್ತೆ ಬದಿ ಕಸ ಬಿಸಾಡಬಾರದು. ರಸ್ತೆ ಬದಿ ಕಸ ಬಿಸಾಡುವವರಿಗೆ ದಂಡ ವಿಧಿಸುವಂತೆ ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು. ಕುಂದುಕೊರತೆ ಆಲಿಸಬೇಕು:

ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರತಿ ಹಾಡಿಗೂ ಭೇಟಿ ನೀಡಿ ಆದಿವಾಸಿ ಜನರ ಕುಂದುಕೊರತೆ ಆಲಿಸಬೇಕು. ಗುಣಮಟ್ಟದ ಪೌಷ್ಟಿಕ ಆಹಾರ ವಿತರಿಸಬೇಕು. ಮಳೆಗಾಲದಲ್ಲಿ ಆದಿವಾಸಿ ಜನರು ತುಂಬಾ ಕಷ್ಟದ ಜೀವನ ನಡೆಸುತ್ತಾರೆ. ಆದ್ದರಿಂದ ಆದಿವಾಸಿ ಜನರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕರು ನಿರ್ದೇಶನ ನೀಡಿದರು. ಆದಿವಾಸಿ ಜನರು ವಾಸಿಸುವ ಬಸವೇಶ್ವರ ಕಾಲೋನಿಯಲ್ಲಿ ಹೆಚ್ಚಿನ ಮಳೆಯಿಂದ ರಸ್ತೆ ಸಂಪರ್ಕ ವ್ಯತ್ಯಯವಾಗಿ ತೊಂದರೆಗೆ ಸಿಲುಕಿದ್ದರು. ಇಂತಹ ಕಡೆಗಳಿಗೆ ಭೇಟಿ ನೀಡಿ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಿ ಸರಿಪಡಿಸುವಂತಾಗಬೇಕು. ಎಂದು ಶಾಸಕರು ಸೂಚಿಸಿದರು.

ಮೇ ತಿಂಗಳಲ್ಲಿ ದಾಖಲೆಯ ಮಳೆ: ಈ ಬಾರಿ ಮೇ ತಿಂಗಳಲ್ಲಿ ದಾಖಲೆಯ ಮಳೆಯಾಗಿದೆ. ವ್ಯಾಪಕ ಮಳೆ ಹಾಗೂ ಬಿರುಗಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರ ವಹಿಸಬೇಕು. ರಸ್ತೆ ಬದಿ ಹಳೆ ಹಾಗೂ ಶೀತಲವಾಗಿರುವ ಮರಗಳನ್ನು ತೆರವುಗೊಳಿಸುವಂತಾಗಬೇಕು ಎಂದು ನಿರ್ದೇಶನ ನೀಡಿದರು. ವಿದ್ಯುತ್ ಕಂಬಗಳ ಬಗ್ಗೆಯೂ ಸಹ ಎಚ್ಚರವಹಿಸಬೇಕು. ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಾರದು ಎಂದರು. ಕಾಡಾನೆ ಹಾವಳಿ ತಡೆಯಬೇಕು. ಕಾಡಂಚಿನ ಪ್ರದೇಶಗಳಲ್ಲಿ ಯಾರೂ ಸಹ ಜೀವ ಭಯದಿಂದ ಬದುಕಬಾರದು. ನಾಗರಿಕರ ರಕ್ಷಣೆ ಆಗಬೇಕು ಎಂದರು. ಪ್ರವಾಹ ಪೀಡಿತ ಹಾಗೂ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸ್ಥಳಾಂತರಕ್ಕೆ ಕ್ರಮವಹಿಸಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ನಿರ್ದೇಶನ ನೀಡಿದರು. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಕುಗ್ರಾಮಗಳಿಗೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ನಿರ್ದೇಶನ ನೀಡಿದರು. ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳದಂತೆ ಗಮನಹರಿಸಬೇಕು:

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಳೆಗಾಲದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳದಂತೆ ಗಮನಹರಿಸಬೇಕು. ಈ ಬಗ್ಗೆ ಅರಿವು ಮೂಡಿಸುವಂತೆ ನಿರ್ದೇಶನ ನೀಡಿದರು.ಶಾಲೆಗಳು ಆರಂಭವಾಗಿದ್ದು, ಅಂಗನವಾಡಿ ಮತ್ತು ಶಾಲಾ-ಕಾಲೇಜು ಕಟ್ಟಡಗಳು ಸುಸ್ಥಿತಿಯಲ್ಲಿವೆಯೇ ಎಂದು ಗಮನಹರಿಸಬೇಕು. ಶೀತಲದಿಂದ ಕೂಡಿರುವ ಕಟ್ಟಡಗಳು ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಎ.ಎಸ್.ಪೊನ್ನಣ್ಣ ಅವರು ನಿರ್ದೇಶನ ನೀಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಅವರು ಮಾತನಾಡಿ ಈ ಬಾರಿ 28 ಹಳೇ ಮರಗಳನ್ನು ತೆರವುಗೊಳಿಸಲಾಗಿದೆ. ಹಳೇ ಹಾಗೂ ಶೀತಲದಿಂದ ಕೂಡಿರುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಆಕ್ಷೇಪ ಇರುವುದಿಲ್ಲ ಎಂದರು. ಪೊನ್ನಂಪೇಟೆ ತಹಸೀಲ್ದಾರ್ ಮೋಹನ್ ಕುಮಾರ್ ಅವರು ಮಾತನಾಡಿ ಪೊನ್ನಂಪೇಟೆ ತಾಲೂಕಿನಲ್ಲಿ 15 ಮನೆಗಳು ಹಾನಿಯಾಗಿದ್ದು, 12 ಭಾಗಶಃ, 3 ಮನೆಗಳು ಸಂಪೂರ್ಣ ಹಾನಿಯಾಗಿದೆ. ಹೋಬಳಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು. ವಿರಾಜಪೇಟೆ ತಹಸೀಲ್ದಾರ್ ಅನಂತಶಂಕರ ಅವರು ಮಾತನಾಡಿ, ವಿರಾಜಪೇಟೆ ತಾಲೂಕಿನ 14 ಮನೆಗಳು ಹಾನಿಯಾಗಿದ್ದು, 13 ಮನೆಗಳು ಭಾಗಶಃ, 01 ಮನೆ ಸಂಪೂರ್ಣ ಹಾನಿಯಾಗಿದೆ. ಮರ ಬಿದ್ದು ಇಬ್ಬರ ಪ್ರಾಣ ಹಾನಿಯಾಗಿದೆ ಎಂದು ವಿವರಿಸಿದರು. ಪರಿಹಾರ ವಿತರಿಸಲಾಗಿದೆ ಎಂದರು. ಸೆಸ್ಕ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುರೇಶ್ ಹಾಗೂ ಸತೀಶ್ ಅವರು ಮಾಹಿತಿ ನೀಡಿ ವಿರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ತಲಾ 300 ಕ್ಕೂ ಹೆಚ್ಚು ಕಂಬಗಳು ಹಾನಿಯಾಗಿದ್ದು, ಅದನ್ನು ಸರಿಪಡಿಸಲಾಗಿದೆ. ಹಾತೂರು, ತೆರಾಲು, ಹೊಸ್ಕೇರಿ, ಬಿ.ಶೆಟ್ಟಿಗೇರಿ ಮತ್ತಿತರ ಕಡೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಕೂಡಲೇ ಸರಿಪಡಿಸಲಾಗುವುದು ಎಂದರು. ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಯತಿರಾಜು ಅವರು ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇದರಿಂದ ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡದಂತೆ ಗಮನಹರಿಸಬಹುದು. ಆರೋಗ್ಯ ಇಲಾಖೆಯಿಂದ ಲಾರ್ವಾ ಸರ್ವೆ ಮಾಡಲಾಗುತ್ತದೆ ಎಂದರು. ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಭಾಸ್ಕರ್ ಅವರು ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.ವಿರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ನಾಚಪ್ಪ ಅವರು ನೆಹರು ನಗರ, ಅಯ್ಯಪ್ಪ ಬೆಟ್ಟ, ಮಲೆತಿರಿಕೆ ಬೆಟ್ಟದ ಸುಮಾರು 67 ಕುಟುಂಬಗಳಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು. ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ ಎರಡು ಗ್ರಾ.ಪಂ.ಗೆ ಒಬ್ಬರಂತೆ ಪಿಡಿಒಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಪಿಡಿಒಗಳ ಸಂಖ್ಯೆ ಮತ್ತಿತರ ಬಗ್ಗೆ ಮಾಹಿತಿ ಪಡೆದು ಅಗತ್ಯ ಕ್ರಮ ವಹಿಸಲಾಗುವುದು ಎಂದರು. ತಾ.ಪಂ.ಇಒ ಅಪ್ಪಣ್ಣ, ಸಮಗ್ರ ಗಿರಿಜನ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ತೇಜರಾಜ, ಸ್ವಚ್ಛ ಭಾರತ ಮಿಷನ್ ಯೋಜನೆ ಸಂಬಂಧಿಸಿದಂತೆ ಸೂರಜ್, ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಬಿಂದು, ಲೋಕೋಪಯೋಗಿ ಇಲಾಖೆಯ ಎಇಇ ಲಿಂಗರಾಜು ಅವರು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷರಾದ ಪ್ರಶಾಂತ್, ಇತರರು ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್